ಹೊಸದಿಲ್ಲಿ : ಪಾಕಿಸ್ಥಾನದ ಐಎಸ್ಐ ಗುಪ್ತಚರ ಸಂಸ್ಥೆಯು ಜೈಶ್ ಎ ಮೊಹಮ್ಮದ್ ಮತ್ತು ಇಸ್ಲಾಮಿಕ್ ಉಗ್ರ ಸಂಘಟನೆಯ (ISIS) ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದು ಭಾರತದಲ್ಲಿ ಫಿದಾಯೀಂ ಬಾಂಬ್ ದಾಳಿಗಳನ್ನು ನಡೆಸುವ ಸಂಭವವಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.
ಭಾರತೀಯ ಗುಪ್ತಚರ ದಳ ಈ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿರುವ ವರದಿಯಲ್ಲಿ, ಪಾಕ್ ಐಎಸ್ಐ, ಜೈಶ್ ಎ ಮೊಹಮ್ಮದ್ ಮತ್ತು ಐಸಿಸ್ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕರೊಂದಿಗೆ ಅಫ್ಘಾನಿಸ್ಥಾನದಲ್ಲಿ ರಹಸ್ಯ ಮಾತುಕತೆ ನಡೆಸಿದ್ದು ಭಾರತದಲ್ಲಿ ಫಿದಾಯೀಂ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಲು ಸ್ಕೆಚ್ ಹಾಕಿರುವುದಾಗಿ ತಿಳಿದು ಬಂದಿದೆ.
ಪಾಕ್ ಐಎಸ್ಐ ಭಾರತದ ಕಾಶ್ಮೀರದಲ್ಲಿ ಪುಲ್ವಾಮಾ ರೀತಿಯ ಉಗ್ರ ದಾಳಿಗಳನ್ನು ನಡೆಸಲು ಉದ್ದೇಶಿಸಿದ್ದು ಇದಕ್ಕಾಗಿ ಐಸಿಸ್, ಮತ್ತು ಜೆಇಎಂ ನ ಉಗ್ರರನ್ನು ಜಂಟಿಯಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದೆ ಎಂದು ವರದಿ ತಿಳಿಸಿದೆ.
ಈ ನಡುವೆ ಗೃಹ ಸಚಿವಾಲಯದ ಅಧಿಕಾರಿಗಳು, “ಅಫ್ಘಾನಿಸ್ಥಾನದಲ್ಲ ಜೈಶ್ ಮತ್ತು ತಾಲಿಬಾನ್ ಉಗ್ರರು ನ್ಯಾಟೋ ಮಿಲಿಟರಿ ವಿರುದ್ಧ ಸುದೀರ್ಘ ಕಾಲದಿಂದ ಕಾಳಗ ನಿರತವಾಗಿದ್ದು ನಾವು ಅಲ್ಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಐಸಿಸ್ ಮತ್ತು ಜೈಶ್ ಉಗ್ರರನ್ನು ಬಳಸಿಕೊಂಡು ಭಾರತದ ವಿರುದ್ಧ ದಾಳಿ ಪಿತೂರಿ ನಡೆಸಲು ಪಾಕ್ ಐಎಸ್ಐ ಸ್ಕೆಚ್ ಹಾಕುತ್ತಿದೆ ಎಂಬುದನ್ನು ಕೂಡ ನಾವು ಗಮನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.