Advertisement

15 ದಿನಗಳಲ್ಲಿ ಸಮಸ್ಯೆ ಪರಿಹರಿಸಿ

10:17 AM Jun 28, 2019 | Naveen |

ಜಗಳೂರು: ಅಧಿಕಾರಿಗಳ ನಡೆ ಗ್ರಾಮಗಳ ಕಡೆ ಎಂಬ ಕಾರ್ಯಕ್ರಮವು ವಿನೂತನವಾಗಿದ್ದು, ಗ್ರಾಮಗಳಲ್ಲಿರುವ ನೈಜ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬಹುದಾಗಿದೆ. ಇನ್ನು 15 ದಿನಗಳಲ್ಲಿ ಆ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ. ಈ ಕಾರ್ಯಕ್ರಮವನ್ನು ಜಿಲ್ಲೆಯ ಇತರೆ ತಾಲೂಕುಗಳಿಗೂ ವಿಸ್ತರಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಆರ್‌. ಶ್ರೀನಿವಾಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಗುರುವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ನೈಜ ವರದಿ ನೀಡಿದ್ದು, ಈ ವರದಿಯೇ ನಿಮ್ಮ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದರು.

ತಾಲೂಕು ರಾಜ್ಯದಲ್ಲಿಯೇ ಅತೀ ಹಿಂದುಳಿದ ತಾಲೂಕಾಗಿದ್ದು, ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದೆ. ಇಲ್ಲಿನ ಮುಖ್ಯ ಸಮಸ್ಯೆ ಎಂದರೆ ಕುಡಿಯುವ ನೀರು ಮತ್ತು ದುಡಿಯುವ ಕೈಗಳಿಗೆ ಕೆಲಸ. ಅಷ್ಟು ನೀಡಿದರೆ ಸಾಕು, ಜನರು ಜೀವನ ನಡೆಸುತ್ತಾರೆ ಎಂದರು.

ಕುಡಿಯುವ ನೀರಿನದ್ದೇ ಸಮಸ್ಯೆ: ನೀವು ನೀಡಿದ ವರದಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳೇ ಹೆಚ್ಚಾಗಿವೆ. ಬೋರ್‌ವೆಲ್ ಕೊರೆದರೆ ಮೋಟರ್‌ ಅಳವಡಿಸಿಲ್ಲ, ಮಾಡಿರುವ ಕಾಮಗಾರಿಗಳಿಗೆ ಬಿಲ್ ಆಗಿಲ್ಲ ಎಂಬ ದೂರುಗಳೇ ಅಧಿಕವಾಗಿದೆ ಎಂದು ಜಿಲ್ಲಾ ಪಂಚಾಯತ್‌ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಣ್ಣರನ್ನು ಪ್ರಶ್ನಿಸಿದಾಗ, ಎಇಇ ಆರೋಗ್ಯ ಸರಿ ಇಲ್ಲದ ಕಾರಣ ಬಿಲ್ ಮಾಡಲು ವಿಳಂಬವಾಗಿದೆ ಎಂದು ನುಡಿದರು. ಸಂಸದ ಜಿ.ಎಮ್‌. ಸಿದ್ದೇಶ್ವರ ಮಾತನಾಡಿ, ತಾಲೂಕಿನ ಕೆಳಗೋಟೆ ಮತ್ತು ಮಳಮ್ಮನಹಳ್ಳಿ ಗ್ರಾಮದಲ್ಲಿ ಬೋರ್‌ವೆಲ್ ಕೊರೆದಿದ್ದು, ಮೋಟಾರ್‌ ಆಳವಡಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ ಎಂದಾಗ, ತಾಲೂಕು ಎಇಇ ಬಾಲಸ್ವಾಮಿ ಕೆಳಗೋಟೆ ಗ್ರಾಮದಲ್ಲಿ ಮೋಟಾರ್‌ ಪಂಪ್‌ ಆಳವಡಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಕಾಮಗಾರಿಯ ಬಿಲ್ ಮಾಡಲು ವಿಳಂಬವಾಗಲು ಕಾರಣವೇನು ಎಂದು ಸಂಸದರು ಪ್ರಶ್ನಿಸಿದರು. ತಾಲೂಕಿನಲ್ಲಿ ಶಾಸಕರು ಅನುಮತಿ ಇಲ್ಲದೇ ಮತ್ತು ಕ್ರಿಯಾಯೋಜನೆಯಲ್ಲಿ ಸೇರಿಸದೆ 65ಕ್ಕೂ ಅಧಿಕ ಬೋರ್‌ವೆಲ್ ಕೊರೆಸಿದ್ದಾರೆ. ಇವುಗಳನ್ನು ಬಿಲ್ ಮಾಡಲು ಬರುವುದಿಲ್ಲ ಎಂದರು.

Advertisement

ಈ ವರದಿಯನ್ನು ಸರಕಾರಿ ಅಧಿಕಾರಿಗಳೇ ನೀಡಿದ್ದಾರೆ. ನೀವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ. ನೀವೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇನ್ನೊಬ್ಬರ ಮೇಲೆ ದೂರುವುದು ಸರಿಯಲ್ಲ. ಜುಲೈ ಮೊದಲ ವಾರದಲ್ಲಿ ಮತ್ತೆ ಸಭೆ ನಡೆಸಲಿದ್ದು, ಆ ವೇಳೆಗಾಗಲೇ ತಾಲೂಕಿನ ನೀರಿನ ಸಮಸ್ಯೆ ಬಗೆಹರಿಸಿ ನನಗೆ ವರದಿ ನೀಡಬೇಕು. ಇಲ್ಲದಿದ್ದರೆ ನಿಮ್ಮ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸೂಚನೆ ನೀಡಿದರು.

ಮೇವಿಗಿಲ್ಲ ಕೊರತೆ: ತಾಲೂಕಿನಲ್ಲಿ ಮೇವಿನ ಸಂಗ್ರಹಣೆ ಎಷ್ಟಿದೆ ಎಂದು ಸಚಿವರು ಪಶು ಇಲಾಖೆಯ ಬಾಲನಾಯ್ಕರನ್ನು ಪ್ರಶ್ನಿಸಿದಾಗ, ತಾಲೂಕಿನಲ್ಲಿ 6 ವಾರಗಳಿಗಾಗುವಷ್ಟು ಮೇವು ಇದೆ. ತಾಲೂಕಿನಲ್ಲಿ 37 ಸಾವಿರ ಮೇವಿನ ಪಾಕೇಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ಇನ್ನೂ 40 ಸಾವಿರ ಪಾಕೇಟ್ ಮೇವಿನ ಬೀಜಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಭೆಯ ಗಮಕ್ಕೆ ತಂದರು. ಕೃಷಿ ಮತ್ತು ತೋಟಗಾರಿಕೆ ಫಾರಂಗಳಲ್ಲಿ ಮೇವು ಬೆಳೆಸಿ. ಅದಕ್ಕೆ ತಗಲುವ ವೆಚ್ಚ ನೀಡಲಾಗುವುದು ಎಂದಾಗ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮಾತನಾಡಿ, ಬೋರ್‌ವೆಲ್ ಸಮಸ್ಯೆ ಇದೆ ಎಂದರು. ಜಿಲ್ಲಾ ಪಂಚಾಯತ್‌ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಣ್ಣಗೆ ಬೊರ್‌ವೆಲ್ ಕೊರೆಯಿಸುವ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಶಿವಮೂರ್ತಿ ಸೂಚನೆ ನೀಡಿದರು.

ಜನರಿಗೆ ಕೆಲಸ ಕೊಡಿ: ನರೆಗಾ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಜನರು ನಮ್ಮನ್ನು ಕೇಳುತ್ತಿದ್ದಾರೆ. ನೀವು ಕೆಲಸ ಕೈಗೆತ್ತಿಕೊಳ್ಳುತ್ತಿಲ್ಲವೇ ಎಂದು ಸಚಿವರು ತಾಪಂ ಇಓ ಜಾನಕೀರಾಮ್‌ರನ್ನು ಕೇಳಿದಾಗ, ಎಲ್ಲಾ ಗ್ರಾಮಗಳಲ್ಲಿ ಕೂಲಿ ಕೆಲಸ ನೀಡುತ್ತಿದ್ದೇವೆ ಎಂದು ಉತ್ತರಿಸಿದರು. ನೀವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ತಾಲೂಕಿನಿಂದ ನೂರಾರು ಜನ ಗುಳೆ ಹೋಗುತ್ತಿದ್ದಾರೆ. ಕೆಲಸ ಕೇಳುವ ಪ್ರತಿಯೊಬ್ಬರಿಗೂ ಕೂಲಿ ಕೆಲಸ ನೀಡಿ. ಯಾರೂ ಗುಳೆ ಹೋಗದಂತೆ ನೋಡಿಕೋಳ್ಳಬೇಕು ಎಂದು ಸೂಚನೆ ನೀಡಿದರು.

ತನಿಖೆಗೆ ಸೂಚನೆ: ತಾಲೂಕಿನ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‌ ದಯಾನಂದ ಸ್ವಾಮಿಯನ್ನು ಅಮಾನತ್ತು ಮಾಡಿ. ಇವರು ಕಾಮಗಾರಿಯಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ ಎಂದು ಶಾಸಕ ಎಸ್‌.ವಿ. ರಾಮಚಂದ್ರ ಆಗ್ರಹಿಸಿದಾಗ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್‌ ಸಿಇಒಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶೈಲಜಾ, ಸದಸ್ಯರಾದ ಮಂಜುನಾಥ್‌, ಶಾಂತಕುಮಾರಿ , ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌, ಜಿಪಂ ಸಿಇಓ ಬಸವರಾಜೇಂದ್ರ, ಎಸಿ ಕುಮಾರಸ್ವಾಮಿ, ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ, ಪಿಡಿ ನಜ್ಮಾ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.