ಹುಬ್ಬಳ್ಳಿ: ಇಲ್ಲಿನ ಗೋಕುಲ್ ರಸ್ತೆಯ ಮಯೂರಿ ಗಾರ್ಡನ್ ಹಾಗೂ ದತ್ತ ನಗರ ಸೇರಿದಂತೆ ಇತರೆಡೆ ರವಿವಾರ ಬೆಳಗ್ಗೆ
ಹು-ಧಾ ಕೇಂದ್ರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಪಾದಯಾತ್ರೆ ಮೂಲಕ ಮತಯಾಚಿಸಿದರು.
ನಂತರ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಈ ಭಾಗದ ಉದ್ಯಾನಗಳು, ರಸ್ತೆ ಸೇರಿದಂತೆ
ಮೂಲಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಿದ್ದೇನೆ. ಈ ಭಾಗದ ಜನರು ಬೇಡಿಕೆಯಿಟ್ಟ ಪ್ರತಿಯೊಂದು ಮನವಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕಾರ್ಯಗಳು ಹಾಗೂ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು. ಮುಖಂಡರಾದ ನಾಗೇಶ ಕಲಬುರ್ಗಿ, ತಿಪ್ಪಣ್ಣ ಮಜ್ಜಗಿ, ರಾಘವೇಂದ್ರ ರಾಮದುರ್ಗ, ಸುರೇಶ ಮೊದಲಾದವರಿದ್ದರು.
ಪ್ರಚಾರಕ್ಕೆ ಬೀದಿ ನಾಟಕ: ನಗರದ ನಾಗಶೆಟ್ಟಿಕೊಪ್ಪ ಶ್ರೀ ಹನುಮಂತ ದೇವಸ್ಥಾನದ ಬಳಿ ಬಿಜೆಪಿ ಪರ ಪ್ರಚಾರ ಕೈಗೊಳ್ಳುವ ಬೀದಿ ನಾಟಕ ಕಾರ್ಯಕ್ರಮಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಚಾಲನೆ ನೀಡಿದರು. ನಂತರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದ್ದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲ ಪಡಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲೂ ಬಿಜೆಪಿ ಇದ್ದು, ಅಭಿವೃದ್ಧಿ ವೇಗಕ್ಕೆ ಪ್ರಾಧಾನ್ಯತೆ ದೊರೆಯಲಿದೆ. ಹು.ಧಾ. ಕೇಂದ್ರ ಮತಕ್ಷೇತ್ರದಲ್ಲಿ ಬಹುಮುಖ್ಯವಾಗಿ 24/7 ಕುಡಿಯುವ ನೀರಿನ ಯೋಜನೆ, ಒಳಚರಂಡಿ, ನಗರಕ್ಕೆ 430 ಕೋಟಿ ಸಿಆರ್‌ಎಫ್ ಅನುದಾನ, ಬಿಆರ್‌ಟಿಎಸ್, ಬಹುತೇಕ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿವೆ. ನಾನು ಮತ್ತು ಸಂಸದ ಪ್ರಹ್ಲಾದ ಜೋಶಿ ನಗರವನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆ ಮಾಡುವಲ್ಲಿ ಶ್ರಮ ವಹಿಸಿದ್ದೇವೆ. ನಗರದ ಮತ್ತಷ್ಟು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಉಪ ಮಹಾಪೌರ ಮೇನಕಾ ಹುರಳಿ, ಮುಖಂಡರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ವೀರೇಶ ಸಂಗಳದ, ದತ್ತಮೂರ್ತಿ ಕುಲಕರ್ಣಿ ಇನ್ನಿತರರಿದ್ದರು.