ಶಿವಮೊಗ್ಗ: ಮಂಗಳೂರು ವಿಮಾನ ನಿಲ್ದಾಣದಕ್ಕೆ ಬಾಂಬ್ ಇಟ್ಟ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಆದಿತ್ಯ ರಾವ್ ವಿರುದ್ಧ ಜೈಲು ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಉಂಟು ಮಾಡಿದ ಆರೋಪದ ಹಿನ್ನೆಲೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ಚೀಫ್ ಸೂಪರಿಂಟೆಂಡೆಂಟ್ ಅವರು ದೂರು ನೀಡಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಆದಿತ್ಯ ರಾವ್ ಮೇ 31ರಂದು ಮಧ್ಯಾಹ್ನ ಜೈಲಿನ ವಿಡಿಯೋ ಕಾನ್ಫರೆನ್ಸ್ ಕೊಠಡಿ ಬಳಿ ಬಂದಿದ್ದ. ಇವತ್ತು ತನ್ನ ವಿಚಾರಣೆ ಇದೆಯೇ ಎಂದು ಪ್ರಶ್ನಿಸಿದ್ದ. ಅಲ್ಲಿದ್ದ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿ ಇಲ್ಲ ಎಂದು ತಿಳಿಸಿದ್ದರು. ಸ್ವಲ್ಪ ದೂರ ಹೋಗಿದ್ದ ಆದಿತ್ಯ ಹಿಂತಿರುಗಿ ವಿ.ಸಿ.ಕೊಠಡಿಯಲ್ಲಿದ್ದ ಟಿವಿಯೊಂದಕ್ಕೆ ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದಾನೆ. ಅಷ್ಟರಲ್ಲಿ ಕೊಠಡಿಯಲ್ಲಿದ್ದ ಸಿಬ್ಬಂದಿ ಆದಿತ್ಯನನ್ನು ಹಿಡಿದಿದ್ದರು. ಆದರೆ ಅವರಿಂದ ತಪ್ಪಿಸಿಕೊಂಡು ಮತ್ತೊಂದು ಟಿವಿಯನ್ನು ಒಡೆದು ಹಾಕಿದ್ದಾನೆ. ಕೂಡಲೆ ಸಿಬ್ಬಂದಿ ಆದಿತ್ಯನನ್ನು ಹಿಡಿದು ಜೈಲರ್ ವಶಕ್ಕೆ ಒಪ್ಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ 2022ರ ಜನವರಿ 20ರಂದು ಐಇಡಿ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಎರಡು ದಿನದ ಬಳಿಕ ಬೆಂಗಳೂರು ಪೊಲೀಸರು ಆದಿತ್ಯ ರಾವ್ ಎಂಬಾತನನ್ನು ಬಂಧಿಸಿದ್ದರು. ಮಂಗಳೂರಿನಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆದಿತ್ಯ ರಾವ್‌ಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ಈತ ಶಿವಮೊಗ್ಗ ಜೈಲಿನ ಶಿಕ್ಷಾ ಬಂಧಿಯಾಗಿದ್ದಾನೆ.
Related Articles
ಆದಿತ್ಯ ರಾವ್ ಈ ಹಿಂದೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ಹುಸಿ ಬಾಂಬ್ ಕರೆ ಮಾಡಿದ್ದ. ಇದರಿಂದ ಸಾರ್ವಜನಿಕರು, ಪ್ರಯಾಣಿಕರು ತೀವ್ರ ಸಮಸ್ಯೆ ಅನುಭವಿಸಿದ್ದರು. ಈ ಪ್ರಕರಣಗಳಲ್ಲಿ ಆದಿತ್ಯ ರಾವ್ ಜೈಲು ಅನುಭವಿಸಿದ್ದ.