Advertisement

ವಿಭಿನ್ನ ಪಾತ್ರಗಳ ಖುಷಿಯಲ್ಲಿ ಜಗ್ಗೇಶ್‌

11:19 AM Mar 18, 2022 | Team Udayavani |

ಕನ್ನಡ ಚಿತ್ರರಂಗದ ನವರಸ ನಾಯಕ ಖ್ಯಾತಿಯ ನಟ ಜಗ್ಗೇಶ್‌ ಅವರಿಗೆ ಗುರುವಾರ (ಮಾ. 17) ಜನ್ಮದಿನದ ಸಂಭ್ರಮ. ಆದರೆ ಪುನೀತ್‌ ರಾಜಕುಮಾರ್‌ ಅಗಲಿಕೆಯ ದುಃಖ ಇನ್ನೂ ಮನಸ್ಸಿನಲ್ಲಿ ಮಾಸದಿರುವುದರಿಂದ ಜಗ್ಗೇಶ್‌, ಈ ಬಾರಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿಲ್ಲ.

Advertisement

ತಮ್ಮ ಜನ್ಮದಿನವನ್ನು ರಾಯರ ಸನ್ನಿಧಿಯಲ್ಲಿ ಕಳೆದ ಜಗ್ಗೇಶ್‌, ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕರು, ಈ ವೇಳೆ ತಮ್ಮ ಜನ್ಮದಿನ, ಮುಂಬ ರುವ ಸಿನಿಮಾಗಳು, ಇತ್ತೀಚಿನ ಬೆಳವಣಿಗೆ ಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದು ಅವರದ್ದೇ ಮಾತುಗಳಲ್ಲಿ…

ಅಪ್ಪು ದುಃಖದಿಂದ ಹೊರಬಂದಿಲ್ಲ… ಬಹುತೇಕರಿಗೆ ಗೊತ್ತಿರುವಂತೆ, ಪುನೀತ್‌ ರಾಜಕುಮಾರ್‌ ಮತ್ತು ನನ್ನ ಬರ್ತ್‌ಡೇ ಒಂದೇ ದಿನ. ಪ್ರತಿವರ್ಷ ಒಬ್ಬರಿಗೊಬ್ಬರು ವಿಶ್‌ ಮಾಡಿಕೊಳ್ಳುತ್ತಿದ್ದೆವು. ಸಾಕಷ್ಟು ಮಾತನಾಡುತ್ತಿದ್ದೆವು. ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದೆವು. ಇಷ್ಟು ವರ್ಷ ಜೊತೆಗೆ ಇದ್ದ, ನಮ್ಮ ಮನೆ ಮಗನಂತಿದ್ದ ಪುನೀತ್‌ ಈ ವರ್ಷ ನಮ್ಮ ಜೊತೆಗಿಲ್ಲ ಅಂದ್ರೆ ನಂಬೋದಕ್ಕೆ ಆಗ್ತಿಲ್ಲ. ನನಗಿಂತಲೂ ಚಿಕ್ಕವನಾಗಿದ್ದ, ನನ್ನ ಪ್ರೀತಿಯ ಸೋದರನೊಬ್ಬ ಇಲ್ಲ ಅನ್ನೋದನ್ನ ಕಲ್ಪಿಸಿಕೊಳ್ಳೋದಕ್ಕೂ ಆಗ್ತಿಲ್ಲ.

ಇದನ್ನೂ ಓದಿ:ಬೈರಾಗಿ ಟೀಸರ್‌: ಶಿವಣ್ಣ-ಡಾಲಿ ಜುಗಲ್ ಬಂದಿಗೆ ಬಹುಪರಾಕ್‌

ಪ್ರತಿ ಮಾರ್ಚ್‌ 17ಕ್ಕೆ ತಪ್ಪದೇ ಪುನೀತ್‌ ಕರೆ ಮಾಡುತ್ತಿದ್ದ. ಅಣ್ಣಾ ಎಂದು ಹೇಳುತ್ತಿದ್ದ ಕರೆ ಮತ್ತೆ ಎಂದೂ ಬರದಂತಾಯಿತು. ಇಂಥ ಸಂದರ್ಭದಲ್ಲಿ ನಾನು ಹೇಗೆ ಬರ್ತ್‌ಡೇ ಆಚರಿಸಿಕೊಂಡು ಸಂಭ್ರಮಿಸಲಿ? ನನ್ನ ಮನಸ್ಸು ಇದಕ್ಕೆ ಒಪ್ಪುತ್ತಿಲ್ಲ. ಅಪ್ಪು ಅಗಲಿಕೆಯ ದುಃಖದಿಂದ ಹೊರಬರಲಾಗುತ್ತಿಲ್ಲ. ಹಾಗಾಗಿ ಮುಂಚಿತವಾಗಿಯೇ ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳದಿರುವ ನಿರ್ಧಾರಕ್ಕೆ ಬಂದಿದ್ದೆ. ಮನೆಯವರಿಗೆ, ಅಭಿಮಾನಿಗಳಿಗೂ ಮುಂಚೆಯೇ ಈ ವಿಷಯ ತಿಳಿಸಿದ್ದೆ.

Advertisement

ಸಿನಿಮಾ ಮತ್ತು ರಾಜಕೀಯ ಎರಡೂ ಕಡೆ ಇರ್ತಿನಿ ನಾನು ಒಬ್ಬ ಕಲಾವಿದನಾಗಿ ಸಿನಿಮಾರಂಗಕ್ಕೆ ಬಂದವನು. ಆನಂತರ ಬೇಕೋ, ಬೇಡವೋ ಅನಿವಾರ್ಯವಾಗಿ ರಾಜಕೀಯಕ್ಕೆ ಬರುವಂತಾಯ್ತು. ಈಗ ಎರಡರಲ್ಲೂ ಸಾಕಷ್ಟು ದೂರ ಸಾಗಿ ಬಂದಿದ್ದೇನೆ. ಹೀಗಾಗಿ ಮುಂದೆಯೂ, ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಖಂಡಿತವಾಗಿಯೂ ಸಕ್ರಿಯವಾಗಿರುತ್ತೇನೆ. ಸದ್ಯಕ್ಕೆ “ತೋತಾಪುರಿ’, “ರಂಗನಾಯಕ’, “ಶ್ರೀಗುರು ರಾಘವೇಂದ್ರ ಸ್ಟೋರ್’ ಹೀಗೆ ಒಂದಷ್ಟು ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿವೆ. ಇದಾಗುತ್ತಿದ್ದಂತೆ, ಚುನಾವಣೆ ಕೂಡ ಬರುತ್ತಿದೆ. ಅಲ್ಲೂ ಕೂಡ ಸಕ್ರಿಯವಾಗಿರುತ್ತೇನೆ.

“ತೋತಾಪುರಿ’ ಮೇಲೆ ನಿರೀಕ್ಷೆಯ ಮಾತು

ಸದ್ಯಕ್ಕೆ “ತೋತಾಪುರಿ’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. “ತೋತಾಪುರಿ’ ಅದ್ಭುತ ಸಬ್ಜೆಕ್ಟ್. ಈಗಾಗಲೇ “ತೋತಾಪುರಿ’ ಟೈಟಲ್‌, ಟೀಸರ್‌, ಹಾಡು ಎಲ್ಲವೂ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಎಲ್ಲರಿಗೂ ಕನೆಕ್ಟ್ ಆಗುವಂಥ ಸಬ್ಜೆಕ್ಟ್ ಇದಾಗಿದ್ದರಿಂದ, “ತೋತಾಪುರಿ’ ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವ ಸಿನಿಮಾವಾಗಲಿದೆ. ಇಲ್ಲಿಯವರೆಗೆ ನೀವು ನೋಡಿರುವ ಪಾತ್ರಗಳಿಗಿಂತ, ಬೇರೆ ಥರದ ಪಾತ್ರವೇ ಈ ಸಿನಿಮಾದಲ್ಲಿದೆ. ಈಗಾಗಲೇ ಈ ಸಿನಿಮಾದ ಪ್ರಮೋಶನ್ಸ್‌ ನಡೆಯುತ್ತಿದ್ದು, ಆದಷ್ಟು ಬೇಗ “ತೋತಾಪುರಿ’ ಪ್ರೇಕ್ಷಕರ ಮುಂದೆ ಬರಲಿದೆ.

 ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next