Advertisement

12 ಗ್ರಾಮಗಳಿಗೆ ಕುಡಿಯುವ ನೀರಿಗೆ ಜಲಧಾರೆ

07:52 PM Aug 02, 2021 | Team Udayavani |

ಪುತ್ತೂರು: ಜಲಧಾರೆ ಯೋಜನೆಯಡಿ ಪುತ್ತೂರು ವಿಧಾನಸಭೆ ಕ್ಷೇತ್ರದ 12 ಗ್ರಾಮಗಳ ವ್ಯಾಪ್ತಿಗೆ ಶುದ್ಧ ಕುಡಿಯುವ ನೀರು ಪೂರೈಸಲು 140 ಕೋ.ರೂ.ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಪುತ್ತೂರು ವಿಧಾನಸಭೆ ಕ್ಷೇತ್ರದ ಬಂಟ್ವಾಳ ತಾಲೂಕಿನ ವಿಟ್ಲ ವ್ಯಾಪ್ತಿಯ ಗ್ರಾಮಗಳನ್ನು ಈ ಯೋಜನೆಗೆ ಒಳಪಡಿಸಿದ್ದು ಇದರ ಅನುಷ್ಠಾನದ ಮೂಲಕ 24 ತಾಸು ನೀರು ಹರಿಸುವ ಉದ್ದೇಶ ಹೊಂದಲಾಗಿದೆ.

ಅಣೆಕಟ್ಟಿನಿಂದ ನೀರು:

ಜಲಧಾರೆ ಯೋಜನೆ ಅನುಷ್ಠಾನದ ವ್ಯಾಪ್ತಿಯಲ್ಲಿ ಅಣೆಕಟ್ಟು ಮೂಲಕ ನೀರು ಬಳಸಿ ಪೂರೈಕೆ ಮಾಡಲಾಗುತ್ತದೆ. ವಿಟ್ಲ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಗೆ ಕಡೆಶ್ವಾಲ್ಯ, ಸರಪಾಡಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ಅಣೆಕಟ್ಟಿದ್ದು ಅದರಲ್ಲಿ ಒಂದು ಅಣೆಕಟ್ಟಿನಿಂದ ನೀರನ್ನು ಸಂಗ್ರಹಿಸಿ ಶುದ್ಧೀಕರಿಸಿ ಬಳಿಕ ಪೈಪು ಲೈನ್‌ಗಳ ಮೂಲಕ ಪೂರೈಸಲಾಗುತ್ತದೆ. ಅಣೆಕಟ್ಟು ಇರುವ ಕಾರಣಕ್ಕೆ ಈ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ವಾಟರ್‌ ಫೀಡರ್‌ ಪೈಪ್‌ಲೈನ್‌ ಜಾಲ:

Advertisement

ವಿದ್ಯುತ್‌ ಫೀಡರ್‌ ಮಾದರಿಯಲ್ಲೆ ಅಣೆಕಟ್ಟುಗಳಿಂದ ಬಹುಗ್ರಾಮ ಕುಡಿಯುವ ನೀರಿನ ಘಟಕಗಳಿಗೆ ನೇರ ವಾಗಿ ನೀರು ತಲುಪುವಂತೆ “ವಾಟರ್‌ ಫೀಡರ್‌ ಪೈಪ್‌ಲೈನ್‌ ಜಾಲ ನಿರ್ಮಿಸಿ ಬಳಿಕ ಪ್ರತೀ ಮನೆ ಮನೆಗೆ ನೀರು ಹರಿಸಲಾಗುತ್ತದೆ. ಜಲಾಶಯಗಳಲ್ಲಿ ಕಾಯ್ದಿಟ್ಟ ನೀರನ್ನು ಕುಡಿಯುವ ಉದ್ದೇಶಕ್ಕೆ ನಿರ್ವಹಿಸಬಹುದು ಎಂಬ ಲೆಕ್ಕಾಚಾರಕ್ಕೆ ಬರಲಾಗಿದ್ದು, ಭವಿಷ್ಯದಲ್ಲಿ ನೀರಿನ ಅಭಾವ ಕಾಡದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇದು ಪೂರಕ ಎಂದು ಪರಿಭಾವಿಸಲಾಗಿದೆ.

ಅಣೆಕಟ್ಟಿಲ್ಲದಿದ್ದರೆ ಜಲಧಾರೆಯಿಲ್ಲ :

ಅಣೆಕಟ್ಟು ಇಲ್ಲದೆ ಇರುವ ತಾಲೂಕಿಗೆ ಜಲಧಾರೆ ಯೋಜನೆ ನೀಡಲಾಗುತ್ತಿಲ್ಲ. ಏಕೆಂದರೆ ಜಲಸಂಗ್ರಹ ಇರುವ ಮೂಲವೇ ಯೋಜನೆ ಜಾರಿಗೆ ಮುಖ್ಯ ಅಂಶ. ಪುತ್ತೂರು ಮತ್ತು ಸುಳ್ಯ ತಾ|ನ ನದಿಗಳಲ್ಲಿ ಅಣೆಕಟ್ಟು ಇಲ್ಲದ ಕಾರಣ ಜಲಧಾರೆ ಯೋಜನೆ ಇಲ್ಲಿಗೆ ಅನ್ವಯ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಪುತ್ತೂರು ತಾ|ನಲ್ಲಿ ಕಟಾರ, ವಳಾಲಿನಲ್ಲಿ ಅಣೆಕಟ್ಟು ನಿರ್ಮಾಣದ ಪ್ರಸ್ತಾವ ಇರಿಸಿ ಮುಂದಿನ ದಿನಗಳಲ್ಲಿ ಜಲಧಾರೆ ಯೋಜನೆ ಬಳಸಿಕೊಳ್ಳುವ ಚಿಂತನೆ ನಡೆದಿದೆ. ಸುಳ್ಯ ವಿಧಾನಸಭೆ ಕ್ಷೇತ್ರದ ಶಾಂತಿಮೊಗರು ಬಳಿ ಅಣೆಕಟ್ಟು ನಿರ್ಮಾಣ ಅಂತಿಮ ಹಂತಕ್ಕೆ ಬಂದಿದ್ದು ಅಲ್ಲಿ ಯೋಜನೆ ಜಾರಿಗೆ ಅವಕಾಶ ಸಿಗಲಿದೆ.

ಜಲಧಾರೆಸೂಕ್ತ :

ಭೂ ಮೇಲ್ಮೈಜಲಮೂಲಗಳಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ರಾಜ್ಯದ ಬಹುಭಾಗಗಳಲ್ಲಿ ಅಂತರ್ಜಲ ಮಟ್ಟ ಕುಸಿಯುವ ಜತೆಗೆ, ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ. ಇಂತಹ ಕಡೆ ಪೈಪ್‌ಲೈನ್‌ ವ್ಯವಸ್ಥೆಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವುದು ಅನಿವಾರ್ಯ ಎನ್ನುವ ಅಂಶವನ್ನು ಆಧರಿಸಿ ಸರಕಾರ ಜಲಧಾರೆ ಯೋಜನೆ ರಾಜ್ಯವ್ಯಾಪ್ತಿ ಅನುಷ್ಠಾನಿಸಿದೆ.

ನಗರದಲ್ಲಿ ಜಲಸಿರಿ ಯೋಜನೆ ಜಾರಿಯಲ್ಲಿದ್ದು, ಅದೇ ತರಹ ಗ್ರಾಮಮಟ್ಟದಲ್ಲಿಯು ನೀರೊದಗಿಸಲು ಜಲಧಾರೆ ಯೋಜನೆ ರೂಪಿಸಲಾಗಿದೆ. ವಿಟ್ಲ ವ್ಯಾಪ್ತಿಯ 12 ಗ್ರಾಮ ವ್ಯಾಪ್ತಿಯಲ್ಲಿ ನೀರೊದಗಿಸಲು ಜಲಧಾರೆ ಯೋಜನೆ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲಿ ಅನುದಾನ ಬಿಡುಗಡೆಗೊಳ್ಳಲಿದೆ. -ಸಂಜೀವ ಮಠಂದೂರು, ಶಾಸಕರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next