ಬೆಳಗಾವಿ: ರಾಜ್ಯದಲ್ಲಿ ವಿವಿಧ ಸಮಾಜದ ಅಭಿವೃದ್ಧಿಗಾಗಿ ಪ್ರಾಧಿಕಾರಗಳನ್ನು ರಚಿಸಲಾಗುತ್ತಿದೆ. ಯಾವುದೇ ಭಾಷೆಯ ಆಧಾರದ ಮೇಲೆ ರಚಿಸಿದ ಪ್ರಾಧಿಕಾರ ಅಲ್ಲ. ಇದು ಕನ್ನಡ-ಮರಾಠಿ ಭಾಷೆಯ ನಡುವಿನ ಸಮಸ್ಯೆ ಅಲ್ಲ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಒಡೆಯುವ ಕೆಲಸಕ್ಕೆ ಸರ್ಕಾರ ಮುಂದಾಗುವುದಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಕಾಂಗ್ರೆಸ್ ಯಾವಾಗಲೂ ವಿರೋಧ ವ್ಯಕ್ತಪಡಿಸುತ್ತದೆ.ಎಂದು ತಿರುಗೇಟು ನೀಡಿದರು.
ಪ್ರಾಧಿಕಾರಗಳನ್ನು ರಚಿಸುವ ಮೂಲಕ ಸಮಾಜ ಒಡೆಯುವ ಕೆಲಸ ಮುಖ್ಯಮಂತ್ರಿ ಯಡಿಯೂರಪ್ಪ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, ಏನೇನು ಮಾಡಿದ್ದಾರೆ, ಎಷ್ಟು ಪ್ರಾಧಿಕಾರ ರಚಿಸಿದ್ದಾರೆ ಬ್ರಾಹ್ಮಣ ಸಮಾಜ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಯಾರು, ಒಂದೊಂದು ಸಮಾಜಕ್ಕೆ ಆಯಾ ಸರ್ಕಾರಗಳು ಪ್ರಾಧಿಕಾರ ರಚನೆ ಮಾಡಿವೆ. ಹೀಗಾಗಿ ಮತ್ತೊಬ್ಬರ ಬಗ್ಗೆ ಉಪದೇಶ ಮಾಡುವ ಅವಶ್ಯಕತೆಯಿಲ್ಲ ಎಂದು ಡಿಕೆಶಿಗೆ ಟಾಂಗ್ ನೀಡಿದರು.
ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಬಗ್ಗೆ ಮಾತನಾಡಿದ ಶೆಟ್ಟರ್, ಇದು ಕನ್ನಡ-ಮರಾಠಿ ಭಾಷೆಯ ಸಮಸ್ಯೆ ಅಲ್ಲ. ಆ ಸಮಾಜದಲ್ಲಿ ಇರುವ ವ್ಯಕ್ತಿಗಳ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಸಮಾಜ ಒಡೆಯುವುದು ಹಾಗೂ ಕನ್ನಡಿಗರು, ಮರಾಠಿಗರ ನಡುವಿನ ಸಂಘರ್ಷ ಅಲ್ಲ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದರು.