Advertisement

ಅಲೆಮಾರಿಗಳಿಗೆ ಶೀಘ್ರ ಸೂರು ವ್ಯವಸ್ಥೆ

11:24 AM Sep 28, 2019 | Naveen |

ಜಗಳೂರು: ಸಮಾಜದ ಕಟ್ಟಕಡೆಯ ಹಾಗೂ ಅತಿ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಅವರಿಗೆ ಸರ್ಕಾರದ ವತಿಯಿಂದ ಸೂರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್‌ ಹುಲ್ಲಮನಿ ತಿಮ್ಮಣ್ಣ ನುಡಿದರು.

Advertisement

ಪಟ್ಟಣದ ಅಶ್ವಥ್‌ ರೆಡ್ಡಿ ನಗರದ ಸಮಿಪ ಖಾಸಗಿ ಜಮೀನೊಂದರಲ್ಲಿ ಸುಮಾರು ವರ್ಷಗಳಿಂದ ಟೆಂಟ್‌ ಹಾಕಿಕೊಂಡು ಜೀವನ ನಡೆಸುತ್ತಿರುವ ಅಲೆಮಾರಿ ಸಮುದಾಯದ (ಸಿಂಧೊಳ , ಸುಡಾಗಾಡು ಸಿದ್ದ, ದುರುಮುರುಗಿ ) ಸ್ಥಳಕ್ಕೆ ಭೇಟಿ ನೀಡಿ, ಅವರ ಸಮಸ್ಯೆ ವಿಚಾರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಅತಿ ಹಿಂದುಳಿದ ಸಮುದಾಯಗಳಾದ ಇವರು ಕಸೂತಿ, ಕುರಿ ಸಾಕಣೆ, ಮೀನು ವ್ಯಾಪಾರ ಸೇರಿದಂತೆ ಇತರೆ ಕಸುಬಗಳನ್ನು ಕೈಗೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ವಂತ ನಿವೇಶನ ಇಲ್ಲದೇ ಖಾಲಿ ಸ್ಥಳಗಳಲ್ಲಿ ಗುಡಿಸಲು ಹಾಕಿಕೊಂಡು ಮಳೆ-ಗಾಳಿ ಎನ್ನದೇ ವಾಸಿಸುತ್ತಿದ್ದಾರೆ.

ಇವರ ಬದುಕು ತುಂಬ ನಿಕೃಷ್ಟವಾಗಿದೆ. ಇಂಥವರಿಗೆ ಸೂರು ನೀಡುವ ವಿಷಯವನ್ನು ಜಿಲ್ಲಾಧಿಕಾರಿಗಳ ಮುಂದೆ ಪ್ರಸ್ತಾಪಿಸಿದಾಗ ತಕ್ಷಣ ಅನುಮೋದನೆ ನೀಡಿದರು ಎಂದರು.

ಪಟ್ಟಣದ ಲತೀಫ್‌ ಸಾಬ್‌ ಬಡಾವಣೆ ಹಿಂಭಾಗದಲ್ಲಿರುವ 1 ಎಕರೆ ಪ್ರದೇಶದಲ್ಲಿ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.

Advertisement

ಗುಡಿಸಲಲ್ಲಿ ಕುಳಿತೇ ಯೋಗಕ್ಷೇಮ ವಿಚಾರ: ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ಅಲೆಮಾರಿಗಳ ಟೆಂಟ್‌ನಲ್ಲಿಯೇ ಕುಳಿತು ಸಮಸ್ಯೆಗಳನ್ನು ಆಲಿಸಿದ್ದು ವಿಶೇಷವಾಗಿತ್ತು. ಮಕ್ಕಳಿಗೆ ಚಿಕಿತ್ಸೆ ಭರವಸೆ: ಕಾಲಿನ ಅಂಗವೈಕ್ಯದಿಂದ ಬಳಲುತ್ತಿರುವ ಮಕ್ಕಳನ್ನು ಕಂಡು, ಶಸ್ತ್ರ ಚಿಕಿತ್ಸೆ ಮಾಡಿದರೆ ಮಕ್ಕಳು ಗುಣಮುಖರಾಗುತ್ತಾರೆ ಎಂದು ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ತಾಲೂಕು ಆರೋಗ್ಯಾಧಿಕಾರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

ನಮ್ಮ ಪಾಲಿನ ದೇವರು: ಅಲೆಮಾರಿ ಸಮುದಾಯದ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿ, ನಿವೇಶನ ನೀಡುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ತಹಶೀಲ್ದಾರ್‌ ತಿಮ್ಮಣ್ಣ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ ಮತ್ತು ಮಹೇಶ್‌ ಸಮುದಾಯಕ್ಕೆ ನಿವೇಶನ ದೊರೆಯುವಂತೆ ಮಾಡಿದ್ದಾರೆ.

ಇವರೇ ನಮ್ಮ ಪಾಲಿನ ದೇವರು ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್‌ ಮತ್ತು ಮಹೇಶ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next