Advertisement

ಪುತ್ತೂರಿನವರಿಗೆ ಈ ಬೇಸಗೆಗೂ “ಜಲಸಿರಿ’ನೀರು ಮರೀಚಿಕೆ ?

10:37 PM Jan 08, 2023 | Team Udayavani |

ಪುತ್ತೂರು: ಬೆಳೆಯುತ್ತಿರುವ ಪುತ್ತೂರು ನಗರ ವ್ಯಾಪ್ತಿಯಲ್ಲಿ ದಿನದ 24 ತಾಸು ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ 113 ಕೋ.ರೂ.ವೆಚ್ಚದ “ಜಲಸಿರಿ’ ಯೋಜನೆಯಲ್ಲಿ ಈ ಬಾರಿಯ ಬೇಸಗೆಯಲ್ಲಿಯು ನೀರು ದೊರೆಯುವ ಲಕ್ಷಣ ಕಾಣುತ್ತಿಲ್ಲ.

Advertisement

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಶೇ. 70ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಕೆಲಸಗಳು ಅಂತಿಮ ಹಂತಕ್ಕೆ ತಲುಪಿಲ್ಲ ಅನ್ನುತ್ತಿದೆ ಕಾಮಗಾರಿಯ ಪ್ರೋಗ್ರೆಸ್‌ ವರದಿ.

ಜಲಸಿರಿ ಕಾಮಗಾರಿ ಅನುಷ್ಠಾನಕ್ಕೆ 33 ತಿಂಗಳು ನೀಡಲಾಗಿತ್ತು. ಅನಂತರ 3 ತಿಂಗಳು ಪ್ರಾಯೋಗಿಕ ಸರಬರಾಜು ನಡೆಯಲಿದೆ. 8 ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಣೆ ಜವಾಬ್ದಾರಿ ನಿರ್ವಹಿಸಲಿದೆ ಎನ್ನುವ ಒಪ್ಪಂದವಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಕಾಮಗಾರಿಯು 2019ರಲ್ಲಿ ಪ್ರಾರಂಭಗೊಂಡು 2022 ಮೇ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ಕೆಲಸ ನಡೆಯಲಿಲ್ಲ. ನಡುವೆ ಕಾರ್ಮಿಕರ ಕೊರತೆಯು ಕಾಡಿತ್ತು. ಹಾಗಾಗಿ ಅವಧಿ ಪುನಃ ಒಂದು ವರ್ಷ ವಿಸ್ತರಣೆ ಮಾಡಲಾಗಿದೆ. ಮುಂದಿನ ಮೇ ತಿಂಗಳ ಒಳಗೆ ಪೂರ್ಣಗೊಳ್ಳಲಿದೆಯೋ ಅನ್ನುವುದನ್ನು ಕಾದು ನೋಡಬೇಕಿದೆ.

ಕಾಮಗಾರಿ ನೋಟ
ಹಾಲಿ ನೆಕ್ಕಿಲಾಡಿಯಲ್ಲಿ 6.8 ಎಂಎಲ್ಡಿ (68 ಲಕ್ಷ ಲೀ.) ಸಾಮರ್ಥ್ಯದ ರೇಚಕ ಸ್ಥಾವರವಿದೆ. ಈ ಸಾಮರ್ಥ್ಯ ನಗರಕ್ಕೆ ನೀರು ಸರಬರಾಜಿಗೆ ಸಾಕಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ 8.7 ಎಂಎಲ್ಡಿ (87 ಲಕ್ಷ ಲೀ.) ಸಾಮರ್ಥ್ಯದ ರೇಚಕ ಸ್ಥಾವರವನ್ನು ನಿರ್ಮಿಸಲಾಗುತ್ತದೆ. ಈ ಮೂಲಕ ಯೋಜನೆ ಪೂರ್ಣಗೊಂಡ ಬಳಿಕ ನೆಕ್ಕಿಲಾಡಿಯಲ್ಲಿ 155 ಲಕ್ಷ ಲೀ. ನೀರು ಟ್ರೀಟ್‌ ಮಾಡಿ ಪೂರೈಸುವ ಚಿಂತನೆ ಮಾಡಲಾಗಿದೆ. ಮುರ (ಪಟ್ನೂರು) -ಮೇಲ್ಮಟ್ಟದ ಜಲಸಂಗ್ರಹಗಾರ (3 ಲಕ್ಷ ಲೀ. ಸಾಮರ್ಥ್ಯ), ಮೈಕ್ರೋವೇವ್‌ ಸ್ಟೇಷನ್‌ ಮೇಲ್ಮಟ್ಟದ ಜಲಸಂಗ್ರಹಗಾರ (1 ಲಕ್ಷ ಲೀ. ಸಾಮರ್ಥ್ಯ) ಸಿಟಿಗುಡ್ಡೆ ನೆಲಮಟ್ಟದ ಜಲಸಂಗ್ರಹಗಾರ (10 ಲಕ್ಷ ಲೀ.), ಸಿಟಿಒ, ದರ್ಬೆಮೇಲ್ಮಟ್ಟದ ಜಲಸಂಗ್ರಹಗಾರ (6 ಲಕ್ಷ ಲೀ.), ಲಿಂಗದಗುಡ್ಡ ಮೇಲ್ಮಟ್ಟದ ಜಲಸಂಗ್ರಹಗಾರ (2.5 ಲಕ್ಷ ಲೀ. ಸಾಮರ್ಥ್ಯ) ಬಲಾ°ಡ್‌ ಹೆಲಿಪ್ಯಾಡ್‌ ಮೇಲ್ಮಟ್ಟದ ಜಲಸಂಗ್ರಹಗಾರ (2 ಲಕ್ಷ ಲೀ.), ಬಲಾ°ಡ್‌ ಕೆಲ್ಯಾಡಿ ಮೇಲ್ಮಟ್ಟದ ಜಲಸಂಗ್ರಹಗಾರ(1 ಲಕ್ಷ ಲೀ. ಸಾಮರ್ಥ್ಯ) ಮೊದಲಾದಿಯಾಗಿ ಕಾಮಗಾರಿ ನಡೆಸಲು ಉದ್ದೇಶಿಸಿದ್ದು ಸಿವಿಲ್‌ ವರ್ಕ್‌ ಪೂರ್ಣಗೊಂಡಿದೆ.

Advertisement

ವ್ಯಾಪಕ ದೂರು
ಜಲಸಿರಿ ಕಾಮಗಾರಿಯ ಬಗ್ಗೆ ಆರಂಭದಿಂದಲೇ ಸಾರ್ವಜನಿಕರಿಂದ ದೂರು ಕೇಳಿ ಬಂದಿತ್ತು. ಕಾಮಗಾರಿಯ ಅವ್ಯವಸ್ಥೆಯಿಂದ ರಸ್ತೆ ಹಾಳಾಗಿದ್ದು ಕೆಲವೆಡೆ ಮನೆಗಳ ಸಂಪರ್ಕ ರಸ್ತೆಯೇ ಕಡಿತಗೊಂಡಿದೆ. ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಗಳಲ್ಲಿಯು ಚರ್ಚೆ ನಡೆದಿತ್ತು. ಜಲಸಿರಿಗೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿದ್ದರೂ ಸಮಸ್ಯೆ ಸರಿ ಆಗಿಲ್ಲ. ಸ್ವತಃ ನಗರಸಭೆ ಪೌರಾಯುಕ್ತರು ಮೇಲಧಿಕಾರಿಗಳಿಗೆ ದೂರು ನೀಡಿದ ವಿದ್ಯಮಾನವು ನಡೆದಿದೆ.

ಶೀಘ್ರ ಕಾಮಗಾರಿ ಪೂರ್ಣಕ್ಕೆ ಸೂಚನೆ
ಜಲಸಿರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ನಗರಸಭೆಯ ಸಾಮಾನ್ಯ ಸಭೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೋವಿಡ್‌ ಕಾರಣದಿಂದ ಕಾಮಗಾರಿ ಪೂರ್ಣಗೊಳಿಸಲು ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು.
-ಮಧು ಎಸ್‌. ಮನೋಹರ್‌, ಪೌರಾಯುಕ್ತ, ನಗರಸಭೆ ಪುತ್ತೂರು

ಏನಿದು ಯೋಜನೆ
ನಗರಸಭೆ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಜಂಟಿ ಸಹಯೋಗದಲ್ಲಿ ಎಡಿಬಿ ಎರಡನೇ ಹಂತದ ಹೊಸ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿತ್ತು. ಶೇ. 50ರಷ್ಟು ಎಡಿಬಿ ಸಾಲ, ಶೇ. 40 ರಾಜ್ಯ ಸರಕಾರದ ಅನುದಾನ ಹಾಗೂ ಶೇ. 10 ಅನುದಾನವನ್ನು ಸ್ಥಳೀಯಾಡಳಿತ ಭರಿಸುವ ಒಪ್ಪಂದದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next