ಜಗಳೂರು: ಪಟ್ಟಣ ಪಂಚಾಯಿತಿ ನೂತನ ಕಟ್ಟಡ 3 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತುತ್ತಿದೆ. ಪಟ್ಟಣದ ಕೃಷ್ಣ ಬಡಾವಣೆಯಲ್ಲಿ ಪಟ್ಟಣ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಪಟ್ಟಣ ಪಂಚಾಯಿತಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆ.
ಜಗಳೂರು 1990ರವರೆಗೆ ಪುರಸಭೆ, ನಂತರ 96ರ ವರೆಗೆ ಪರಿವರ್ತಿತ ಮಂಡಲ ಪಂಚಾಯಿತಿಯಾಯಿತು. 1996ರಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು, ಮೊದಲಿನಿಂದಲೂ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.
ನೂತನ ವಿಶಾಲ ಕಟ್ಟಡ ನಿರ್ಮಿಸುವ ಸಲುವಾಗಿ ಎಚ್.ಪಿ. ರಾಜೇಶ್ ಶಾಸಕರಾಗಿದ್ದ ಅವಧಿಯಲ್ಲಿ ಕಟ್ಟಡಕ್ಕೆ ಅನುದಾನ ಮುಂಜೂರು ಮಾಡಿಸಿದ್ದರು. ಈಗಿನ ಶಾಸಕ ಎಸ್.ವಿ. ರಾಮಚಂದ್ರ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು.
ಕಟ್ಟಡವು ಜಿ ಪ್ಲಸ್ 1 ಮಾದರಿಯಲ್ಲಿ ನಿರ್ಮಾಣವಾಗುತ್ತಿದ್ದು, ನೆಲ ಅಂತಸ್ತಿನಲ್ಲಿ ಮುಖ್ಯಾಧಿಕಾರಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪುರಸಭೆ ಸಿಬ್ಬಂದಿಗೆ ಕೊಠಡಿಗಳ ವ್ಯವಸ್ಥೆ ಇದ್ದು, ಮೊದಲ ಅಂತಸ್ತಿನಲ್ಲಿ ಸಭಾಂಗಣ ನಿರ್ಮಾಣವಾಗಲಿದೆ.
ಹಾಲಿ ಇರುವ ಕಟ್ಟಡವು ಪಟ್ಟಣದ ಜನತೆಗೆ ಸಮೀಪವಾಗುತ್ತದೆ. ಕೃಷ್ಣ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವು ದೂರವಾಗುತ್ತದೆ ಎಂದು ಹಿರಿಯ ನಾಗರಿಕರು ಶಾಸಕ ಎಸ್.ವಿ. ರಾಮಚಂದ್ರ ಹತ್ತಿರ ಮನವಿ ಮಾಡಿದ್ದರು ಸರಕಾರದ ಅನುದಾನ ವಾಪಸ್ ಹೋಗುವುದು ಬೇಡ. ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದ್ದು ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹಿರಿಯ ನಾಗರಿಕ ಸಂಘದ ಪದಾಧಿಕಾರಿಗಳ ಮನವೊಲಿಸಿದ್ದರು.
ಬೃಹತ್ ಕಟ್ಟಡ ನಿರ್ಮಿಸಲಾಗುತ್ತಿದ್ದು, ಜಗಳೂರು ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರವೂ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ.
ರಾಜು ಬಣಕಾರ್,
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ