ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಕಾಲಿವುಡ್ ಸಿನಿಮಾರಂಗದಲ್ಲಿ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ. ಸಿನಿಮಾ ರಿಲೀಸ್ ಆಗಿ ಎರಡು ತಿಂಗಳು ಕಳೆದರೂ, ಸಿನಿಮಾ ಕ್ರಿಯೇಟ್ ಮಾಡಿದ ಹೈಪ್ ಇಂದಿಗೂ ಹಾಗೆಯೇ ಇದೆ. ಒಂದು ರೀತಿಯಲ್ಲಿ ʼಜೈಲರ್ʼ ಮ್ಯಾಜಿಕ್ ಪ್ರೇಕ್ಷಕರ ಮನದಲ್ಲಿ ಅಚ್ಚಾಗಿ ಉಳಿದಿದೆ.
ರಜಿನಿಕಾಂತ್ ಸಿನಿಮಾದಲ್ಲಿ ʼತಲೈವಾʼ ಅವರ ಮಾಸ್ & ಖಡಕ್ ಡೈಲಾಗ್ಸ್ ಗಳಿಂದ ಪ್ರೇಕ್ಷಕರು ಥಿಯೇಟರ್ ನಲ್ಲಿ ಕುಣಿದು ಕುಪ್ಪಳಿಸಿದ್ದರು. ಅಷ್ಟೇ ದೊಡ್ಡಮಟ್ಟದಲ್ಲಿ ಸಿನಿಮಾದಲ್ಲಿನ ಕೆಲ ಪಾತ್ರಗಳಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತು. ಇಡೀ ಸಿನಿಮಾದಲ್ಲಿ ಕೇವಲ 8 ನಿಮಿಷದ ಪಾತ್ರವನ್ನು ಮಾಡಿದ ಕನ್ನಡದ ಶಿವರಾಜ್ ಕುಮಾರ್ ಅವರ ʼನರಸಿಂಹʼ ಲುಕ್ & ಖದರ್ ಎಲ್ಲರೂ ಫಿದಾ ಆಗಿದ್ದಾರೆ.
ಎಲ್ಲಿಯವರೆಗೆ ಅಂದರೆ ಶಿವಣ್ಣನ ಪಾತ್ರದ ಬಳಿಕ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ. ʼಜೈಲರ್ʼ ನಲ್ಲಿನ ಪಾತ್ರ ಕೊಟ್ಟ ಖುಷಿಯ ಬಗ್ಗೆ ಶಿವರಾಜ್ ಕುಮಾರ್ ʼ ಗಲಾಟ್ಟಾ ಪ್ಲಸ್ʼ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
“ಸಿನಿಮಾ ರಿಲೀಸ್ ಆಗಿ ಒಂದು ವಾರದ ಬಳಿಕ ಚೆನ್ನೈಗೆ ಹೋಗಿದ್ದೆ. ಅಲ್ಲಿ ಸಂದರ್ಶನವಿತ್ತು. ಏರ್ ಪೋರ್ಟ್ ದಾರಿಯಲ್ಲಿ ಎಲ್ಲರೂ ಕೂಡ ʼನರಸಿಂಹʼ ಅಂತ ಕರೆಯುತ್ತಿದ್ದರು. ಕೇವಲ 8 ನಿಮಿಷದ ಪಾತ್ರವೊಂದು ಲೈಫ್ ಚೇಂಜ್ ಮಾಡುತ್ತೆ ಅಂದುಕೊಂಡಿರಲಿಲ್ಲ. ಲೈಫ್ ಚೇಂಜ್ ಜನ ಪಾತ್ರವನ್ನು ಮೆಚ್ಚಿಕೊಂಡಿದ್ದರಿಂದ ನನಗೆ ತುಂಬಾ ಖುಷಿ ಆಗಿದೆ. ಎಲ್ಲವೂ ಹೊಸ ರೀತಿಯಂತೆ ಹೋಗುತ್ತಿತ್ತು. ಒಂದು ಸಿನಿಮಾವೆಂದರೆ ಒಂದಷ್ಟು ಸೀನ್, ಹೀರೋ ಎಂಟ್ರಿ ಆದರೆ ಇಲ್ಲೊಂದು 8 ನಿಮಿಷದ ಪಾತ್ರವನ್ನು ʼವಿಕ್ರಮ್ʼ ಸಿನಿಮಾದ ರೋಲೆಕ್ಸ್ ಪಾತ್ರವನ್ನು ಹೋಲಿಕೆ ಮಾಡುತ್ತಿದ್ದರು. ಈ ಅನುಭವ ಹೊಸತಾಗಿತ್ತು. ಇದನ್ನು ನೋಡಿ ನನ್ನ ಪತ್ನಿ ಕೂಡ ನೀವು ಮಾಡಿದ್ದು 8 ನಿಮಿಷದ ಪಾತ್ರ ಆದರೆ ಪ್ರೇಕ್ಷಕರಿಗೆ ಅದು ತುಂಬಾ ಇಷ್ಟವಾಗಿದೆ ಅಂತ ಹೇಳುತ್ತಿದ್ದರು. ನಾನು ಹೈದರಾಬಾದ್, ಚೆನ್ನೈ ಹಾಗೂ ದುಬೈ ಹೋದರೂ ಜನ ಹತ್ರ ಬಂದು ಜೈಲರ್ ಪಾತ್ರದ ಬಗ್ಗೆ ಹೇಳುತ್ತಿದ್ದರು. ಯುಎಸ್ ನ ಹೊಟೇಲ್ ನಲ್ಲಿ ಸುಮಾರು 400 ತಮಿಳಿಗರು ಬಂದು ʼಜೈಲರ್ʼ ಪಾತ್ರದ ಬಗ್ಗೆ ಶ್ಲಾಘಿಸುತ್ತಾ ಫೋಟೋ, ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದೆಲ್ಲವೂ ಹೊಸ ಅನುಭವಾಗಿತ್ತು” ಎಂದು ಶಿವಣ್ಣ ಹೇಳಿದ್ದಾರೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ʼಜೈಲರ್ʼ ರಜಿನಿಕಾಂತ್ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಾಯಕನ್, ರಮ್ಯಾ ಕೃಷ್ಣನ್, ವಸಂತ ರವಿ, ಸುನೀಲ್, ತಮನ್ನಾ ಮತ್ತು ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ಮೋಹನ್ ಲಾಲ್, ಶಿವ ರಾಜಕುಮಾರ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.