ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್’ ಚಿತ್ರದ “ಟ್ರೇಡ್ ಮಾರ್ಕ್’ ಪ್ರಮೋಶನಲ್ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದೆ.
ಹಾಡಿನಲ್ಲಿ ತೆರೆಮೇಲೆ ಪುನೀತ್ ರಾಜಕುಮಾರ್ ಭರ್ಜರಿ ಸ್ಟೆಪ್ಸ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇನ್ನು ಈ ಹಾಡು ರಿಲೀಸ್ ಆದ ಕೆಲವೇ ನಿಮಿಷಗಳಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಾಡಿಗೆ ಮತ್ತು ಪುನೀತ್ ಡ್ಯಾನ್ಸ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದು, ಕಿಶೋರ್ ಪತ್ತಿಕೊಂಡ ನಿರ್ಮಾಣವಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿಮೂಡಿ ಬಂದಿರುವ “ಟ್ರೇಡ್ ಮಾರ್ಕ್’ ಗೀತೆಗೆಐವರು ಗಾಯಕರು ಸಾಥ್ ನೀಡಿದ್ದಾರೆ. ವಿಕ್ಕಿ, ಅದಿತಿ ಸಾಗರ್ ಮತ್ತು ಚಂದನ್ ಶೆಟ್ಟಿ, ಶರ್ಮಿಳಾ, ಯುವ ರಾಜಕುಮಾರ್ ಮತ್ತು ಚರಣ್ ರಾಜ್ ಈ ಹಾಡಿಗೆ ಧ್ವನಿಯಾಗಿದ್ದಾರೆ. “ಜೇಮ್ಸ್’ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯದಲ್ಲಿ ಈ ಹಾಡು ಮೂಡಿ ಬಂದಿದೆ.
“ಜೇಮ್ಸ್’ ಸಿನಿಮಾದ ಮುಹೂರ್ತದಂದು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಕ್ಲ್ಯಾಪ್ ಮಾಡುವ ದೃಶ್ಯದಿಂದ ಶುರುವಾಗುವ “ಟ್ರೇಡ್ ಮಾರ್ಕ್’ ಲಿರಿಕಲ್ ವಿಡಿಯೋ ಸಾಂಗ್‌ನಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್, ಚಂದನ್ ಶೆಟ್ಟಿ, ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀಲೀಲಾ, ಮೋಹನ್ ಮೊದಲಾದವರು ಕೂಡ ಸ್ಟೆಪ್ ಹಾಕಿದ್ದಾರೆ. ಇದರ ಜೊತೆಗೆ “ಜೇಮ್ಸ್’ ಸಿನಿಮಾದ ಹಾಡಿನ ಕೆಲ ತುಣುಕುಗಳನ್ನೂ ಸೇರಿಸಿ ಈ ಲಿರಿಕಲ್ ವಿಡಿಯೋವನ್ನು ವಿಶೇಷವಾಗಿ ಮಾಡಲಾಗಿದೆ. ಇಡೀ ಹಾಡನ್ನು ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ.
ಕನ್ನಡ ಮಾತ್ರವಲ್ಲದೇ “ಜೇಮ್ಸ್’ ತೆರೆಕಾಣಲಿರುವ ಇತರ ಭಾಷೆಯಲ್ಲಿಯೂ ಈ ಹಾಡು ಬಿಡುಗಡೆಯಾಗಿದೆ. ಮಾ. 17ಕ್ಕೆ ಚಿತ್ರ ಬಿಡುಗಡೆಯಾಗಲಿದೆ.