ವಿಜಯಪುರ : ಕೈಗಾರಿಕಾ ಇಲಾಖೆ ಹಾಗೂ ಉದ್ಯಮಿಗಳಿಂದ ತೆರಿಗೆ ಪಡೆದಿರುವ ವಿವಿಧ ಇಲಾಖೆಗಳು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿವೆಯೇ, ಇಲ್ಲವೇ ಎಂದು ಪರಿಶೀಲನೆ ನಡೆಸುವಂತೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶುಕ್ರವಾರ ನಗರದಲ್ಲಿ ಇಲಾಖಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ನೂತನ ಕೈಗಾರಿಕಾ ನೀತಿಯಲ್ಲಿ ಬೆಂಗಳೂರು ಹೊರತಾದ ಪ್ರದೇಶ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಕೈಗಾರಿಕಾ ಅಭಿವೃದ್ಧಿ ಆದ್ಯತೆ ನೀಡಲಾಗಿದೆ. ಮೂಲಭೂತ ಸೌಲಭ್ಯ ಕಲ್ಪಿಸಿದಲ್ಲಿ ಹೊರಗಿನಿಂದ ಉದ್ಯಮಿಗಳು ಬರಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲಿ ಆಯಾ ಪ್ರದೇಶದಲ್ಲಿ ಅಗತ್ಯ ಭೂಮಿ, ಪ್ರದೇಶ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಭವಿಷ್ಯದಲ್ಲಿ ಮಾದರಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಆಗಲಿದೆ. ಈ ಭಾಗದಲ್ಲಿ ರೈಲು, ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆ. ರೈಲ್ವೆ ಜೋಡು ಮಾರ್ಗ ಹಾಗೂ ಹೆದ್ದಾರಿಗಳ ಅಭಿವೃದ್ಧಿ ಕೈಗಾರಿಕಾ ಅಭಿವೃದ್ಧಿಗೆ ಪೂರಕ ಪರಿಸರ ನಿರ್ಮಾಣವಾಗಿದೆ. ಹೀಗಾಗಿ ಭವಿಷ್ಯದಲ್ಲಿ ಈ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. ಉತ್ತರ ಕರ್ನಾಟಕಕ್ಕೆ ಉದ್ಯಮ ಹಾಗೂ ಕೈಗಾರಿಕಾ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯವಾಗಿದೆ. ಈ ಭಾಗದ ಉದ್ಯಮ ಹಾಗೂ ರೈತರಿಗೆ ಸಂಬಂಧಿಸಿದ ವಿಷಯಗಳ ಕಡತ ಸಮೇತ ಕಚೇರಿ ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರ ಆಗಬೇಕು. ವಿಜಯಪುರ ಜಿಲ್ಲೆಗೆ ಕೆಐಎಡಿಬಿ ಕಛೇರಿ ಮಂಜೂರು ಮಾಡಬೇಕು. ಗುಡಿ ಕೈಗಾರಿಕೆ ಗಾಣದ ಎಣ್ಣೆ ಉದ್ಯಮ ನಿರ್ವಹಣಾ ವೆಚ್ಚಕ್ಕೆ ತೆರಿಗೆ ಕಡಿತ ಮಾಡುವಂತೆ ಉದ್ಯಮಿಗಳು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರನ್ನು ಆಗ್ರಹಿಸಿದರು.
ಕರ್ನಾಟಕ ಏಕೀಕರಣದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿ ಆಗಿಲ್ಲ. ಅದರಲ್ಲೂ ವಿಜಯಪುರ ಜಿಲ್ಲೆ ಕೈಗಾರಿಕೆ ರಂಗದಲ್ಲಿ ಹಿಂದುಳಿದಿದೆ. ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಒಟ್ಟು ಬಳಕೆಯ ಶೇ.40 ರಷ್ಟು ವಿದ್ಯುತ್ ಉತ್ಪಾದನೆ ಆಗಿದೆ. ಜಿಲ್ಲೆಯಲ್ಲಿ ಜಲ ಸಂಪನ್ಮೂಲವಿದೆ. ಫಲವತ್ತಾದ ಭೂಮಿ ಜೊತೆ ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಾದ ಬರಡು ಜಮೀನು ಇದೆ. ವಿಮಾನ ನಿಲ್ದಾಣ ಸ್ಥಾಪನೆ ಆಗುತ್ತಿದೆ. ರೈಲು ಜೋಡಿ ಮಾರ್ಗ ನಿರ್ಮಾಣವಾಗಿದೆ. ಹೀಗಾಗಿ ಮೂಲಭೂತ ಸೌಲಭ್ಯ ಹಾಗೂ ಪೂರಕ ಸಂಪನ್ಮೂಲ ಹೊಂದಿರುವ ವಿಜಯಪುರ ಜಿಲ್ಲೆಗೆ ಬೃಹತ್ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ತಹಿಸಿದರು.
ಕೈಗಾರಿಕಾ ಇಲಾಖೆ ಬೆಳಗಾವಿ ವಿಭಾಗದ ಸಿಇಒ ಲಕ್ಷ್ಮೀಶ ವಿಜಯಪುರ ಜಿಲ್ಲೆಯ ಕೈಗಾರಿಕಾ ಸ್ಥಿತಿಗತಿ ಕುರಿತು ವಿವರ ನೀಡಿದರು.ಮಹಲ್ ಭಾಗಾಯತ್ ಕೈಗಾರಿಕಾ ಪ್ರದೇಶವನ್ನು ಪಾಲಿಕೆ ವ್ಯಾಪ್ತಿಗೆ ಹಸ್ತಾಂತರ ಮಾಡಲು ಕೋರಿದರು. ಮುಳವಾಡ ಕೈಗಾರಿಕಾ ಪ್ರದೇಶದ4456 ಎಕರೆ ಬೇಡಿ ಇರಿಸಿದ್ದು, ಮೊದಲ 3530 ಎಕರೆ ಭೂಮಿ ಮಂಜೂರಾಗಿದೆ. ಇದೀಗ 5000 ಎಕರೆ ಲಭ್ಯವಿದೆ. ಕೈಗಾರಿಕೆ ಆರಂಭಿಸಲು ಬಹುತೇಕ ಎಲ್ಲ ಪ್ರಕ್ರಿಯೆ ಮುಗಿಸಿದ್ದೇವೆ. ಮೂಲಭೂತ ಸೌಲಭ್ಯಗಳ ಕಾಮಗಾರಿ ಶೀಘ್ರವೇ ಮುಗಿಸುತ್ತೇವೆ ಎಂದು ವಿವರಿಸಿದರು.ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಶಾಸಕ ಸೋಮನಗೌಡ ಸಾಸನೂರು, ಜಿಲ್ಲಾಧಿಕಾರಿ ಸುನಿಲಕುಮಾರ, ಜಿ.ಪಂ. ಸಿಇಒ ಗೋವಿಂದರಡ್ಡಿ, ಇತರರು ಉಪಸ್ಥಿತರಿದ್ದರು.