Advertisement

ಮೆಕ್ಕೆಜೋಳ ಬಿಟ್ಟು ಶೇಂಗಾ ಬಿತ್ತನೆಯತ್ತ ಅನ್ನದಾತನ ಚಿತ್ತ

10:25 AM Jul 25, 2019 | Naveen |

ಜಗಳೂರು: ಮಳೆ ಕೊರತೆಯ ನಡುವೆಯೂ ಶೇಂಗಾ ಬಿತ್ತನೆಗೆ ತಾಲೂಕಿನ ರೈತರು ಸಿದ್ಧರಾಗುತ್ತಿದ್ದಾರೆ.

Advertisement

ಅಲ್ಪಸ್ವಲ್ಪ ಮಳೆ ನಡುವೆಯೂ ತಾಲೂಕಿನಲ್ಲಿ ಈಗಾಗಲೇ ಶೇ. 60 ರಷ್ಟು ಬಿತ್ತನೆಯಾಗಿದೆ. ಬಿಳಿಚೋಡು ಮತ್ತು ಸೊಕ್ಕೆ ಹೋಬಳಿಯಲ್ಲಿ ಶೇ. 75 ರಷ್ಟು ಮತ್ತು ಕಸಬಾ ಹೋಬಳಿಯಲ್ಲಿ ಮಾತ್ರ ಶೇ. 25 ರಷ್ಟು ಬಿತ್ತನೆಯಾಗಿದೆ.

ತಾಲೂಕಿನಲ್ಲಿ 54 ಸಾವಿರ ಹೆಕ್ಟೇರ್‌ ಬಿತ್ತನೆ ಪ್ರದೇಶವಿದ್ದು, ಇದರಲ್ಲಿ 35 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ, 12 ಸಾವಿರ ಹೆಕ್ಟೇರ್‌ ಶೇಂಗಾ ಬಿತ್ತನೆ ಪ್ರದೇಶವಿದೆ. ಈಗ ಮಳೆ ಬಂದರೂ ಸಹ ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿಯುತ್ತಿರುವುದರಿಂದ ರೈತರು ಶೇಂಗಾ ಬಿತ್ತನೆ ಕಡೆ ಗಮನ ಹರಿಸಿದ್ದಾರೆ. ಹೀಗಾಗಿ ಈ ಬಾರಿ ಶೇಂಗಾ ಬಿತ್ತನೆ ಪ್ರದೇಶ ಹೆಚ್ಚುವ ನೀರಿಕ್ಷೆ ಇದೆ.

ಕಳೆದ ನಾಲ್ಕು ವರ್ಷಗಳಿಂದ ಬಿತ್ತಿದ ಬೆಳೆ ಕೈಗೆ ಸಿಗದೇ ರೈತರು ಮನೆಯಲ್ಲಿ ಒಂದು ಕಾಯಿ ಶೇಂಗಾ ಸಹ ತೆಗೆದಿಡಲು ಸಾಧ್ಯವಾಗಿಲ್ಲ. ಹೀಗಾಗಿ ರೈತರು ಕೃಷಿ ಇಲಾಖೆಯವರು ನೀಡುವ ಶೇಂಗಾ ಬೀಜವನ್ನೇ ನಂಬಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮೀಣ ಭಾಗದಲ್ಲಿ ಮೇ ತಿಂಗಳಲ್ಲಿಯೇ ಬಿತ್ತನೆಗಾಗಿ ಶೇಂಗಾ ಕಾಯಿ ಸುಲಿಯುವ ದೃಶ್ಯ ಕಂಡು ಬರುತ್ತಿತ್ತು. ಆದರೆ ಈಗ ಜುಲೈ ತಿಂಗಳು ಮುಗಿಯುತ್ತ ಬಂದರೂ ಗ್ರಾಮಿಣ ಪ್ರದೇಶಗಳ ಮನೆಗಳ ಮುಂದೆ ಶೇಂಗಾ ಕಾಯಿ ಸುಲಿಯುವಲ್ಲಿ ಮಹಿಳೆಯರು ಮಗ್ನರಾಗಿರುವುದು ಕಾಣಸಿಗುತ್ತದೆ.

Advertisement

30 ಕೆಜಿ ತೂಕದ 22 ಸಾವಿರ ಶೇಂಗಾ ಬೀಜ ಪಾಕೇಟ್‌ಗಳನ್ನು ವಿತರಣೆ ಮಾಡಲಾಗಿದೆ. ಶೇಂಗಾ ಕಾಯಿ ಎಲ್ಲಿಯೂ ದೊರೆಯದೇ ಇರುವುದರಿಂದ ಬೀಜದ ಸಮಸ್ಯೆ ಉಂಟಾಗಿ ಬೀಜ ವಿತರಣೆಗೆ ವಿಳಂಬವಾಯಿತು.
ಬಸಣ್ಣ, ಸಹಾಯಕ ಕೃಷಿ ನಿರ್ದೇಶಕ

ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿಯುತ್ತಿದ್ದು, ಮಳೆ ಬಂದಿದೆ ಎಂದು ರೈತರು ಬಿತ್ತನೆ ಮಾಡಿದರೆ ರೋಗ ಮತ್ತು ಹುಳುಗಳ ಬಾಧೆ ಕಾಡುತ್ತದೆ.
ಗೋವಿಂದ್‌ ನಾಯ್ಕ
ಕೃಷಿ ಅಧಿಕಾರಿ

ಸಕಾಲಕ್ಕೆ ಮಳೆ ಆಗಿದ್ದರೆ ಬಿತ್ತನೆ ಬೀಜಗಳನ್ನು ನಾವೇ ಸಿದ್ಧಪಡಿಸಿಕೊಳ್ಳುತ್ತಿದ್ದೆವು. ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗಲಿಲ್ಲ . ಕಾಯಿ ಕಟ್ಟುವ ಹಂತದಲ್ಲಿ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ಬೀಜ ದಾಸ್ತಾನು ಮಾಡಿಕೊಳ್ಳಲಾಗಲಿಲ್ಲ. ಇಲಾಖೆ ನೀಡುವ ಬೀಜಕ್ಕಾಗಿ ಕಾಯುವಂತಾಗಿದೆ.
•ಓಬಣ್ಣ ಲಕ್ಕಂಪುರ, ರೈತ

Advertisement

Udayavani is now on Telegram. Click here to join our channel and stay updated with the latest news.

Next