Advertisement

ಪಾಳು ಬಿದ್ದ 6 ದಶಕಗಳ ಇತಿಹಾಸದ ಜಕ್ರಿಬೆಟ್ಟು ಶಾಲಾ ಕಟ್ಟಡ

09:43 AM Aug 01, 2022 | Team Udayavani |

ಬಂಟ್ವಾಳ: ನಗರ ವ್ಯಾಪ್ತಿಯಲ್ಲೇ ಇರುವ 6 ದಶಕಗಳ ಇತಿಹಾಸದ ಜಕ್ರಿಬೆಟ್ಟು ಗಿರಿಗುಡ್ಡೆ ಸರಕಾರಿ ಕಿ. ಪ್ರಾ. ಶಾಲೆಯು 5 ವರ್ಷಗಳ ಹಿಂದೆ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟಿದ್ದು, ಇದೀಗ ಶಾಲಾ ಕಟ್ಟಡಗಳು ಪಾಳು ಬಿದ್ದಿವೆ. ಈ ಕಟ್ಟಡಗಳನ್ನು ಬೇರೆ ಯಾವುದಾದರೂ ಸರಕಾರಿ ಉದ್ದೇಶಗಳಿಗೆ ಬಳಕೆ ಮಾಡಬಹುದೇ ಎಂದು ಪ್ರಶ್ನಿಸಿದರೆ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ವಿದ್ಯಾರ್ಥಿಗಳು ಬಂದರೆ ಮತ್ತೆ ತೆರೆಯಲಾಗುತ್ತದೆ ಎಂಬ ಉತ್ತರವನ್ನು ಶಿಕ್ಷಣ ಇಲಾಖೆ ನೀಡುತ್ತದೆ.

Advertisement

ಜಕ್ರಿಬೆಟ್ಟು ಶಾಲೆಯು ಮುಚ್ಚಲ್ಪಟ್ಟಿದ್ದರೂ ಚುನಾವಣಾ ಸಂದರ್ಭದಲ್ಲಿ ಮತಗಟ್ಟೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ದುರಸ್ತಿಪಡಿಸಲಾಗುತ್ತದೆ. ಚುನಾವಣೆಯ ದಿನ ಬೀಗ ಹಾಕಿ ತೆರಳಿದರೆ ಮತ್ತೆ ಅಲ್ಲಿಗೆ ಬರುವುದು ಇನ್ನೊಂದು ಚುನಾವಣೆಯ ಸಂದರ್ಭದಲ್ಲೇ. ಆಗ ಮತ್ತೆ ಸಾವಿರಾರು ರೂಪಾಯಿಗಳ ದುರಸ್ತಿ ಕಾರ್ಯ ನಡೆಯುತ್ತದೆ.

ಶಾಲೆಯ ನಿವೇಶನವು ಶಾಲೆಯ ಹೆಸರಲ್ಲೇ ಇದ್ದು, ಕಟ್ಟಡವನ್ನು ಯಾವುದಾದರೂ ಸರಕಾರಿ ಉದ್ದೇಶಕ್ಕೆ ಬಳಕೆ ಮಾಡಿದರೆ ಕಟ್ಟಡ ಉಳಿಯುವ ಜತೆಗೆ ಪರಿಸರವೂ ಸ್ವಚ್ಛವಾಗಿರುತ್ತದೆ. ಹೀಗಾಗಿ ಕನಿಷ್ಠ ಪಕ್ಷ ಜಕ್ರಿಬೆಟ್ಟು ಹೆದ್ದಾರಿ ಬದಿಯಲ್ಲೇ ಇರುವ ಅಂಗನವಾಡಿಯನ್ನಾದರೂ ಇಲ್ಲಿಗೆ ಸ್ಥಳಾಂತರ ಮಾಡುವುದಕ್ಕೆ ಅವಕಾಶವಿದೆಯೇ ಎಂಬುದರ ಕುರಿತು ಗಮನ ಹರಿಸಲಿ ಎಂದು ಸ್ಥಳೀಯರು ಸಲಹೆ ನೀಡುತ್ತಾರೆ.

ಗತ ವೈಭವ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಸಮೀಪದ ಗಿರಿಗುಡ್ಡೆಯಲ್ಲಿರುವ ಈ ಶಾಲೆಯು 1960ರಲ್ಲಿ ಸ್ಥಾಪನೆಯಾಗಿದ್ದು, 1ರಿಂದ 5ರ ತರಗತಿಗಳನ್ನು ಹೊಂದಿದೆ. 39 ಸೆಂಟ್ಸ್‌ ನಿವೇಶನವನ್ನೂ ಹೊಂದಿದ್ದು, ಸುಸಜ್ಜಿತ ಕಟ್ಟಡ, ಅಕ್ಷರ ದಾಸೋಹ ಕೊಠಡಿ, ಶೌಚಾಲಯಗಳನ್ನೂ ಒಳಗೊಂಡಿದೆ. ಆದರೆ ಪ್ರಸ್ತುತ ಶಾಲಾ ಕಟ್ಟಡದ ಬಾಗಿಲುಗಳು ತೆರೆದುಕೊಂಡಿದ್ದು, ಅಲ್ಲಿದ್ದ ಬೆಂಚುಗಳ ಜತೆಗೆ ಇತರ ಪರಿಕರಗಳು ಕದ್ದು ಹೋಗಿರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು.

Advertisement

ಒಂದು ಕಾಲದಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಶಾಲೆಯು ಕೊನೆಯ ವರ್ಷಗಳಲ್ಲಿ 13, 6 ವಿದ್ಯಾರ್ಥಿಗಳಿಗೆ ಇಳಿದು ಮುಚ್ಚುವ ಕೊನೆಯ ವರ್ಷ ಬರೀ 2 ವಿದ್ಯಾರ್ಥಿಗಳನ್ನು ಮಾತ್ರ ಹೊಂದಿತ್ತು. ನಗರಕ್ಕೆ ಹತ್ತಿರದಲ್ಲೇ ಇದ್ದು ಎಲ್ಲ ಸೌಕರ್ಯಗಳನ್ನು ಹೊಂದಿದ್ದ ಶಾಲೆಯಲ್ಲಿ ಉತ್ತಮ ಶಿಕ್ಷಕರು ಕೂಡ ಇದ್ದರು. ಆದರೆ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ.

ಮತ್ತೆ ತೆರೆಯುವುದಕ್ಕೆ ಅವಕಾಶ

ವಿದ್ಯಾರ್ಥಿಗಳಿಲ್ಲದಿದ್ದರೆ ಸರಕಾರಿ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಿ ಮತ್ತೆ ವಿದ್ಯಾರ್ಥಿಗಳು ಬಂದರೆ ಪುನರಾರಂಭಗೊಳಿಸಲಾಗುತ್ತದೆ. ಬೇರೆ ಕಡೆಯಿಂದ ನಿಯೋಜನೆಯ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಿ ಮುಂದಿನ ವರ್ಷ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಶಾಲೆಯ ಕಟ್ಟಡದ ಪರಿಸ್ಥಿತಿ ಹೇಗಿರುತ್ತದೆ ಎಂದು ಕೇಳಿದರೆ ಇಲಾಖೆಯ ಬಳಿ ಉತ್ತರವಿಲ್ಲದಂತಾಗಿದೆ.

ಬಳಕೆಗೆ ಅವಕಾಶವಿಲ್ಲ: ವಿದ್ಯಾರ್ಥಿಗಳು ಇಲ್ಲದೇ ಇರುವ ಸಂದರ್ಭದಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವುದಾದರೆ ಅದನ್ನು ತಾತ್ಕಾಲಿಕ ನೆಲೆಯಲ್ಲಿ ಮುಚ್ಚಿ ಮತ್ತೆ ವಿದ್ಯಾರ್ಥಿಗಳು ಬಂದಾಗ ತೆರೆಯಲಾಗುತ್ತದೆ. ಶಾಶ್ವತವಾಗಿ ಮುಚ್ಚಲಾಗಿದೆ ಎಂಬುದಿಲ್ಲ. ಆದರೆ ಮುಚ್ಚಿರುವ ಶಾಲಾ ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡುವುದಕ್ಕೆ ಇಲಾಖೆಯಲ್ಲಿ ಯಾವುದೇ ಅವಕಾಶವಿಲ್ಲ. –ಜ್ಞಾನೇಶ್‌ ಎಂ.ಪಿ., ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

ಕಟ್ಟಡ ಬಳಕೆಯಾಗಲಿ: ನಾವೆಲ್ಲರೂ ಕಲಿತ ಶಾಲೆಯಾಗಿದ್ದು, ಅದನ್ನು ಉಳಿಸುವುದಕ್ಕೆ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಈಗ ಕಟ್ಟಡ ಪಾಳು ಬಿದ್ದಿದೆ. ಹೀಗಾಗಿ ಅದನ್ನು ಯಾವುದಾದರೂ ಉದ್ದೇಶಕ್ಕೆ ಬಳಕೆ ಮಾಡಬೇಕು. ಇಲ್ಲದೇ ಇದ್ದರೆ ಅದು ಶಿಥಿಲಾವಸ್ಥೆಗೆ ತಲುಪಿ ಬಿದ್ದು ಹೋಗುತ್ತದೆ. ಹೀಗಾಗಿ ಈ ಕುರಿತು ಸಂಬಂಧಪಟ್ಟವರು ಗಮನಹರಿಸಲಿ. –ಗಣೇಶ್‌ ಪೂಜಾರಿ ಗಿರಿಗುಡ್ಡೆ, ಕೊನೆಯ ಎಸ್‌ಡಿಎಂಸಿ ಅಧ್ಯಕ್ಷರು.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next