Advertisement

ನಿರ್ಮಾಪಕರ ಪರ ಜಗ್ಗೇಶ್‌ ಮಾತು

04:16 AM May 19, 2020 | Lakshmi GovindaRaj |

ನಿಧಾನವಾಗಿ ಓಟಿಟಿ ಪ್ಲಾಟ್‌ ಫ್ಲಾರ್ಮ್ ಕನ್ನಡ ಚಿತ್ರರಂಗವನ್ನು ತನ್ನತ್ತ ಸೆಳೆಯುತ್ತಿವೆ. ಚಿತ್ರಮಂದಿರದಲ್ಲೇ ಸಿನಿಮಾ ಬಿಡುಗಡೆ ಮಾಡಬೇಕೆಂಬ ಕಾನ್ಸೆಪ್ಟ್ನಿಂದ ಹೊರಬರುತ್ತಿದ್ದಾರೆ. ಈಗ ಪುನೀತ್‌ ರಾಜ್‌ ಕುಮಾರ್‌ ಒಡೆತನದ ಪಿಆರ್‌ ಕೆ  ಪ್ರೊಡಕ್ಷನ್ಸ್‌ ಬ್ಯಾನರ್‌ ನಲ್ಲಿ ನಿರ್ಮಾಣವಾಗಿರುವ ಎರಡು ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಫ್ರೆಂಚ್‌ ಬಿರಿಯಾನಿ ಹಾಗೂ ಲಾ ಚಿತ್ರಗಳು ಪ್ರೇಕ್ಷಕರಿಗೆ ಓಟಿಟಿಯಲ್ಲಿ ಮನರಂಜನೆ ನೀಡಲಿವೆ.

Advertisement

ಅಮೆಜಾನ್‌ನಲ್ಲಿ ಜುಲೈ 24ಕ್ಕೆ  ಫ್ರೆಂಚ್‌ ಬಿರಿಯಾನಿ ತೆರೆಕಂಡರೆ, ಜೂನ್‌ 26ರಂದು ಲಾ ತೆರೆಕಾಣಲಿದೆ. ಇದರ ಬೆನ್ನಿಗೆ ಇನ್ನೊಂದಿಷ್ಟು ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಗೆ ಆಸಕ್ತಿ ತೋರಿಸಿವೆ. ಈ ಹಿನ್ನೆಲೆಯಲ್ಲಿ ಜಗ್ಗೇಶ್‌ ಒಂದಷ್ಟು ಟ್ವಿಟ್‌ ಮಾಡಿದ್ದಾರೆ. ಜೊತೆಗೆ  ಓಟಿಟಿಯಲ್ಲಿ ಪಾರದರ್ಶಕ ವ್ಯವಸ್ಥೆ ಬರಬೇಕು ಮತ್ತು ನಿರ್ಮಾಪಕನಿಗೆ ಮೋಸವಾಗಬಾರದು ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಓಟಿಟಿ ರಿಲೀಸ್‌ ಕುರಿತು ಜಗ್ಗೇಶ್‌ ಮಾಡಿರುವ ಟ್ವೀಟ್‌ ಹೀಗಿದೆ;

ಷರತ್ತುಗಳ ಅಗತ್ಯವಿದೆ: ಓಟಿಟಿಯಲ್ಲಿ ನಿರ್ಮಾಪಕರಿಗೆ ಯಾವ ವ್ಯತ್ಯಾಸವೂ ಇಲ್ಲ. ಕಾರಣ ಟಿವಿ, ಥಿಯೇಟರ್‌ ಹೆಸರು ದುಡ್ಡು ಉಳ್ಳವರ ಲಾಬಿ ಆಗಿತ್ತು. ಯಾವ ಲಾಬಿಯೂ ಇಲ್ಲದವರ ಗೋಳಾಗಿತ್ತು. ಈಗ ಒಟಿಟಿಯಲ್ಲಿಯೂ ಇದೇ ಗತಿ  ಮುಂದುವರಿದು ಉಳ್ಳವರಿಗೆ ಮಾತ್ರ ದಕ್ಕಿ, ಹೊಸಬರು ಅದೇ ಸಂಕಷ್ಟದ ಸುಳಿಯಲ್ಲೆ ಉಳಿಯುತ್ತಾರೆ. ಎಲ್ಲರಿಗೂ ಸಹಾಯ ಆಗಲು ಕೆಲವು ಷರತ್ತುಗಳು ಇರಬೇಕಾದ ಅಗತ್ಯವಿದೆ.

ಪಾರದರ್ಶಕತೆ ಬೇಕು: ಹೇಗೆ ಯಡಿಯೂರಪ್ಪ ರವರು ರೈತರು ತಾವು ಬೆಳೆದ ಬೆಳೆ ಇಷ್ಟಬಂದವರಿಗೆ ಮಾರುವ  ಕಾನೂನು ಎಪಿಎಂಸಿಯಲ್ಲಿ ತಂದಿದ್ದಾರೋ, ಹಾಗೆಯೇ ಸಿನಿಮಾ ನಿರ್ಮಾಪಕ ತನ್ನ ಸಿನಿಮಾ ಇಷ್ಟಬಂದ ವೇದಿಕೆಯಲ್ಲಿ ಮಾರುವ, ಬಿತ್ತರಿಸುವ ಹಕ್ಕು ಸ್ವಾತಂತ್ರವನ್ನು ಪಡೆದುಕೊಳ್ಳುವಂತೆ ಆಗಬೇಕು. ಹಾಗೆಯೇ ನಮ್ಮ ಶ್ರಮವನ್ನು ನುಂಗುವ ನುಂಗಣ್ಣರನ್ನು ದೂರ ಇಡಬೇಕು. ಅಂದರೆ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ಬರಬೇಕು.

ಮಧ್ಯವರ್ತಿಗಳಿಂದ  ಮುಕ್ತವಾಗಿರಲಿ: ಇಂದು ಚಿತ್ರಮಂದಿರದಲ್ಲಿ ಕಲೆಕ್ಷನ್‌ ರಿಪೋರ್ಟ್‌ನಲ್ಲಿ ಮೋಸ ನಡೆಯುತ್ತಿದೆ. ಟಿವಿಯಲ್ಲಿ ಅವರು ಕೊಟ್ಟಷ್ಟು ಭಿಕ್ಷೆ ಪಡೆದು ವಿತರಣೆ ಹಕ್ಕು ನೀಡುವುದು ಶಾಶ್ವತ ಅವಧಿಗಾಗಿ. ಅಂದರೆ ಸಿನಿಮಾ ಮಾಡಿ ಅವರ ಪಾದಕ್ಕೆ  ಸಮರ್ಪಣೆ ಮಾಡಿ ಮರೆತುಬಿಡಬೇಕು. ಹೀಗೆ ಟಿವಿಗೆ ಮಾರಲು ಕೂಡ ಕೆಲವು ನುಂಗಣ್ಣರ ಕೃಪೆ ಇರಬೇಕು. ಇಲ್ಲದಿದ್ದರೆ ಡಬ್ಬ ಸಿನಿಮಾ ಎಂದು ತಿರಸ್ಕರಿಸುವಂತೆ ಟಿವಿಯವರೊಂದಿಗೆ ಸಲಹೆ ನೀಡುತ್ತಾರೆ. ಈಗ ಒಟಿಟಿ ವೇದಿಕೆಗೂ ಇಂಥ  ನುಂಗಣ್ಣರ ಪ್ರವೇಶ ಆಗುತ್ತದೆ. ಪ್ಲಾಟ್‌ ಫಾರ್ಮ್ ಮುಖ್ಯಸ್ಥರನ್ನು ಬುಟ್ಟಿಗೆ ಹಾಕಿಕೊಂಡು, ತಮ್ಮ ಹೆಸರಿನದ್ದೇ ಪ್ರಭಾವ ಬಳಸಿ ಎಲ್ಲಾ ತರಹ ಬಿಲ್ಡಪ್‌ ಕೊಟ್ಟು ಕನ್ನಡ ಚಿತ್ರರಂಗಕ್ಕೆ ನಾವೇ ಎಲ್ಲಾ  ಅಂತ ಪುಂಗಿ ಊದಿ, ಒಟಿಟಿಯವರನ್ನು  ಬುಟ್ಟಿಗೆ ಹಾಕಿಕೊಂಡು ಅವರ ಬೇಳೆ ಬೇಯಿಸಲು ಶುರು ಮಾಡುತ್ತಾರೆ. ಇದರಿಂದ ಮತ್ತೆ ಸಣ್ಣ ನಿರ್ಮಾಪಕರು, ನಟ ನಟಿರಿಗೆ ದೇವರೇ ಗತಿ.

Advertisement

ಒಗ್ಗಟ್ಟು ಮುಖ್ಯ: ಈಗಲಾದರೂ ಸಿನಿಮಾಗಾಗಿಯೇ ಬಾಳಿದ, ಬಾಳುತ್ತಿರುವ ಹಿರಿಯರು ಒಗ್ಗಟ್ಟಾಗಿ ಒಂದು ವೇದಿಕೆ ರಚಿಸಿ ನಿಸ್ವಾರ್ಥ ಯತ್ನ ಮಾಡಿದರೆ ಉದ್ಯಮ ಎಲ್ಲಾ ವೇದಿಕೆಗಳಲ್ಲಿಯೂ ನಿಲ್ಲುತ್ತದೆ, ಉಳಿಯುತ್ತದೆ. ಇಲ್ಲದಿದ್ದರೆ ಪರಭಾಷೆಯ ಚಿತ್ರಗಳು ರಾಜರಂತೆ ನಮ್ಮ  ಭಾಷೆಯ ಸಿನಿಮಾಗಳನ್ನು ಆಕ್ರಮಿಸಿ ನಮ್ಮ ಭಾಷೆ ಗುಲಾಮರಂತೆ ಆಗುವುದು ನಿಶ್ಚಿತ. ನಮ್ಮ ಚಿತ್ರರಂಗಕ್ಕೆ ನಮ್ಮವರೆ ಶತ್ರುಗಳು. ಹೀಗೆ ಜಗ್ಗೇಶ್‌ ಓಟಿಟಿ ಕುರಿತು ಟ್ವೀಟ್‌ ಮಾಡಿದ್ದು, ಇದಕ್ಕೆ  ಸಾಕಷ್ಟು ಪ್ರತಿಕ್ರಿಯೆ, ಕಾಮೆಂಟ್‌ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next