Advertisement

ಇತಿಹಾಸ ನಿರ್ಮಿಸುವರೇ ಇಂಗ್ಲೆಂಡ್‌ನ‌ ಓವರ್ಟನ್‌ ಅವಳಿಗಳು?

05:59 PM Jun 17, 2022 | Team Udayavani |

ಲಂಡನ್‌: ಪೇಸ್‌ ಬೌಲರ್‌ ಜೇಮಿ ಓವರ್ಟನ್‌ ಮೊದಲ ಸಲ ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಕರೆ ಪಡೆದಿದ್ದಾರೆ. ಪ್ರವಾಸಿ ನ್ಯೂಜಿಲ್ಯಾಂಡ್‌ ಎದುರಿನ ಮೂರನೇ ಟೆಸ್ಟ್‌ ಪಂದ್ಯಕ್ಕಾಗಿ ಪ್ರಕಟಿಸಲಾದ ತಂಡದಲ್ಲಿ ಜೇಮಿ ಕಾಣಿಸಿಕೊಂಡಿದ್ದಾರೆ.

Advertisement

ತಂಡದಲ್ಲಿ ಅವರ ಅವಳಿ ಸಹೋದರ ಕ್ರೆಗ್‌ ಓವರ್ಟನ್‌ ಕೂಡ ಇರುವುದು ವಿಶೇಷ. ಇವರಿಬ್ಬರೂ ಒಟ್ಟಿಗೇ ಆಡಿದರೆ 145 ವರ್ಷಗಳ ಸುದೀರ್ಘ‌ ಟೆಸ್ಟ್‌ ಇತಿಹಾಸದಲ್ಲಿ ಮೊದಲ ಸಲ ಅವಳಿ ಕ್ರಿಕೆಟಿಗರು ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸಿದಂತಾಗುತ್ತದೆ.

ಇಂಗ್ಲೆಂಡ್‌ನ‌ ಹೆಸರಾಂತ ಅವಳಿಗಳೆಂದರೆ ಎರಿಕ್‌ ಬೆಡ್‌ಸರ್‌ ಮತ್ತು ಅಲೆಕ್‌ ಬೆಡ್‌ಸರ್‌. 1940 1950ರ ಅವಧಿಯಲ್ಲಿ ಇವರು ಸರ್ರೆ ಕೌಂಟಿ ಪರ ಅಮೋಘ ಪ್ರದರ್ಶನ ನೀಡಿದ್ದರು. ಇವರಲ್ಲಿ ಅಲೆಕ್‌ ಬೆಡ್‌ಸರ್‌ ಇಂಗ್ಲೆಂಡಿನ ಯಶಸ್ವಿ ವೇಗದ ಬೌಲರ್‌ ಆಗಿ ಮೂಡಿಬಂದರರು. ಆದರೆ ಎರಿಕ್‌ ಬೆಡ್‌ಸರ್‌ಗೆ ಇಂಗ್ಲೆಂಡ್‌ ಟೆಸ್ಟ್‌ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಲೇ ಇಲ್ಲ. ಇಲ್ಲವಾದರೆ ಅಂದೇ ಇತಿಹಾಸ ನಿರ್ಮಾಣಗೊಳ್ಳುತ್ತಿತ್ತು.

ಕ್ರೆಗ್‌ ಓವರ್ಟನ್‌ ಈಗಾಗಲೇ 8 ಟೆಸ್ಟ್‌ಗಳಲ್ಲಿ ಇಂಗ್ಲೆಂಡನ್ನು ಪ್ರತಿನಿಧಿಸಿದ್ದಾರೆ. ಇವರಿಗಿಂತ 3 ನಿಮಿಷ ಚಿಕ್ಕವರಾದ ಜೇಮಿ ಓವರ್ಟನ್‌ಗೆ ಇದೇ ಮೊದಲ ಅಂತಾರಾಷ್ಟ್ರೀಯ ಕರೆ. ಪ್ರಸಕ್ತ ಕೌಂಟಿ ಋತುವಿನಲ್ಲಿ ಸರ್ರೆ ಪರ 21.61ರ ಸರಾಸರಿಯಲ್ಲಿ 21 ವಿಕೆಟ್‌ ಉರುಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಸ್ಪಿನ್ನರ್‌ ಮ್ಯಾಥ್ಯೂ ಪಾರ್ಕಿನ್ಸನ್‌ ಬದಲು ಜೇಮಿ ಓವರ್ಟನ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ಇಂಗ್ಲೆಂಡ್‌ ಈಗಾಗಲೇ 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿದೆ. ಅಂತಿಮ ಟೆಸ್ಟ್‌ ಜೂ. 23ರಂದು ಆರಂಭವಾಗಲಿದೆ.

Advertisement

ಇದನ್ನೂ ಓದಿ:ದ್ವಿತೀಯ ಏಕದಿನ: ಮಳೆ ಪಂದ್ಯ ಗೆದ್ದ ಶ್ರೀಲಂಕಾ; ಆಸ್ಟ್ರೇಲಿಯಕ್ಕೆ 26 ರನ್‌ ಸೋಲು

ವಿಶ್ವವಿಖ್ಯಾತ ಅವಳಿಗಳು
ಕ್ರಿಕೆಟಿನ ಖ್ಯಾತ ಅವಳಿಗಳಲ್ಲಿ ಆಸ್ಟ್ರೇಲಿಯದ ಸ್ಟೀವ್‌ ವೋ ಮಾರ್ಕ್‌ ವೋ ವಿಶೇಷ ಸ್ಥಾನವಿದೆ. ಇವರಿಬ್ಬರು 1991ರಲ್ಲಿ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ಒಟ್ಟಿಗೇ ಟೆಸ್ಟ್‌ ಆಡಿದ್ದರು. ಹಾಗೆಯೇ ನ್ಯೂಜಿಲ್ಯಾಂಡಿನ ಹಾಮಿಶ್‌ ಮಾರ್ಷಲ್‌ ಮತ್ತು ಜೇಮ್ಸ್‌ ಮಾರ್ಷಲ್‌ 2005ರಲ್ಲಿ ಒಂದೇ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು.

ವನಿತಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯದ ಫೆರ್ನಿ ಶೆವಿಲ್‌ ರೆನೆ ಶೆವಿಲ್‌ ಹೆಸರನ್ನು ಉಲ್ಲೇಖಿಸದೆ ಇರುವಂತಿಲ್ಲ. ಇವರಿಬ್ಬರು 1934ರಷ್ಟು ಹಿಂದೆಯೇ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯ ಆಡಿದ್ದರು. ಬಳಿಕ 1984ರಲ್ಲಿ ನ್ಯೂಜಿಲ್ಯಾಂಡ್‌ನ‌ ಎಲಿಜಬೆತ್‌ ಸಿಗ್ನಲ್‌ ಮತ್ತು ರೋಸ್‌ ಸಿಗ್ನಲ್‌ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next