Advertisement

ಸ್ಮಶಾನದಲ್ಲಿ ಗುಂಡಿ ತೋಡಿದರೆ ಬಸಿ ನೀರು!

04:29 PM Jan 17, 2020 | Naveen |

ಜಾಲಹಳ್ಳಿ: ದಟ್ಟವಾಗಿ ಬೆಳೆದು ನಿಂತಿರುವ ಜಂಗಲ್‌, ಮೂರು ಅಡಿ ಅಗೆದರೆ ನೀರು ಬರುವ ಪ್ರದೇಶ, ಹಳೆ ಕುಣಿ ಅಗೆದು ಶವ ಉಳುವ ಅನಿವಾರ್ಯ ಪರಸ್ಥಿತಿ, ಎರಡು ಕಿ.ಮೀ. ನಡೆದು ಹೋಗುವ ಅನಿವಾರ್ಯತೆ, ಅಭಿವೃದ್ಧಿ ಮರೀಚಿಕೆ..ಇದು ಇಲ್ಲಿನ ಸ್ಮಶಾನದ ದುಸ್ಥಿತಿ.

Advertisement

ಪಟ್ಟಣದಲ್ಲಿ 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಷ್ಟೊಂದು ಜನಸಂಖ್ಯೆಗೆ ಕೇವಲ 30 ಗುಂಟೆ ಸ್ಮಶಾನ ಜಾಗೆ ಇದೆ. ಅದೂ ಕೂಡ ಶವ ಹೂಳಲು ಯೋಗ್ಯವಲ್ಲದ ಭೂಮಿ. ಸ್ಮಶಾನದ ಸುತ್ತಲೂ ನೀರು ಹರಿಯುತ್ತಿದೆ. ಶವ ಹೂಳಲು ಎರಡ್ಮೂರು ಅಡಿ ಕುಣಿ ತೆಗೆದರೆ ಬಸಿ ನೀರು ಬರುತ್ತದೆ. ವರ್ಷದಲ್ಲಿ ಎರಡ್ಮೂರು ತಿಂಗಳು ಬಿಟ್ಟರೆ ಉಳಿದ ಎಲ್ಲ ದಿನಗಳಲ್ಲಿ ಶವ ಹೂಳಲು ಗುಂಡಿ ತೋಡಿದರೆ ಬಸಿ ನೀರು ಬರುತ್ತದೆ. ಅನಿವಾರ್ಯವಾಗಿ ಬಸಿ ನೀರಲ್ಲೇ ಶವ ಹೂಳುವ ಸ್ಥಿತಿ ಇದೆ.

ಸ್ಮಶಾನದಲ್ಲಿ ಜಾಲಿಗಿಡಗಳು ಬೆಳೆದಿವೆ. ಸ್ಮಶಾನದಲ್ಲಿ ಸ್ವಚ್ಛತೆ, ಅಭಿವೃದ್ಧಿ ಮರೀಚಿಕೆಯಾಗಿದೆ. ಇಷ್ಟೆಲ್ಲ ಸಮಸ್ಯೆ ಇರುವ ಸ್ಮಶಾನದ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಶವ ಹೂಳಲು ಬಂದಾಗ ಸ್ಮಶಾನ ಅಭಿವೃದ್ಧಿ ಬಗ್ಗೆ ಮಾತನಾಡುವ ಜನ ಮತ್ತೆ ಮರೆತು ಹೋಗುತ್ತಾರೆ.

ಪರಿಶಿಷ್ಟ ಜಾತಿ ಸಮಾಜದ ಸ್ಮಶಾನಕ್ಕಾಗಿ ಸರಕಾರ ಒಂದು ಎಕರೆ ಭೂಮಿ ನೀಡಿದ್ದು, ಗ್ರಾಮದಿಂದ ಎರಡು ಕಿ.ಮೀ. ಅಂತರದಲ್ಲಿದೆ. ಗಂಗಾಮತಸ್ಥ, ರಾಜಸ್ತಾನಿ ಸಮಾಜಗಳು ಕೂಡ ಪ್ರತ್ಯೇಕ ಸ್ಮಶಾನ ಹೊಂದಿದ್ದರೂ ಅವೂ ಎರಡು ಕಿ.ಮೀ. ಅಂತರದಲ್ಲಿವೆ. ಶವ ಸಂಸ್ಕಾರಕ್ಕೆ ಜನ ಎರಡು ಕಿ.ಮೀ. ನಡೆದುಕೊಂಡೇ ಹೋಗಬೇಕಿದೆ.

ಜನಸಂಖ್ಯೆ ಹೆಚ್ಚಳ: ಜಾಲಹಳ್ಳಿಯಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಗ್ರಾಮ ಬೆಳೆಯುತ್ತಿದೆ. ಆದರೆ ಇದಕ್ಕೆ ತಕ್ಕಂತೆ ಸ್ಮಶಾನ ಇಲ್ಲದಿರುವುದರಿಂದ ಶವ ಹೂಳಿದ ಹಳೆ ಕುಣಿಗಳನ್ನೇ ತೆಗೆದು ಮತ್ತೇ ಶವ ಹೂಳುವ ಪರಿಸ್ಥಿತಿ ಇದೆ. ಸ್ಮಶಾನದಲ್ಲಿನ ಅವ್ಯವಸ್ಥೆ, ಕುಣಿ ಅಗೆದರೆ ಬಸಿ ನೀರು ಬರುವುದರಿಂದ ಕೆಲವರು ತಮ್ಮ ಸ್ವಂತ ಜಮೀನಿನಲ್ಲೇ ಶವ ಸಂಸ್ಕಾರ ಮಾಡುತ್ತಾರೆ.

Advertisement

ಒತ್ತುವರಿ: ಸ್ಮಶಾನಕ್ಕೆ ಇರುವ 30 ಗುಂಟೆ ಜಾಗೆಯಲ್ಲಿ ಜಂಗಲ್‌ ಬೆಳೆದಿದ್ದರೆ, ಕೆಲವರು ಸ್ಮಶಾನದ ಸ್ಥಳ ಒತ್ತುವರಿ ಮಾಡಿಕೊಂಡಿದ್ದಾರೆ. ಸ್ಮಶಾನಕ್ಕೆ ಸುತ್ತಲೂ ಆವರಣ ಗೋಡೆ ಇಲ್ಲ. ಸ್ಮಶಾನಕ್ಕೆ ಹೋಗಲು ಸರಿಯಾದ ದಾರಿ ಇಲ್ಲ. ನೀರಿನ ವ್ಯವಸ್ಥೆ ಇಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ, ಚಲುವಾದಿ, ಕುರುಬರು, ಆರೇರು, ಹಡಪದ, ಜಂಗಮರು, ಜೋಗೆರು, ಪತ್ತಾರ, ಕುಂಬಾರ, ಸವಿತಾ, ಮೋಡಿ, ಕಬ್ಬೇರ, ಉಪಾರ ಸೇರಿದಂತೆ ಇತರೆ ಕೆಲ ಸಮಾಜದವರು ಇದೇ ಸ್ಮಶಾನದಲ್ಲಿ ಶವ ಹೂಳುತ್ತಾರೆ. ಆದರೆ ಯಾರೊಬ್ಬರು ಸ್ಮಶಾನದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವದು ವಿಪರ್ಯಾಸವಾಗಿದೆ. ಈಗಲಾದರೂ ಸಂಬಂಧಿ ಸಿದ ಅಧಿ ಕಾರಿಗಳು ಗಮನ ಹರಿಸಿ ಸ್ಮಶಾದ ಸಮಸ್ಯೆಗೆ ಕಾಯಕಲ್ಪ ನೀಡಬೇಕು ಎನ್ನುವದು ಗ್ರಾಮಸ್ಥರ ಒತ್ತಾಯವಾಗಿದೆ.

ಸ್ಮಾಶಾನ ಅಭಿವೃದ್ಧಿ ಬಗ್ಗೆ ಗ್ರಾಮ ಪಂಚಾಯಿತಿ ಪ್ರತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಆಗುತ್ತದೆ. ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ರಕ್ಷಣಾ ಗೋಡೆ ನಿರ್ಮಾಣಕ್ಕೆ ವರ್ಷದ ಹಿಂದೆಯೇ ಎಂಜಿಎನ್‌ಆರ್‌ ಇಜಿ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿತ್ತು. ತಾಪಂ. ಇಒ ಅನುಮೋದನೆ ನೀಡಲು ಮೀನಾಮೇಷ ಮಾಡುತ್ತಿದ್ದಾರೆ.
ಭವಾನಿ ನಾಡಗೌಡ,
ಗ್ರಾಪಂ ಸದಸ್ಯರು

ಸ್ಮಶಾನದಲ್ಲಿ ಜಾಗೆ ಸಮಸ್ಯೆಯಿಂದಾಗಿ ಹಳೆ ಕುಣಿ ತೋಡಿ ಹೆಣ ಹೂಳಬೇಕಿದೆ. ಜಂಗಲ್‌ ಕಟ್‌ ಮಾಡಿಸಿ ಎಂದು ಗ್ರಾಪಂ ಅಧಿಕಾರಿಗಳಿಗೆ ಹತ್ತಾರು ಸಲ ಹೇಳಿದ್ದೇವೆ, ಯಾವುದೇ ಪ್ರಯೋಜನ ಆಗಿಲ್ಲ. ಎರಡ್ಮೂರು ಅಡಿ ಕುಣಿ ತೋಡಿದರೆ ನೀರು ಬಸಿಯುತ್ತದೆ. ಬಸಿ ನೀರಿನಲ್ಲೇ ಶವ ಹೂಳುತ್ತಾರೆ. ಸರಕಾರ ಸ್ಮಶಾನಕ್ಕೆ ಬೇರೆ ಕಡೆ ಸ್ಥಳದ ವ್ಯವಸ್ಥೆ ಮಾಡಬೇಕು.
ಮಲ್ಲಪ್ಪ ,
ಜಾಲಹಳ್ಳಿ ಗ್ರಾಮಸ್ಥ.

„ಚಂದ್ರಶೇಖರ ನಾಡಗೌಡ

Advertisement

Udayavani is now on Telegram. Click here to join our channel and stay updated with the latest news.

Next