ಜಗಳೂರು: ಆಸಕ್ತಿ ಮತ್ತು ಸಾಮರ್ಥ್ಯವಿದ್ದರೆ ಸ್ವ ಉದ್ಯೋಗದಲ್ಲಿ ಸಫಲರಾಗಿ ನೂರಾರು ಮಂದಿಗೆ ಉದ್ಯೋಗ ನೀಡಬಹುದು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ , ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಸ್ವ ಸಹಾಯ ಸಂಘಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪುರುಷರಿಗಿಂತ ಮಹಿಳೆಯರು ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡುತ್ತಾರೆ. ಅದರಂತೆ ಬ್ಯಾಂಕ್ ಗಳಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುತ್ತಿರುವುದರಿಂದ ಪುರುಷರಿಗಿಂತ ಮಹಿಳೆಯರಿಗೆ ಬ್ಯಾಂಕ್‌ನವರು ಆದ್ಯತೆ ಮೇರೆಗೆ ಸಾಲ ಸೌಲಭ್ಯಗಳನ್ನು ನೀಡುತ್ತಾರೆ ಎಂದರು.
ನಾನು ಹೊಸಪೇಟೆಯಲ್ಲಿ ಕಾರ್ಯನಿರ್ವಹಿಸುವಾಗ ಮಹಿಳೆಯೊಬ್ಬರು ಸಾಳ ಸೌಲಭ್ಯ ಕೊಡಿಸಿದರೆ ಸ್ವಂತ ಉದ್ಯೋಗ ಮಾಡುತ್ತೇನೆ ಎಂದು ಮುಂದೆ ಬಂದರು. ಆಗ ನಾನು ಬ್ಯಾಂಕ್‌ನಲ್ಲಿ 89 ಸಾವಿರ ಸಾಲ ಕೊಡುವಂತೆ ಶಿಫಾರಸು ಮಾಡಿದ್ದೆ. ಕೆಲವು ವರ್ಷಗಳಲ್ಲಿ ಅವರು ಸಾಲ ಮರುಪಾವತಿ ಮಾಡಿದರು. ಕೆಂಟ್ ಕುಡಿಯುವ ನೀರಿನ ಯಂತ್ರದ ವ್ಯವಹಾರ ಮಾಡಿ ಇಂದು 10 ಕೋಟಿಗೂ ಅಧಿ ಕ ಆದಾಯ ಗಳಿಸಿದ್ದಾರೆ ಎಂದು ಉದಾಹರಣೆ ನೀಡಿದರು. ಪ್ರತಿವರ್ಷ 40 ಲಕ್ಷ ಇಂಜೀಯರ್ ಪದವಿಧರರು ಹೊರ ಬರುತ್ತಾರೆ. ಇವರೆಲ್ಲರಿಗೂ ಸರಕಾರ ಉದ್ಯೋಗ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸ್ವ ಉದ್ಯೋಗದ ಕಡೆ ಗಮನ ಹರಿಸಿ ಎಂದು ಸ್ವ ಸಹಾಯ ಸಂಘದ ಮಹಿಳೆಯರಿಗೆ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಇಓ ಮಲ್ಲಾ ನಾಯ್ಕ ಮಾತನಾಡಿ, ಮಹಿಳಾ ದಿನ ಅಂಗವಾಗಿ ಮಾ. 8ರಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಗ್ರಾಮ ಸಭೆಗಳನ್ನು ಮಾಡಬೇಕು. ಸದರಿ ಸಭೆಗೆ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರು ಭಾಗವಹಿಸಬೇಕು. ನರೇಗಾ ಸೇರಿದಂತೆ ಇತರೆ ಇಲಾಖೆಗಳಲ್ಲಿ ದೊರೆಯುವಂತಹ ಸೌಲಭ್ಯಗಳನ್ನು ಅವರಿಗೆ ತಿಳಿಸಬೇಕು ಎಂದು ಹೇಳಿದರು.
ಎಪಿಓ ಆನಂತ್, ಅ.ಎ.ಡಿ. ಶಿವಕುಮಾರ್ , ಕೃಷಿ ಇಲಾಖೆಯ ಲೋಕೇಶ್, ತೋಟಗಾರಿಕೆ ಇಲಾಖೆಯ ವೆಂಕಟೇಶ್, ತಾ.ಪಂ ನ ಸಿದ್ದಿಕ್ ರೇವಣ್ಣ, ತಿಮ್ಮೇಶ್, ಬಾಷಾ ಸೇರಿದಂತೆ ಮತ್ತಿತರರುಹಾಜರಿದ್ದರು.