Advertisement

ಮರೆಯಾದ ಯಕ್ಷಗಾನ ರಂಗದ ಪರಿಪೂರ್ಣ ಪೋಷಕ ಪಾತ್ರಧಾರಿ ಜಂಬೂರು ರಾಮಚಂದ್ರ ಶಾನುಭೋಗ್

06:59 PM Feb 08, 2023 | ವಿಷ್ಣುದಾಸ್ ಪಾಟೀಲ್ |

ಯಕ್ಷಗಾನ ರಂಗ ಒಬ್ಬೊಬ್ಬರೇ ಶ್ರೇಷ್ಠ ಕಲಾವಿದರನ್ನು ಕಳೆದುಕೊಳ್ಳುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆಯಾಗಿ ಬಡಗುತಿಟ್ಟಿನಲ್ಲಿ ತನ್ನದೇ ಆದ ವೈಶಿಷ್ಟ್ಯಗಳಿಂದ ಅಪಾರ ಪ್ರೇಕ್ಷಕರ ಮೆಚ್ಚುಗೆಗೆ ಭಾಜನರಾಗಿ, ದಿಗ್ಗಜ ಕಲಾವಿದರ ಒಡನಾಡಿಯಾಗಿ ಯಶಸ್ಸು ಸಾಧಿಸಿದ ಜಂಬೂರು ರಾಮಚಂದ್ರ ಶಾನುಭೋಗ್ ಅವರು ಜೀವನ ರಂಗದ ಯಾತ್ರೆ ಮುಗಿಸಿದ್ದಾರೆ.

Advertisement

ಉಡುಪಿ ಜಿಲ್ಲೆಯ ಶಿರಿಯಾರ ಗ್ರಾಮದ ಹಿರಿಯ ಬಡಗು ತಿಟ್ಟಿನ ಯಕ್ಷಗಾನ ಕಲಾವಿದ ರಾಮಚಂದ್ರ ಶಾನುಭೋಗ್ ಅವರು 86ನೇ ವಯಸ್ಸಿನಲ್ಲಿ ಫೆ.5 ರಂದು ನಿಧನ ಹೊಂದಿದ್ದಾರೆ. ಯಕ್ಷರಂಗದ ಜನಪ್ರಿಯ ಬಯಲಾಟ ಮೇಳಗಳಾದ ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರಿ, ಪೆರ್ಡೂರು, ಹಾಲಾಡಿ, ಗುಂಡುಬಾಳ, ಕಮಲಶಿಲೆ ಮೇಳ ಸೇರಿದಂತೆ ಡೇರೆ ಮೇಳವಾದ ಇಡಗುಂಜಿ ಮೇಳದಲ್ಲೂ ಸುದೀರ್ಘ ಕಲಾಸೇವೆ ಗೈದವರು ಶಾನುಭೋಗರು.

ಅಭಿಮಾನಿಗಳು ಮತ್ತು ಒಡನಾಡಿ ಕಲಾವಿದರು ಪ್ರೀತಿಯಿಂದ ರಾಮಚಂದ್ರ ಶಾನುಭೋಗ್ ಅವರನ್ನು ಜಂಬೂರು ಮಾಣಿ ಎಂದು ಕರೆಯುತ್ತಿದ್ದರಂತೆ. ಲೋಕದ ಬೆಳಕು ಕಂಡು  ವರುಷವಾಗುವ ಮುನ್ನವೇ ಇವರ ತಂದೆ ಖ್ಯಾತ ಯಕ್ಷಗಾನ ಭಾಗವತ ಶ್ರೀನಿವಾಸ ಶಾನುಭೋಗ್ ಇಹಲೋಕ ತ್ಯಜಿಸಿದ್ದು ಇವರ ಜೀವನದಲ್ಲಿ ದೊಡ್ಡ ನೋವಿನ ವಿಚಾರ. ತಾಯಿಯ ಪ್ರೋತ್ಸಾಹದಿಂದ ಯಕ್ಷಗಾನ ರಂಗಕ್ಕೆ ಬಂದು ಹಂತ ಹಂತವಾಗಿ ಬೆಳೆದು ಓರ್ವ ಪರಿಪೂರ್ಣ ಪೋಷಕ ಪಾತ್ರಧಾರಿಯಾಗಿ ಯಕ್ಷರಂಗದಲ್ಲಿ ಗುರುತಿಸಿಕೊಂಡವರು.

ಕೋಡಂಗಿ, ನಿತ್ಯವೇಷ, ಪೀಠಿಕಾ ಸ್ತ್ರೀವೇಷ ಮಾಡಿ ಉತ್ತಮ ವಾಕ್ಚಾತುರ್ಯ ಬೆಳೆಸಿಕೊಂಡದ್ದು ಇವರ ಪ್ರತಿಭೆಗೆ ದೊಡ್ಡ ವೇದಿಕೆಯಾಯಿತು. ದಿಗ್ಗಜರಾದ ಕೆರೆಮನೆ ಶಂಭು ಹೆಗಡೆ ಅವರಿಗೆ ಮೆಚ್ಚಿನ ಕಲಾವಿದರಾಗಿದ್ದರು.ಆಗಿನ ಜನಪ್ರಿಯ ಪೌರಾಣಿಕ ಕಥಾನಕವಾದ ಸತ್ಯ ಹರಿಶ್ಚಂದ್ರ ಪ್ರಸಂಗದಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರ ವಿಶ್ವಾಮಿತ್ರ ಮತ್ತು ಶಾನುಭೋಗ್ ಅವರ ವಾಗ್ಯುದ್ಧ ಪ್ರೇಕ್ಷಕರಿಗೆ ಅತ್ಯುತ್ತಮ, ಕರ್ಣಾನಂದಕರ ಆರೋಗ್ಯಪೂರ್ಣ ಅರ್ಥಗಾರಿಕೆಯಾಗಿರುತ್ತಿತ್ತು ಎಂದು ಇಂದಿಗೂ ಹಿರಿಯ ಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ.

ದಿಗ್ಗಜ ಭಾಗವತ ಕಾಳಿಂಗ ನಾವಡ ಅವರ ಭಾಗವತಿಕೆಯಲ್ಲಿ ವಿಡಿಯೋ ಚಿತ್ರೀಕರಣಗೊಂಡ ಗದಾಯುದ್ಧ ಪ್ರಸಂಗದಲ್ಲಿ ಬಹುಜನರ ಒತ್ತಾಯದ ಮೇರೆಗೆ ಧರ್ಮರಾಯನಾಗಿ ಪಾತ್ರ ನಿರ್ವಹಿಸಿದ್ದರು.

Advertisement

ದಶಕಗಳ ಹಿಂದೆ ಸಣ್ಣ ಪಾತ್ರಗಳ ಮೂಲಕ ಮಂದಾರ್ತಿ ಮೇಳದಲ್ಲಿ ಕಲಾ ಜೀವನ ಆರಂಭಿಸಿದ ಶಾನುಭೋಗರು ದಿಗ್ಗಜ ಕಲಾವಿದರಾದ ಹಾರಾಡಿ ರಾಮಗಾಣಿಗರು, ಕುಷ್ಠ ಗಾಣಿಗರು, ನಾರಾಯಣ ಗಾಣಿಗರು,ಕುಂಜಾಲು ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್,ಶಿರಿಯಾರ ಮಂಜು ನಾಯಕ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ,ಮೂರೂರು ದೇವರು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕುಂಜಾಲು ರಾಮಕೃಷ್ಣ ಮೊದಲಾದ ದಿಗ್ಗಜ ಕಲಾವಿದರೊಂದಿದೆ ಪಾತ್ರಗಳನ್ನು ನಿರ್ವಹಿಸಿ  ಬಯಲಾಟ ಮತ್ತು ಡೇರೆ ಮೇಳಗಳಲ್ಲಿ ತನ್ನನ್ನು ತಾನು ಕಾಣಿಸಿಕೊಂಡು ಚಿರಪರಿಚಿತ ಕಲಾವಿದರಾಗಿದ್ದರು.

ಭೀಷ್ಮ ವಿಜಯ ಪ್ರಸಂಗದಲ್ಲಿ ಮೊದಲು ಪ್ರತಾಪಸೇನನ ಪಾತ್ರ ಮಾಡಿ ನಂತರ ಪರಶುರಾಮನ ಪಾತ್ರ ಮಾಡುತ್ತಿದ್ದರು. ಕೆರೆಮನೆ ಮಹಾಬಲ ಹೆಗಡೆ ಅವರೊಂದಿಗೆ ಭೀಷ್ಮನ ಇದಿರಾಗಿ ಪರಶುರಾಮನಾಗಿ ಸಮರ್ಥ ವಾದ ಮಂಡನೆ ಮಾಡಿ ಹಲವು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ವಿಶೇಷವಾಗಿ ಮಹಾಬಲ ಹೆಗಡೆ ಅವರು ಇವರನ್ನೇ ಇದಿರು ಪಾತ್ರಗಳಿಗೆ ಬಯಸುತ್ತಿದ್ದುದು ಇವರ ಸಾಮರ್ಥ್ಯಕ್ಕೆ ಉದಾಹರಣೆ. 12 ವರ್ಷಗಳ ಕಾಲ ಇಡಗುಂಜಿ ಮೇಳದಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದರು.

ತಮ್ಮಿಂದ ಕಿರಿಯ ಕಲಾವಿದರಿಗೆ ಅರ್ಥಗಾರಿಗೆಯನ್ನು ಹೇಳಿಕೊಟ್ಟು ಗುರು ಎನಿಸಿಯೂ ಸೈ ಎನಿಸಿಕೊಂಡವರು. ತಮ್ಮ ಪರಿಸರದ ಬಾಲಕರನ್ನು ಯಕ್ಷಗಾನ ರಂಗದ ಪರಿಚಯ ಮಾಡಿಸಿಕೊಟ್ಟವರು ಶಾನುಭೋಗರು. ಅನಿವಾರ್ಯವಾದಲ್ಲಿ ಸಖಿ ಸ್ತ್ರೀ ವೇಷಗಳನ್ನೂ ನಿರ್ವಹಿಸಿದ್ದರು. ಹಾಸ್ಯ ದಿಗ್ಗಜ ಕುಂಜಾಲು ರಾಮಕೃಷ್ಣ ಅವರ ಅನುಪಸ್ಥಿತಿಯಲ್ಲಿ ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿ ಸೈ ಎನಿಸಿಕೊಂಡವರು.

ಯಕ್ಷಗಾನ ರಂಗದ ಮೊದಲ ರಾಷ್ಟ್ರ ಪ್ರಶಸ್ತಿ ವಿಜೇತ ಹಾರಾಡಿ ರಾಮಗಾಣಿಗ ಅವರೊಂದಿಗೆ ಹಲವು ಪಾತ್ರಗಳನ್ನು ನಿರ್ವಹಿಸಿದ ಹಿರಿಮೆ ಇವರದ್ದು.

ಸುಮಾರು ಐದೂವರೆ ದಶಕಗಳ ಕಾಲ ಯಕ್ಷರಂಗದಲ್ಲಿ ದಿಗ್ಗಜ ಕಲಾವಿದರೊಂದಿಗೆ ಒಡನಾಡಿಯಾಗಿ ಕಲಾಸೇವೆಗೈದ ಇವರು ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ಪಾತ್ರಗಳಿಂದ ತನ್ನದೇ ಆದ ಛಾಪು ಮೂಡಿಸಿ ನೂರಾರು ಸನ್ಮಾನಗಳಿಗೆ ಭಾಜನರಾದವರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next