Advertisement

ಬೆಲ್ಲದ ಜಾಮೂನು

10:55 PM Nov 18, 2019 | Lakshmi GovindaRaj |

ಅಂಗಡಿಯಿಂದ ತಂದ ಸಕ್ಕರೆ ಬಳಸುತ್ತೇನೆ ಅಂತ, ದಿನಸಿ ಸಾಮಗ್ರಿಗಳಿದ್ದ ರಟ್ಟಿನ ಪೆಟ್ಟಿಗೆ ತೆಗೆದೆ. ವಸ್ತುಗಳನ್ನು ಒಂದೊಂದಾಗಿ ಆಚೆಗಿಡತೊಡಗಿದೆ. ಸಕ್ಕರೆ ಸಿಗಲಿಲ್ಲ. ಬದಲಿಗೆ ಎರಡು ಕೆ.ಜಿ. ರವೆ ಸಿಕ್ಕಿತು.

Advertisement

ನಮ್ಮ ಮನೆಯಲ್ಲಿ ಸಿಹಿತಿಂಡಿ ತಯಾರಿಸುವುದು ಬಹಳ ಅಪರೂಪ. ಮೂವರು ಮಕ್ಕಳು ಮೂರು ದಿಕ್ಕಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವಾಗ, ಮನೆಯಲ್ಲಿ ಉಳಿದವರು ನಾವಿಬ್ಬರೇ. ಸಿಹಿಪ್ರಿಯರಾದ ಯಜಮಾನರು ಆಗಾಗ್ಗೆ, “ಏನಾದರೂ ಸ್ವೀಟ್‌ ಮಾಡೇ’ ಅಂತ ಬೇಡಿಕೆಯಿಡುತ್ತಾರೆ. ತಿಂಡಿಯನ್ನೇನೋ ಮಾಡಬಹುದು. ಆದರೆ, ಮಕ್ಕಳನ್ನು ಬಿಟ್ಟು ತಿನ್ನುವುದು ಇಬ್ಬರಿಗೂ ಬಹಳ ಕಷ್ಟ. ಹಾಗಾಗಿ, “ರಜೆಯಲ್ಲಿ ಮಕ್ಕಳು ಬಂದಾಗ ಸ್ಪೆಷಲ್‌ ತಿಂಡಿ ಮಾಡ್ತೀನಿ’ ಅಂತ ಅಂದುಕೊಳ್ಳುತ್ತಾ ಸುಮ್ಮನಾಗುವುದೇ ಹೆಚ್ಚು. ಈಗಿನ ಮಕ್ಕಳ್ಳೋ, ಸ್ವೀಟ್ಸ್‌ ತಿನ್ನೋದಿಲ್ಲ.

ದಪ್ಪಗಾಗಿಬಿಡುತ್ತೇವೆ, ಶುಗರ್‌ ಬರುತ್ತೆ ಅಂತೆಲ್ಲಾ ಭಯ. ಮನೆಗೆ ಬಂದಾಗ “ಸ್ವೀಟ್ಸ್‌ ಬಿಟ್ಟು ಬೇರೆ ಏನಾದ್ರೂ ಮಾಡಿಕೊಡು ಅಂತಾವೆ’. ಈ ಎಲ್ಲ ಕಾರಣಗಳಿಂದ ಯಜಮಾನರಿಗೆ “ಸಿಹಿ ಭಾಗ್ಯ’ ಸಿಗುವುದೇ ಅಪರೂಪ. ಹಾಗಾಗಿ, ಈ ಸಲ ದೀಪಾವಳಿಗೆ ಅವರಿಷ್ಟದ ಜಾಮೂನ್‌ ಮಾಡಬೇಕೆಂದು ಮೊದಲೇ ಲೆಕ್ಕ ಹಾಕಿದ್ದೆ. ನಮ್ಮದು ಹಳ್ಳಿಯಾದ್ದರಿಂದ, ಹಬ್ಬಕ್ಕೂ ಮುನ್ನ ಪೇಟೆಗೆ ಹೋಗಿ ದಿನಸಿ ಖರೀದಿಸುವುದು ರೂಢಿ. ದಿನಸಿ ಚೀಟಿಯಲ್ಲಿ, ಎರಡು ಪ್ಯಾಕ್‌ ಗುಲಾಬ್‌ ಜಾಮೂನ್‌ ಅಂತ ಬರೆದಿದ್ದು ನೋಡಿ ಅವರಿಗೂ ಖುಷಿಯಾಯ್ತು. ಚೀಟಿಯಲ್ಲಿ ಎರಡು ಕೆ.ಜಿ. ಸಕ್ಕರೆಯನ್ನೂ ಬರೆದಿದ್ದೆ. ಹಬ್ಬಕ್ಕೂ ಎರಡು ದಿನ ಮುಂಚಿತವಾಗಿಯೇ ಎಲ್ಲ ಸಾಮಗ್ರಿಗಳನ್ನೂ ತಂದಿದ್ದೆವು.

ಈ ಬಾರಿಯ ಹಬ್ಬಕ್ಕೆ ಮಗಳೊಬ್ಬಳೇ ಬಂದಿದ್ದಳು. “ಜಾಮೂನು ಮಾಡೋಣಾ ?’ ಅಂದರೆ, “ಬೇಡ, ಕ್ಯಾರೆಟ್‌ ಹಲ್ವಾ ತಿನ್ಬೇಕು ಅನ್ನಿಸ್ತಿದೆ’ ಅಂದಳು. ಸರಿ, ಮೊದಲು ಅವಳಿಷ್ಟದ್ದನ್ನು ಮಾಡೋಣ ಅಂತ ಕ್ಯಾರೆಟ್‌ ತುರಿಯತೊಡಗಿದೆ. “ಜಾಮೂನು ಯಾವಾಗ ಮಾಡೋದು?’ ಅಂತ ಯಜಮಾನರು ಬೆಳಗ್ಗಿನಿಂದಲೂ ಕೇಳುತ್ತಿದ್ದರು. “ಸಂಜೆ ಮಾಡ್ತೀನಿ’ ಅಂದೆ. ಹಬ್ಬದೂಟಕ್ಕೆ ಕ್ಯಾರೆಟ್‌ ಹಲ್ವಾ ರೆಡಿಯಾಯ್ತು. ಗಡದ್ದಾಗಿ ಊಟ ಹೊಡೆದು, ಸ್ವಲ್ಪ ಹೊತ್ತು ಮಲಗೆದ್ದು, ಕಾಫಿ ಕುಡಿದು, ಹಸುಗಳಿಗೆ ಕಲಗಚ್ಚು ಕೊಟ್ಟು, ಹಾಲು ಕರೆಯುವಷ್ಟರಲ್ಲಿ ಸಂಜೆಯಾಯ್ತು. ಸಣ್ಣಗೆ ಮಳೆ ಬೇರೆ ಶುರು.

ಕರೆಂಟು ಹೋಗಿಬಿಟ್ಟರೆ ಅಂತ ಹೆದರಿ, “ಒಂಚೂರು ಜಾಮೂನು ಹಿಟ್ಟು ಕಲಸಿ ಕೊಡೇ’ ಅಂತ ಮಗಳನ್ನು ಕರೆದೆ. ಅವಳು ಮೊಬೈಲ್‌ ಕೆಳಗಿಟ್ಟು ಬಂದು, ಹಿಟ್ಟು ಕಲೆಸುವಷ್ಟರಲ್ಲಿ ಪೂರ್ತಿ ಕತ್ತಲಾಯ್ತು. ನಾನು ಸಕ್ಕರೆ ಪಾಕ ಮಾಡೋಣ ಅಂತ ಡಬ್ಬಿ ಮುಚ್ಚಳ ತೆಗೆದರೆ ಖಾಲಿ! ಸರಿ, ಅಂಗಡಿಯಿಂದ ತಂದ ಹೊಸ ಸಕ್ಕರೆ ಬಳಸುತ್ತೇನೆ ಅಂತ, ದಿನಸಿ ಸಾಮಗ್ರಿಗಳಿದ್ದ ರಟ್ಟಿನ ಪೆಟ್ಟಿಗೆ ತೆಗೆದೆ. ವಸ್ತುಗಳನ್ನು ಒಂದೊಂದಾಗಿ ಆಚೆಗಿಡತೊಡಗಿದೆ. ಸಕ್ಕರೆ ಸಿಗಲಿಲ್ಲ.

Advertisement

ಬದಲಿಗೆ ಎರಡು ಕೆ.ಜಿ. ರವೆ ಸಿಕ್ಕಿತು. ಅರೇ, ನಾನು ರವೆಯನ್ನು ಚೀಟಿಯಲ್ಲಿ ಬರೆದೇ ಇರಲಿಲ್ಲವಲ್ಲ, ಅಂದುಕೊಂಡಾಗ ಹೊಳೆಯಿತು, ಅಂಗಡಿಯವ ಸಕ್ಕರೆಯ ಬದಲಿಗೆ ರವೆ ಕೊಟ್ಟಿದ್ದಾನೆಂದು. ಅದನ್ನು ಯಜಮಾನರೂ ನೋಡಲಿಲ್ಲ. ದಿನಸಿ ಮನೆಗೆ ಬಂದ ಮೇಲೆ ನಾನೂ ತೆಗೆದು ನೋಡಲಿಲ್ಲ. ಹಬ್ಬದ ಗಡಿಬಿಡಿಯಲ್ಲಿ, ವಸ್ತುಗಳನ್ನು ಎತ್ತಿಡಲೂ ನನಗೆ ಪುರುಸೊತ್ತಾಗಿರಲಿಲ್ಲ. ಈಗೇನಪ್ಪಾ ಮಾಡೋದು ಅಂತ ಕೈ ಕೈ ಹಿಸುಕಿಕೊಂಡೆ.

ಪೇಟೆಯವರಂತೆ ನಿಮಿಷದಲ್ಲಿ ಅಂಗಡಿಗೆ ಹೋಗಿ ಸಕ್ಕರೆ ತರುವುದು ಸಾಧ್ಯವಿಲ್ಲ. ಅಂಗಡಿ ಇರುವುದು ಐದು ಕಿ.ಮೀ. ದೂರದಲ್ಲಿ. ಮನೆಯವರನ್ನೇ ಅಂಗಡಿಗೆ ಕಳಿಸೋಣವೆಂದರೆ, ಸಂಜೆಯಾಗಿದೆ, ಮಳೆ ಬೇರೆ ಜೋರಾಗಿ ಸುರಿಯುತ್ತಿದೆ. “ಸಕ್ಕರೆ ಬದಲು ರವೆ ತಂದಿದ್ದೀರಿ’ ಅಂತ ರೇಗೋಣವೆಂದರೆ, “ನೀನ್ಯಾಕೆ ನಿನ್ನೆಯೇ ಸಾಮಗ್ರಿಗಳನ್ನೆಲ್ಲ ನೋಡಿ, ಎತ್ತಿಡಲಿಲ್ಲ’ ಅಂತ ತಿರುಗಿ ಬೈಯುತ್ತಾರೆಂಬ ಭಯ. ಸರಿ, ಕಲಸಿದ ಹಿಟ್ಟು ಹಾಳಾಗಿಹೋಗಲಿ ಅಂದರೆ, ಯಜಮಾನರು ಜಾಮೂನಿಗೆ ಆಸೆಪಟ್ಟಿದ್ದಾರೆ.

ಇಂಥ ಧರ್ಮ ಸಂಕಟದ ಸಮಯದಲ್ಲಿ ತಾನೇ, ಹೆಂಗಸರ ತಲೆ ಕೆಲಸ ಮಾಡುವುದು. ನಾನೂ ತಲೆ ಓಡಿಸಿದೆ. ಜಾಮೂನಿಗೆ ಸಕ್ಕರೆಯೇ ಯಾಕೆ, ಬೆಲ್ಲದಿಂದ ಮಾಡಲಾಗದೇ ಅಂತ ಪ್ರಯೋಗಕ್ಕೆ ಸಿದ್ಧಳಾದೆ. ಬೆಲ್ಲ ಹಾಕಿದ್ರೆ ಚೆನ್ನಾಗಾಗಲ್ಲ ಅಂತ ಮಗಳು, ಅಡುಗೆಮನೆಯಿಂದ ನುಣುಚಿಕೊಂಡಳು. ನಾನು ಬೆಲ್ಲದ ಪಾಕ ಮಾಡಿ, ಅದರಲ್ಲಿ ಜಾಮೂನುಗಳನ್ನು ಮುಳುಗಿಸಿದೆ. ಸಕ್ಕರೆಯನ್ನು ಹೀರಿದಷ್ಟು ಸಲೀಸಾಗಿ ಬೆಲ್ಲಕ್ಕೆ ಜಾಮೂನಿನ ಉಂಡೆಗಳು ಒಗ್ಗಿಕೊಳ್ಳಲಿಲ್ಲ. ಬಣ್ಣ ಕಪ್ಪಾಯ್ತು.

ಉಂಡೆ ಒಡೆದು, ಬಿರುಕುಬಿಟ್ಟಿತು. ಕೊಟ್ಟಿಗೆ, ತೋಟ ಎಲ್ಲಾ ಕಡೆ ದೀಪದ ಕೋಲುಗಳನ್ನು ನೆಟ್ಟು ಒಳಗೆ ಬಂದ ಯಜಮಾನರ ಮುಂದೆ, ಜಾಮೂನು ತುಂಬಿದ ಬಟ್ಟಲನ್ನಿಟ್ಟೆ. ಖುಷಿಯಿಂದ ಬಾಯಿಗೆ ಹಾಕಿಕೊಂಡವರ ಮುಖ ಹುಳ್ಳಗಾಯ್ತು, “ಇದೇನೇ ಇದು ರುಚಿ ಬದಲಾಗಿದೆ?’ ಅಂದಾಗ, ಸತ್ಯ ಬಿಚ್ಚಿಟ್ಟೆ. ಸಕ್ಕರೆ ಇಲ್ಲದಿದ್ದರೂ ಕಷ್ಟಪಟ್ಟು ಮಾಡಿದ್ದಾಳಲ್ಲ ಅಂತ ಯಜಮಾನರಿಗೆ ಪ್ರೀತಿಯುಕ್ಕಿ, “ತಿನ್ನಲಾಗದಷ್ಟು ಹಾಳಾಗಲ್ಲ ನಿನ್ನ ಬೆಲ್ಲದ ಜಾಮೂನು’ ಅಂತ ಮತ್ತೂಂದನ್ನು ಬಾಯಿಗೆ ಹಾಕಿಕೊಂಡರು!

* ಕೆ.ಎಂ. ಶಾಂತ

Advertisement

Udayavani is now on Telegram. Click here to join our channel and stay updated with the latest news.

Next