Advertisement

ಪ್ರತ್ಯೇಕ ಕೃಷಿ ಬಜೆಟ್‌ ಮಂಡನೆಗೆ ಜೈ ಕರವೇ ಮನವಿ

10:03 AM Jan 21, 2022 | Team Udayavani |

ಕಲಬುರಗಿ: ರಾಜ್ಯದಲ್ಲಿ ಎರಡು ವರ್ಷಗಳಿಂದ ಅತಿವೃಷ್ಟಿ, ಭೀಕರ ಪ್ರವಾಹ, ನೆರೆ ಹಾವಳಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಮತ್ತು ಬರುವ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತ್ಯೇಕ ಬಜೆಟ್‌ ಮಂಡಿಸಬೇಕೆಂದು ಜೈಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

Advertisement

ಗುರುವಾರ ನಗರದಲ್ಲಿ ಜಿಲ್ಲಾಧಿಕಾರಿ ಮೂಲಕ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಸಂಘಟನೆ ಕಾರ್ಯಕರ್ತರು, ಕೃಷಿ ಕ್ಷೇತ್ರ ಆಧುನಿಕರಣಕ್ಕೆ ಹೊಸ-ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಬೆಳೆ ಸಾಲ ಮನ್ನಾ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಭೌಗೋಳಿಕ ಸೂಚ್ಯಂಕ ಪಡೆದಿರುವ ತೊಗರಿಗೆ ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಲು ಬೇಕಾದ ಸೌಕರ್ಯ ಒದಗಿಸಿಕೊಡಬೇಕು. ತೊಗರಿ ಅಭಿವೃದ್ಧಿ ಮಂಡಳಿಗೆ ಬಜೆಟ್‌ನಲ್ಲಿ ಕನಿಷ್ಟ 50 ಕೋಟಿ ರೂ. ಅನುದಾನ ಮೀಸಲಿಡಬೇಕೆಂದು ಮನವಿ ಮಾಡಿದರು.

ರೈತ ಸಂಜೀವಿನಿ ಯೋಜನೆಗೆ ಮರು ಚಾಲನೆ ನೀಡಬೇಕು. ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ರಿಯಾಯ್ತಿ, ಪ್ರೋತ್ಸಾಹ ಧನ ನೀಡುವ ಅನೇಕ ಯೋಜನೆಗಳನ್ನು ಮೊಟಕುಗೊಳಿಸಲಾಗಿದ್ದು, ಕೂಡಲೇ ಆ ಎಲ್ಲ ಯೋಜನೆಗಳನ್ನು ಯಥಾವತ್ತಾಗಿ ಮರು ಕಾರ್ಯಾನುಷ್ಠಾನಕ್ಕೆ ತರಬೇಕು. ಗಂಗಾಕಲ್ಯಾಣ ಯೋಜನೆ ಅಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕ ವಾಗಿರಬೇಕು. ಫಲಾನುಭವಿಗಳ ಆಯ್ಕೆ ಮಿತಿ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ರೈತ ಉತ್ಪಾದನಾ ಸಂಸ್ಥೆ (ಎಫ್‌ ಇಒ)ಗಳ ಅನುಷ್ಠಾನಕ್ಕೆ ಒತ್ತು ಕೊಟ್ಟು, ಶೀಘ್ರವೇ ಪ್ಯಾಕೇಜ್‌ ಹಣ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ತೊಗರಿ ಬೇಳೆ ವಿತರಿಸಲು ಕ್ರಮ ಕೈಗೊಳ್ಳಬೇಕು. ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಮಾನ್ಯ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಬೆಳೆ ಸಾಲ ನೀಡಬೇಕು. ಜತೆಗೆ ಬರುವ ಜೂನ್‌ ತಿಂಗಳಿನಿಂದ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಉಚಿತ ಬೀಜ, ರಸ ಗೊಬ್ಬರ ವಿತರಿಸಲು ಕ್ರಮ ವಹಿಸಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

Advertisement

ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಹಾಗರಗಿ, ಪ್ರಮುಖರಾದ ಜಗನ್ನಾಥ ಪಟ್ಟಣಶೆಟ್ಟಿ, ಶರಣು ಖಾನಪುರೆ, ಬಾಲರಾಜ, ಶಾಂತು, ರತ್ನಾಕರ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next