Advertisement

ಗಟ್ಟಿ ನಾಯಕತ್ವಕ್ಕೆ ಮೋದಿ ಸಾಕ್ಷಿ: ಜಗದೀಶ ಶೆಟ್ಟರ

02:16 PM Oct 08, 2021 | Team Udayavani |

ಹುಬ್ಬಳ್ಳಿ:ದೇಶದಲ್ಲಿ ಗಟ್ಟಿ ನಾಯಕತ್ವ ಹಾಗೂ ಇಚ್ಛಾಶಕ್ತಿಯ ನಾಯಕ ಇದ್ದರೆ ಎಂತಹದ್ದೇ ಸಮಸ್ಯೆ ಎದುರಾದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿಯಾಗಿದ್ದಾರೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಬಿಜೆಪಿಯಿಂದ ಇಲ್ಲಿನ ಶಿರೂರು ಪಾರ್ಕ್‌ನಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಅಂಗವಾಗಿ ಕೈಗೊಂಡಿದ್ದ ಸೇವೆ ಮತ್ತು ಸಮರ್ಪಣೆ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅವರು, ಕೋವಿಡ್‌ನ‌ಂತಹ ಭಯಾನಕ ಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಪ್ರಧಾನಿಗೆ ಸಲ್ಲುತ್ತದೆ ಎಂದರು.

ಕೋವಿಡ್‌ ಸಂಕಷ್ಟದಿಂದ ಪಾರಾಗಲು ಲಸಿಕೆ ನೀಡಿಕೆ ನಿಟ್ಟಿನಲ್ಲಿ ಹಣ ಹೊಂದಿಸಲು ರಾಜ್ಯ ಸರಕಾರಗಳು ಸಂಕಷ್ಟಕ್ಕೆ ಸಿಲುಕಿದ್ದವು. ನಮ್ಮ ರಾಜ್ಯ ಸರಕಾರ ಲಸಿಕೆಗಾಗಿ 1,000 ಕೋಟಿ ರೂ.ಗಳನ್ನು ಹೊಂದಿಸಬೇಕಿತ್ತು. ಆದರೆ, ಪ್ರಧಾನಿಯವರು ದೇಶಾದ್ಯಂತ ಎಲ್ಲರಿಗೂ ಉಚಿತ ಲಸಿಕೆ ಘೋಷಿಸಿದರು. ಇದುವರೆಗೆ ಸುಮಾರು 98 ಕೋಟಿ ಜನರಿಗೆ ದೇಶದಲ್ಲಿ ಲಸಿಕೆ ಹಾಕಲಾಗಿದ್ದು, ಮೊದಲ ಡೋಸ್‌ ಅನ್ನು ದೇಶದ ಪ್ರತಿಯೊಬ್ಬರಿಗೂ ನೀಡಲಾಗಿದೆ ಎಂದರು.

ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳ ಹಿಡಿತದಿಂದ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಸಮಸ್ಯೆ, ದಾಳಿ ಹೆಚ್ಚಾಗಲಿದೆ ಎಂದೇ ಅನೇಕರು ಭಾವಿಸಿದ್ದರು. ಆದರೆ ಅಂತಹ ಕೃತ್ಯಗಳಿಗೆ ಅವಕಾಶ ನೀಡದೆ ಮೋದಿಯವರು ತಮ್ಮ ಗಟ್ಟಿ ನಾಯಕತ್ವ ತೋರಿದ್ದಾರೆ. ಒಂದು ವೇಳೆ ಗುಜರಾತ್‌ ಮುಖ್ಯಮಂತ್ರಿಯಾಗಿ ಮೋದಿಯವರು ಉಳಿದಿದ್ದರೆ ಜೀವಿತಾವಧಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು. ಪ್ರಧಾನಿಯಾಗಿಯೂ ಅತ್ಯುತ್ತಮ ನಾಯಕತ್ವ ಪ್ರದರ್ಶನ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿಯವರು ಪ್ರಧಾನಿ ಆಗುವುದು ಖಚಿತ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಗುಜರಾತ್‌ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ನರೇಂದ್ರ ಮೋದಿಯವರು 20 ವರ್ಷಗಳ ಸೇವೆ ಸಲ್ಲಿಸಿದ್ದು, ಈ ಬಾರಿಯ ಅವರ ಜನ್ಮದಿನ ಅಂಗವಾಗಿ ಬಿಜೆಪಿ ದೇಶಾದ್ಯಂತ ಅನೇಕ ಕಾರ್ಯಗಳನ್ನು ಕೈಗೊಂಡಿದೆ. ರಾಜ್ಯದಲ್ಲಿಯೂ ಸೆಪ್ಟಂಬರ್‌ 17ರಿಂದ ಇಪ್ಪತ್ತು ದಿನಗಳವರೆಗೆ ಸೇವೆ-ಸಮರ್ಪಣೆ ಅಡಿಯಲ್ಲಿ ಪಕ್ಷದ ಕಾರ್ಯಕರ್ತರು ಹಲವು ಸೇವಾ ಕಾರ್ಯ ಕೈಗೊಂಡಿದ್ದಾರೆ ಎಂದರು.

Advertisement

ಸೆ.17ರಂದು ಒಂದೇ ದಿನ ದೇಶದಲ್ಲಿ ಸುಮಾರು 2 ಕೋಟಿ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. 2.25 ಕೋಟಿ ಲಸಿಕೆ ಹಾಕಲಾಯಿತು. ಅದೇ ರೀತಿ ರಾಜ್ಯದಲ್ಲಿ 30 ಲಕ್ಷ ಲಸಿಕೆ ಗುರಿ ಹೊಂದಲಾಗಿತ್ತು. 37 ಲಕ್ಷ ಲಸಿಕೆ ಹಾಕಲಾಗಿದ್ದು, ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದ ಲಸಿಕೆ ಹಾಕಿರುವುದು ವಿಶ್ವದ ದಾಖಲೆಯಾಗಿದೆ ಎಂದರು.

ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನ ಶುಭಾಶಯಗಳನ್ನು ಅಂಚೆ ಕಾರ್ಡ್‌ನಲ್ಲಿ ಬರೆದು ಅಭಿಯಾನ ಕೈಗೊಂಡರು. ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಿಜೆಪಿ ಮಹಿಳಾ ಮೋರ್ಚಾದವರು ಪಕ್ಷದ ಹಿರಿಯ ಮಹಿಳೆಯರು, ಬಡವರಿಗೆ ಕೈಮಗ್ಗ ನೇಕಾರರು ತಯಾರಿಸಿದ ಸೀರೆಗಳನ್ನು ನೀಡಲಾಯಿತು. ಬಿಜೆಪಿ ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಮಹೇಶ ಬುರ್ಲಿ, ಮಲ್ಲಿಕಾರ್ಜುನ ಸಾವಕಾರ, ಗೋಪಾಲ ಬದ್ದಿ, ಬಸವರಾಜ, ಹಬೀಬ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ವೀಣಾ, ಗೌರಿ, ರವಿರಾಜ ಕೊಡ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next