ಜಗಳೂರು: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ದಣಿವಾರಿಸಿಕೊಳ್ಳಲು ಕಲ್ಲಂಗಡಿ, ಎಳನೀರು, ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದಾರೆ. ಪಟ್ಟಣದಲ್ಲಿ ಕಳೆದ ವಾರದಿಂದ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬೆಳಗ್ಗೆ 9 ಗಂಟೆಯಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದೆ.
ಬಿಸಿಲಿನ ತಾಪಮಾನ ಏರಿಕೆಯಿಂದ ಪಟ್ಟಣದಲ್ಲಿ ಮಧ್ಯಾಹ್ನ 12ಗಂಟೆಗೆ ರಸ್ತೆಗಳಲ್ಲಿ ಜನರ ಓಡಾಟ ವಿರಳವಾಗಿರುತ್ತದೆ. ಬೆಳಗ್ಗೆ 9ಗಂಟೆಯಿಂದಲೇ ಕೊಡೆ ಹಿಡಿದು ನಡೆದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಬಿರು ಬಿಸಿಲು ವ್ಯಾಪಾರ, ವಹಿವಾಟು ಮೇಲೂ ಪರಿಣಾಮ ಬೀರಿದೆ. ಅಂಗಡಿಗಳಲ್ಲಿ ಮಧ್ಯಾಹ್ನದ ಸಮಯ ಗ್ರಾಹಕರೇ ಇರುವುದಿಲ್ಲ. ಬಾಯಾರಿಕೆ ನೀಗಿಸಿಕೊಳ್ಳಲು ಜನರು ಕಲ್ಲಂಗಡಿ ಹಣ್ಣು, ಎಳ ನೀರು, ಕಬ್ಬಿನ ಹಾಲು, ಮಜ್ಜಿಗೆಯಂತಹ ತಂಪು ಪಾನೀಯಗಳ ಕಡೆಗೆ ಮೊರೆ ಹೋಗಿದ್ದಾರೆ.
ಎಳನೀರು ದೇಹಕ್ಕೆ ತಂಪು ನೀಡುವುದರಿಂದ ಎಳನೀರಿಗೆ ಬೇಡಿಕೆ ಹೆಚ್ಚಿದೆ. ಪಟ್ಟಣದ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಸರಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಎಳ ನೀರು ವ್ಯಾಪಾರ ಜೋರಾಗಿದೆ. ಈ ಭಾಗದಲ್ಲಿ ಎಳ ನೀರು ದೊರೆಯುವುದು ಕಷ್ಟ. ಸುಮಾರು 50 ಕಿಮೀ ದೂರದಿಂದ ತಂದು ವ್ಯಾಪಾರ ಮಾಡಬೇಕು. ಒಂದು ಎಳನೀರಿಗೆ 5 ರಿಂದ 6 ರೂ. ಉಳಿಯುತ್ತದೆ. ಬೇಸಿಗೆಯಾಗಿರುವುದರಿಂದ ಪ್ರತಿ ನಿತ್ಯ 100 ರಿಂದ 150 ಮಾರಾಟ ಮಾಡಲಾಗುವುದು ಎನ್ನುತ್ತಾನೆ ಎಳನೀರು ವ್ಯಾಪಾರಿ.
ಪಟ್ಟಣದ ಅಂಬೇಡ್ಕರ್ ವೃತ್ತ ತೋಟಗಾರಿಕೆ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಕಲ್ಲಂಗಡಿ ಹಣ್ಣುಗಳ ತಳ್ಳುವ ಗಾಡಿಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಒಂದು ಪೀಸ್‌ಗೆ ಹತ್ತು ರೂ. ದರ ನಿಗದಿಪಡಿಸಲಾಗಿದೆ. ಕಲ್ಲಂಗಡಿ ಹಣ್ಣುಗಳನ್ನು ಲೋಡ್‌ಗಟ್ಟೆಲೆ ದೂರುದ ತಮಿಳುನಾಡಿನಿಂದ ಖರೀದಿಸಿ ತರಲಾಗುತ್ತಿದ್ದು, ಪ್ರತಿನಿತ್ಯ 40 ರಿಂದ 50 ಹಣ್ಣುಗಳ ಮಾರಾಟ ಮಾಡುತ್ತಿದ್ದೇವೆ. ಖರ್ಚು ವೆಚ್ಚವೆಲ್ಲ ತೆಗದು ದಿನಕ್ಕೆ 400 ರಿಂದ 500 ರೂ. ಉಳಿಯುತ್ತಿದೆ ಎನ್ನುತ್ತಾರೆ ಕಲ್ಲಂಗಡಿ ಹಣ್ಣಿನ ವ್ಯಾಪಾರಿ.
ಬಿಸಿಲಿನ ತಾಪದಿಂದ ದೇಹವು ತಣ್ಣನೆಯ ಪಾನೀಯಗಳ ಕಡೆ ಹೆಚ್ಚು ಒಲವು ತೋರಿಸುತ್ತಿದ್ದು, ಕೆಲವರು ಕಬ್ಬಿನ ಹಾಲಿನ ಮೊರೆ ಹೊದರೆ ಮತ್ತೆ ಕೆಲವರು, ಐಸ್ ಕ್ರೀಮ್, ಮಜ್ಜಿಗೆಗಳ ಮೊರೆ ಹೋಗಿ ಸ್ವಲ್ಪ ಮಟ್ಟಿಗಾದರೂ ದಾಹ ತಿರಿಸಿಕೊಳ್ಳುತ್ತಿದ್ದಾರೆ.