ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಪುತ್ರ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಜಮ್ಮು-ಕಾಶ್ಮೀರ ಸರ್ಕಾರ ಕೆಲಸದಿಂದ ವಜಾಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಾಲೇಜಿನಲ್ಲಿ ನೃತ್ಯ ಮಾಡುವ ವಿಷಯಕ್ಕೆ ಜಗಳ : ಚಾಕು ಇರಿದು ವಿದ್ಯಾರ್ಥಿ ಕೊಲೆ
ಸಂವಿಧಾನದ 311ನೇ ಕಲಂನಡಿ ಎಲ್ಲಾ ನಾಲ್ಕು ಉದ್ಯೋಗಿಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಈ ಕಲಂನಡಿ ಉದ್ಯೋಗಿಗಳ ವಿಚಾರಣೆ ನಡೆಸದೇ ಜಮ್ಮು-ಕಾಶ್ಮೀರ ಸರ್ಕಾರ ಕೆಲಸದಿಂದ ವಜಾಗೊಳಿಸುವ ಅಧಿಕಾರ ಹೊಂದಿದೆ ಎಂದು ವಿವರಿಸಿದೆ.
ಬಿಟ್ಟಾ ಕರಾಟೆ ಎಂದೇ ಕುಖ್ಯಾತಿ ಪಡೆದಿರುವ ಫಾರೂಖ್ ಅಹ್ಮದ್ ದಾರ್ ಪ್ರಸ್ತುತ ಭಯೋತ್ಪಾದಕ ಸಂಘಟನೆಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದಾರ್ ಪತ್ನಿ ಅಸ್ಸಾಬಾ ಉಲ್ ಅರ್ಜಮಂಡ್ ಖಾನ್ ಜಮ್ಮು-ಕಾಶ್ಮೀರದ ಆಡಳಿತಾಧಿಕಾರಿಯಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ನಿಯೋಜಿಸಲಾಗಿತ್ತು.
ದಾರ್ ಪತ್ನಿ ಅಸ್ಸಾಬಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮಾಹಿತಿ ಹಾಗೂ ತಂತ್ರಜ್ಞಾನ ವ್ಯವಸ್ಥಾಪಕ ಸೈಯದ್ ಅಬ್ದುಲ್ ಮುಯೀದ್(ಹಿಜ್ಬುಲ್ ಮುಖ್ಯಸ್ಥ ಸಲಾವುದ್ದೀನ್ ಪುತ್ರ), ವಿಜ್ಞಾನಿ ಡಾ.ಮುಹೀತ್ ಅಹ್ಮದ್ ಭಟ್ ಮತ್ತು ಕಾಶ್ಮೀರ ಯೂನಿರ್ವಸಿಟಿಯ ಹಿರಿಯ ಸಹಾಯಕ ಪ್ರೊಫೆಸರ್ ಮಜೀದ್ ಹುಸೈನ್ ಖ್ವಾದ್ರಿ ಸೇರಿದಂತೆ ನಾಲ್ವರನ್ನು ಕರ್ತವ್ಯದಿಂದ ವಜಾಗೊಳಿಸಿರುವುದಾಗಿ ಜಮ್ಮು-ಕಾಶ್ಮೀರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.