ಹಳೆಯಂಗಡಿ: ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಹಾಗೂ ಬಿಲ್ಲವರ ಆರಾಧ್ಯ ಶಕ್ತಿಗಳಾದ ಕೋಟಿ ಚೆನ್ನಯರಿಗೆ ಅವಾಚ್ಯವಾಗಿ ನಿಂದಿಸಿ ಉದ್ಧಟತನ ತೋರಿರುವ ಜಗದೀಶ್ ಅಧಿಕಾರಿ ಬಹಿರಂಗವಾಗಿ ಕ್ಷಮೆ ಕೇಳದಿದ್ದಲ್ಲಿ ಮೂಲ್ಕಿ ಭಾಗದಲ್ಲಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸಿ, ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಎಚ್ಚರಿಸಿದರು.
ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ನೈತಿಕತೆ ಬಹಿರಂಗವಾಗಿದೆ, ಸಿದ್ಧಾಮತವಿಲ್ಲದೇ, ಹಿಂದುತ್ವದ ಅಮಲಿನ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆಯಲ್ಲಿದ್ದುಕೊಂಡು ಈ ರೀತಿಯ ಹೇಳಿಕೆ ನೀಡಿ ಎರಡು ದಿನವಾದರೂ ಅದೇ ಸಮುದಾಯದ ಜಿಲ್ಲಾಧ್ಯಕ್ಷರು, ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರು ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಬಿಲ್ಲವ ಓಟ್ ಬ್ಯಾಂಕ್‌ನಿಂದ ಆಯ್ಕೆಯಾಗಿರುವ ಸಂಸದರು ಸಹ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಮಸ್ತ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹೇಳಿದರು.
ಎಪಿಎಂಸಿ ಸದಸ್ಯ ಪ್ರಮೋದ್‌ಕುಮಾರ್ ಮಾತನಾಡಿ, ಜಗದೀಶ್ ಅಧಿಕಾರಿ ತಮ್ಮ ಹೇಳಿಕೆಯಿಂದ ಹಿಂದೆ ಸರಿಯದಿದ್ದರೇ ಅವರ ವಿರುದ್ಧ ಎಲ್ಲಾ ಬಿಲ್ಲವ ಸಮಾಜ ಸೇವಾ ಸಂಘಗಳ ಮೂಲಕ ಪೊಲೀಸ್ ಠಾಣೆಯಲ್ಲಿ ಸರಣಿ ಪ್ರಕರಣ ದಾಖಲಿಸಲಾಗುವುದು, ಸಾರ್ವಜನಿಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಬಗ್ಗೆ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ ನಿರ್ಧರಿಸಲಾಗುವುದು ಎಂದರು.
ಇದನ್ನೂ ಓದಿ:ಉತ್ತರಕಾಶಿ ಗಂಗೋರಿ ಆಶ್ರಮದಲ್ಲಿ ತಪೋವನಿ ಮಾತಾ ಪಂಚಭೂತಲೀನ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಯುವ ಕಾಂಗ್ರೆಸ್‌ನ ಅಶೋಕ್ ಪೂಜಾರ್, ಇಂಟಕ್‌ನ ಯುವ ವಿಭಾಗದ ಜಿಲ್ಲಾಧ್ಯಕ್ಷ ಚಿರಂಜೀವಿ ಅಂಚನ್, ಕೆಪಿಸಿಸಿ ಹಿಂದುಳಿದ ವರ್ಗದ ಪ್ರವೀಣ್ ಬೊಳ್ಳೂರು, ಇಂಟಕ್‌ನ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಮೋಹನ್ ಶಿಮಂತೂರು, ಕಿರಣ್‌ಕುಮಾರ್, ಚಂದ್ರಶೇಖರ್, ದಿನೇಶ್ ಸುವರ್ಣ ಉಪಸ್ಥಿತರಿದ್ದರು.