ಜಗಳೂರು: ನಮ್ಮ ಪಾಲಿನ ನೀರನ್ನು ನಮಗೆ ನೀಡಿ. ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಿ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮುಸ್ಟೂರು ಓಂಕಾರ ದಾಸೋಹ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಶನಿವಾರ ಮುಸ್ಟೂರು ಮಠದ ರುದ್ರಮುನಿ ಸ್ವಾಮಿಗಳ ನೇತೃತ್ವದಲ್ಲಿ ಸಿದ್ದಿಹಳ್ಳಿ ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ಭದ್ರಾ ನೀರಿಗಾಗಿ ಒತ್ತಾಯಿಸಿ ಕಳೆದ 13 ದಿನಗಳಿಂದ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಸ್ವಾಮೀಜಿ ಮಾತನಾಡಿದರು.
ಸಾಲಮನ್ನಾ, ಅನ್ನಭಾಗ್ಯ ಸೇರಿದಂತೆ ಸರಕಾರದ ಯಾವುದೇ ಸೌಲಭ್ಯ ನಮಗೆ ಕೊಡದಿದ್ದರೂ ಪರವಾಗಿಲ್ಲ. ತಾಲೂಕಿಗೆ ಭದ್ರಾ ನೀರು ಹರಿಸಿದರೆ ಉತ್ತಿ, ಬಿತ್ತಿ, ಬೆಳೆದುಕೊಂಡು ತಿನ್ನುತ್ತೇವೆ. ತಾಲೂಕಿಗೆ ಭದ್ರಾ ನೀರು ಹರಿಸಲು ಸರಕಾರ ಮುಂದಾಗಬೇಕು. ಕಳೆದ 10 ವರ್ಷಗಳ ಸತತ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ ಹಂಚಿಕೆಯಾಗಿರುವ 2.5 ಟಿಎಂಸಿ ನೀರನ್ನು ಸಮರ್ಪಕವಾಗಿ ಹರಿಸಬೇಕು. ಬೆಳಘಟ್ಟ ಮಾರ್ಗದ ಮೂಲಕವೇ ನೀರು ಹರಿದು ಬರಬೇಕು. ತಾಲೂಕಿಗೆ ಹಂಚಿಕಯಾದ ನೀರನ್ನು ಬೇರೆ ತಾಲೂಕಿಗೆ ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ. ನಮ್ಮ ಪಾಲಿನ ನೀರು ನಮಗೆ ಸಂಪೂರ್ಣವಾಗಿ ಹರಿದರೆ ಮಾತ್ರ ತಾಲೂಕು ಸಮಗ್ರ ನೀರಾವರಿಯಾಗಲು ಅನುಕೂಲವಾಗಲಿದೆ. ಸರಕಾರದ ಕೆಲಸ ದೇವರ ಕೆಲಸ ಎನ್ನುವ ಬದಲಾಗಿ ಪ್ರಜೆಗಳ ಕೆಲಸ ದೇವರ ಕೆಲಸವೆಂದು ತಿಳಿದು ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕಿದೆ ಎಂದರು.
ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಿಗೆ ಸರಕಾರದ ಹಲವಾರು ಸೌಲಭ್ಯಗಳ ಬದಲಾಗಿ ಭದ್ರಾ ನೀರು ಹರಿಸಿ ಬರಪೀಡಿತ ಬಯಲು ಸೀಮೆಯನ್ನು ಹಸಿರು ನಾಡನ್ನಾಗಿ ಮಾಡಲು ಮಾಡಲು ಸರಕಾರ ಕ್ರಮ ಕೈಗೊಳ್ಳುವವರೆಗೂ ಅನಿರ್ದಿಷ್ಟಾವಧಿ ಧರಣಿಯ ನಂತರ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಜೈಲಿಗೆ ಹೋದರೂ ಸಹ ಹೋರಾಟದಿಂದ ಮಾತ್ರ ಹಿಂದೆ ಸರಿಯುವುದಿಲ್ಲವೆಂದು ಸರಕಾರಕ್ಕೆ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸಿದ್ದಿಹಳ್ಳಿ ಗ್ರಾಮಸ್ಥರು ಪ್ರತಿಭಟನಾ ಸ್ಥಳದಲ್ಲಿ ದಿನವಿಡೀ ಭಜನೆ ಮಾಡುವ ಮೂಲಕ ಧರಣಿಯಲ್ಲಿ ಭಾಗವಹಿಸಿದ್ದರು.
ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿಯ ಎಂ.ಬಿ. ಲಿಂಗರಾಜ್, ಜೆ.ಮಹಾಲಿಂಗಪ್ಪ, ಮಹಮದ್ ಅನ್ವರ್, ಪ್ರಕಾಶರೆಡ್ಡಿ, ಸಿದ್ದಿಹಳ್ಳಿ ಗ್ರಾಮದ ಜಿಪಂ ಮಾಜಿ ಸದಸ್ಯ ಎಸ್.ಕೆ.ರಾಮರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಧನಂಜಯರೆಡ್ಡಿ, ಈರಮ್ಮ, ನಾಗೇಂದ್ರರೆಡ್ಡಿ, ಬಿ.ಮಂಜುನಾಥ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಪ್ಪ, ಬಿ.ಟಿ.ಮಹಾಂತೇಶ್, ಜಿ.ಟಿ.ರವಿ, ಯಲ್ಲಪ್ಪ, ಅಣ್ಣಪ್ಪ, ಜಯ್ಯಣ್ಣ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.