Advertisement

ಜ.12ರಿಂದ 7ದಿನ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

06:01 AM Jan 06, 2019 | Team Udayavani |

ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯು ರಂಗಾಯಣವು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಂಡಿದೆ. ಜ.12ರಿಂದ 18ರವರೆಗೆ 18ನೇ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.

Advertisement

ಈ ಬಾರಿ ಲಿಂಗ ಸಮಾನತೆಯ ಆಶಯದೊಂದಿಗೆ ನಾಟಕೋತ್ಸವ ನಡೆಸುತ್ತಿದ್ದು, ಲಿಂಗ ಸಮಾನತೆಗೆ ದನಿಗೂಡಿಸುವ ನಾಟಕಗಳು, ಸಿನಿಮಾ ಪ್ರದರ್ಶನ, ವಿಚಾರ ಸಂಕಿರಣ, ಜನಪದ ನೃತ್ಯ ಮತ್ತು ಚಿತ್ರ ಪ್ರದರ್ಶನ, ಜಾನಪದ ಹಾಡುಗಳು ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಉತ್ಸವದಲ್ಲಿ ನಾನಾ ರಾಜ್ಯದ ವಿವಿಧ 12 ಭಾಷೆಗಳ ನಾಟಕ, ರಾಜ್ಯದ ಬೇರೆ ಜಿಲ್ಲೆಗಳಿಂದ ಆರು ಕನ್ನಡ ನಾಟಕಗಳು, ಸಾಕ್ಷ್ಯಾಚಿತ್ರ ಒಳಗಂಡಂತೆ ಪ್ರತಿದಿನ ಮೂರು ಸಿನಿಮಾಗಳಂತೆ ಒಟ್ಟು 24 ಸಿನಿಮಾಗಳ ಪ್ರದರ್ಶನ, ಬೇರೆ ಪ್ರದೇಶದ ಸಾಧಕರು, ರಂಗಕರ್ಮಿಗಳು ಲಿಂಗ ಸಮಾನತೆಯ ವಿಷಯ ಮಂಡಿಸಲಿದ್ದಾರೆ.

70 ಮಳಿಗೆ: ಏಳು ದಿನಗಳ ನಾಟಕೋತ್ಸವದಲ್ಲಿ 70 ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ-ಮಾರಾಟ, ಕರಕುಶಲ ಹಾಗೂ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ, ಮಾರಾಟ ನಡೆಯಲಿದೆ. ಜತೆಗೆ ದೇಶಿ ಉಡುಪು, ದೇಶಿ ಆಹಾರ ಪದ್ಧತಿ ಪ್ರದರ್ಶನ ಮತ್ತು ಆಹಾರ ಮೇಳವು ಇರಲಿದೆ.

ರಂಗಾಯಣದ ಭೂಮಿಗೀತ ಆವರಣದಲ್ಲಿ ಆಯೋಜಿಸಿದ್ದ ಬಹುರೂಪಿ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಾಟಕೋತ್ಸವದ ಬಗ್ಗೆ ಮಾಹಿತಿ ನೀಡಿದ ರಂಗಾಯಣ ನಿರ್ದೇಶಕಿ ಭಾಗಿರಥೀ ಬಾಯಿ ಕದಂ, ಜ.12ರಂದು ಸಂಜೆ 6ಕ್ಕೆ ರಂಗಾಯಣದ ವನರಂಗದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

Advertisement

ಎನ್‌ಎಸ್‌ಡಿಯ ಮಾಜಿ ನಿರ್ದೇಶಕಿ ಕೀರ್ತಿ ಜೈನ್‌ ಭಾಗವಹಿಸಲಿದ್ದಾರೆ. ಅದೇ ದಿನ ಬೆಳಗ್ಗೆ 10ಕ್ಕೆ ನಟ, ರಂಗಕರ್ಮಿ ರಮೇಶ್‌ ಭಟ್‌ ಬಹುರೂಪಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿದಿನ ಕಿರು ರಂಗಮಂದಿರದಲ್ಲಿ ಸಂಜೆ 6ಕ್ಕೆ, ಭೂಮಿಗೀತದಲ್ಲಿ ಸಂಜೆ 6.30ಕ್ಕೆ,

ವನರಂಗದಲ್ಲಿ ಸಂಜೆ 7ಕ್ಕೆ ಕಲಾಮಂದಿರದಲ್ಲಿ ರಾತ್ರಿ 8ಕ್ಕೆ ವಿವಿಧ ಭಾಷೆಯ ನಾಟಕಗಳು ಪ್ರದರ್ಶನಗೊಳ್ಳಲಿದೆ. ಕಿಂದರಿಜೋಗಿ ಆವರಣದಲ್ಲಿ ಪ್ರತಿದಿನ ಸಂಜೆ 5.30ಕ್ಕೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ವಿವಿಧ ರಾಜ್ಯಗಳ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಲಿಂಗ ಸಮಾನತೆ ಥೀಮ್‌: ಬಹುರೂಪಿಯ ಸಿನಿಮಾ ಸಂಚಾಲಕ ಮ್ಯಾನ್‌ ಮನು ಮಾತನಾಡಿ, ಪ್ರಪಂಚದಲ್ಲಿ ಯಾವ್ಯಾವ ರೀತಿಯಲ್ಲಿ ಲಿಂಗ ಸಮಾನತೆ ಇದೆ. ಅದರ ವಿರುದ್ಧ ನಡೆದ ಹೋರಾಟಗಳು, ಸಲಿಂಗ ಕಾಮ ಇವೆಲ್ಲವನ್ನು ಒಳಗೊಂಡ ಸಿನಿಮಾಗಳನ್ನು ಬಹುರೂಪಿ ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡಿದ್ದೇವೆ. ಇದರಲ್ಲಿ ಸಾಕ್ಷ್ಯಚಿತ್ರವು ಒಳಗೊಂಡಿವೆ ಎಂದರು.

ಹೆಚ್ಚುವರಿ  ಜಿಲ್ಲಾಧಿಕಾರಿ ಎನ್‌.ಯೋಗೀಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಪ್ಪ ಇತರರಿದ್ದರು.

30 ರೂ. ಟಿಕೆಟ್‌ ದರ ಹೆಚ್ಚಳ: ರಂಗಾಯಣದ ಜಂಟಿ ನಿರ್ದೇಶಕ ವಿ.ಎಸ್‌.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ,  ಈ ಬಾರಿಯ ಬಹುರೂಪಿಯ ಎಲ್ಲಾ ನಾಟಕಗಳಿಗೂ 30 ರೂ. ಏರಿಕೆ ಮಾಡಿದ್ದು, ಟಿಕೆಟ್‌ ದರ 80 ರೂ.ಗಳಿಗೆ ನಿಗದಿ ಪಡಿಸಲಾಗಿದೆ. ಬಹುರೂಪಿ ನಂತರ ರಂಗಾಯಣದ ವಾರಾಂತ್ಯ ನಾಟಕಗಳಿಗೆ ಇದೇ ದರವನ್ನು ನಿಗದಿಪಡಿಸಲು ರಂಗಾಯಣದ ಕಲಾವಿದರೊಂದಿಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

17, 18ಕ್ಕೆ ಲಿಂಗ ಸಮಾನತೆ ವಿಚಾರ ಸಂಕಿರಣ: ರಂಗಾಯಣದಲ್ಲಿ ಹಮ್ಮಿಕೊಂಡಿರುವ ಬಹುರೂಪಿ ನಾಟಕೋತ್ಸವ ಅಂಗವಾಗಿ ಜ.17,18 ರಂದು ಲಿಂಗ ಸಮಾನತೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಜ.17 ರಂದು ಬೆಳಗ್ಗೆ 10.30ಕ್ಕೆ ಭೂಮಿಗೀತದಲ್ಲಿ ಕತೆಗಾರ್ತಿ ವೈದೇಹಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ.

ವಕೀಲ ಸಿ.ಎಸ್‌.ದ್ವಾರಕಾನಾಥ್‌ ಲಿಂಗ ಸಮಾನತೆ ಮತ್ತು ಸಂವಿಧಾನದ ಕುರಿತು ಆಶಯ ನೂಡಿಗಳನ್ನಾಡಲಿದ್ದಾರೆ. ಸಮಾಜಿಕ ಕಾರ್ಯಕರ್ತೆ ಎ.ರೇವತಿ ಲಿಂಗ (ಎ) ಸಮಾನತೆ ಕುರಿತು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಸಮಾಜವಾದಿ ಪ.ಮಲ್ಲೇಶ್‌ ಅಧ್ಯಕ್ಷತೆವಹಿಸಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ಅನುವಾದಕಿ ಪ್ರೊ.ಎಂ.ಎಸ್‌.ಆಶಾದೇವಿ ಲಿಂಗ ರಾಜಕಾರಣ, “ಅನುಭಾವ ಪಂಥಗಳಲ್ಲಿ ಲಿಂಗ ಸಮಾಜತೆ ಕುರಿತು ಸಂಶೋಧಕ ಪ್ರೊ.ರಹಮತ್‌ ತರೀಕರೆ ವಿಷಯ ಮಂಡಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಮೈಸೂರು ಗುರುರಾಜ ತಂಡದಿದ ಜಾನಪದ ಗೀತೆ ಗಾಯನ ಇರಲಿದೆ. ಜ.18 ರಂದು ಬೆಳಗ್ಗೆ 10ಕ್ಕೆ 2ನೇ ದಿನದ ಗೋಷ್ಠಿಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next