ಕಲಬುರಗಿ: ಚಿಂಚೋಳಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಲಬುರಗಿ ಲೋಕಸಭಾ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್ ಅವರ ರಾಜೀನಾಮೆಯನ್ನು ಸ್ಪೀಕರ್ ರಮೇಶ ಕುಮಾರ ಯಾವುದೇ
ಒತ್ತಡಕ್ಕೆ ಮಣಿಯದೆ ಅಂಗೀಕರಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಒತ್ತಾಯಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ| ಉಮೇಶ ಜಾಧವ್ ರಾಜೀನಾಮೆ ಅಂಗೀಕರಿಸದಂತೆ ಕಾಂಗ್ರೆಸ್ ನಾಯಕರು ಸ್ಪೀಕರ್ ರಮೇಶ ಕುಮಾರ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸ್ಪೀಕರ್ ಯಾವುದೇ ರೀತಿಯ ಒತ್ತಡಕ್ಕೆ ಮಣಿಯಬಾರದು. ಡಾ| ಜಾಧವ್ ನೀಡಿರುವ ರಾಜೀನಾಮೆ ಅಂಗೀಕರಿಸಬೇಕು ಎಂದರು.
ಮತದಾರರಲ್ಲಿ ಗೊಂದಲ ಸೃಷ್ಟಿಸಲೆಂದು ಬಿಜೆಪಿ ಅಭ್ಯರ್ಥಿ ಬಗ್ಗೆ ಕೆಲವರು ಏನೇನೋ ವಂದತಿ ಹಬ್ಬಿಸುತ್ತಿದ್ದಾರೆ. ಆದರೆ,
ಕಲಬುರಗಿ ಕ್ಷೇತ್ರಕ್ಕೆ ಡಾ| ಜಾಧವ್ ಅವರೇ ಬಿಜೆಪಿ ಅಭ್ಯರ್ಥಿ. ಅವರೇ ನಾಮಪತ್ರ ಸಲ್ಲಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಶೀಘ್ರವೇ ನಾಮಪತ್ರ ಸಲ್ಲಿಕೆ ದಿನ ತಿಳಿಸಲಾಗುವುದು ಎಂದು ಹೇಳಿದರು.
ಸುರ್ಜೆವಾಲಾ ರಾಜೀನಾಮೆಗೆ ಆಗ್ರಹ: ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸುಜೇವಾಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪ ಘನತೆಗೆ ಚ್ಯುತಿ ತರಲೆಂದು ಸುಳ್ಳು ದಾಖಲೆಯನ್ನು ಕಾಂಗ್ರೆಸ್ ಸೃಷ್ಟಿಸಿದೆ.
ಆದರೆ, ಈಗಾಗಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇವು ನಕಲಿ ದಾಖಲೆ ಎಂದು ಸ್ಪಷ್ಟಪಡಿಸಿದ್ದು, ಬಿಜೆಪಿಗೆ ಯಾವುದೇ ಹಾನಿಯಾಗಲ್ಲ ಎಂದರು. ಬಿಜೆಪಿ ನಗರಾಧ್ಯಕ್ಷ, ಎಂಎಲ್‌ಸಿ ಬಿ.ಜಿ. ಪಾಟೀಲ ಮಾತನಾಡಿ, ಹೈದ್ರಾಬಾದ
ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ)ನೇ ಕಲಂ ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ 570 ಸಹಾಯಕ ಇಂಜಿನಿಯರ್ ಮತ್ತು 300 ಕಿರಿಯ ಇಂಜಿನಿಯರ್ ಹುದ್ದೆಗಳ ಭರ್ತಿಯಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸದೇ ಅನ್ಯಾಯ ಮಾಡಲಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿರೋಧಿಗಳ ಭೇಟಿ: ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರೋಧಿಗಳು ಯಾರೇ ಇದ್ದರೂ ನಾವು ಅವರನ್ನು ಭೇಟಿ ಮಾಡುತ್ತೇವೆ. ಕಾಂಗ್ರೆಸ್ ವಿರುದ್ಧ ಹೋರಾಡಲು ಬಿಜೆಪಿಗೆ ಕರೆ ತರುತ್ತೇವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ|ಉಮೇಶ ಜಾಧವ್ ಗೆಲುವು ನಿಶ್ಚಿತ ಎಂದು ಹೇಳಿದರು.
28ಕ್ಕೆ ಬಿಜೆಪಿ ಪ್ರತಿಭಟನೆ ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 870 ಇಂಜಿನಿಯರ್ ಹುದ್ದೆಗಳ ಭರ್ತಿಯಲ್ಲಿ ಹೈ. ಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಒದಗಿಸದೆ ಇರುವುದನ್ನು ಖಂಡಿಸಿ ಬಿಜೆಪಿ ವತಿಯಿಂದಲೂ
ಮಾ.28ರಂದು ಪ್ರತಿಭಟನೆ ನಡೆಸಲಾಗುವುದು. ಇದೇ ವಿಚಾರವಾಗಿ ಅಂದು ವಿವಿಧ ಸಂಘಟನೆಗಳು ನಡೆಸುವ
ಪ್ರತಿಭಟನೆಗಳು ಬಿಜೆಪಿ ಬಾವುಟದ ಅಡಿಯಲ್ಲಿ ನಡೆಯಲಿದೆ.
ಎಂಎಲ್‌ಸಿ ಬಿ.ಜಿ.ಪಾಟೀಲ, ಬಿಜೆಪಿ ನಗರಾಧ್ಯಕ್ಷ