Advertisement

ಜಾಧವ್‌ ರಾಜೀನಾಮೆ ಸಸ್ಪೆನ್ಸ್‌ ಮುಂದುವರಿಕೆ

01:56 AM Mar 26, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿ ಕಲಬುರಗಿ ಅಭ್ಯರ್ಥಿಯಾಗಿರುವ ಉಮೇಶ ಜಾಧವ್‌ ಅವರ ಸದಸ್ಯತ್ವ ಅನರ್ಹತೆ ಪ್ರಕರಣದ ತೀರ್ಪು ಕಾಯ್ದಿರಿಸಲಾಗಿದೆ.

Advertisement

ಹೀಗಾಗಿ, ಉಮೇಶ್‌ ಜಾಧವ್‌ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರವಾಗುತ್ತಾ? ಅನರ್ಹತೆ ತೂಗುಕತ್ತಿ ಮುಂದುವರಿಯುತ್ತಾ? ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್‌ ಜಾಧವ್‌ ಕಲಬುರಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವುದು ಮಾನ್ಯ ಆಗುತ್ತದೆಯೇ ಎಂಬ ಪ್ರಶ್ನೆಗಳಿಗಿನ್ನೂ ಉತ್ತರ ಸಿಕ್ಕಲ್ಲ.

ದೇಶದಲ್ಲಿ ಇದೇ ಮೊದಲ ಬಾರಿಗೆ ಶಾಸಕತ್ವಕ್ಕೆ ರಾಜೀನಾಮೆ ನೀಡಿದ ಶಾಸಕನ ಕ್ಷೇತ್ರದ ಮತದಾರರನ್ನು ಕರೆದು ಅದಾಲತ್‌ ನಡೆಸಿ ಅವರ ಅಭಿಪ್ರಾಯಗಳನ್ನು ಆಲಿಸುವ ಸಂಪ್ರದಾಯ ಹುಟ್ಟುಹಾಕಿದ ಸ್ಪೀಕರ್‌ ರಮೇಶ್‌ಕುಮಾರ್‌ ವಿಧಾನಸೌಧದಲ್ಲಿ ಸೋಮವಾರ ವಿಚಾರಣೆ ನಡೆಸಿದ ನಂತರ, ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿದರು. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಜಮೀರ್‌ ಅಹಮದ್‌ ಹಾಗೂ ಇತರೆ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದ ಹೈಕೋರ್ಟ್‌ ವಿಭಾಗೀಯ ಪೀಠದ ತೀರ್ಪು ಸಹ ನಮ್ಮ ಮುಂದಿದೆ. ಎಲ್ಲವನ್ನೂ ಪರಿಶೀಲಿಸಿ ಆಮೇಲೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಜಾಧವ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳ ಸಂಘ-ಸಂಸ್ಥೆಗಳು ಹಾಗೂ ಮತದಾರರ ಅಭಿಪ್ರಾಯ ಆಲಿಸಿದ್ದೇನೆ. ನನಗೂ ಸಂಪೂರ್ಣ ತಿಳುವಳಿಕೆ ಇಲ್ಲದ ಕಾರಣ ಕಾನೂನು ಪರಿಣಿತರ ಸಲಹೆ ಪಡೆಯಬೇಕಿದೆ ಎಂದರು.

ಅನರ್ಹ ಮಾಡಿ ಎಂದ ಕಾಂಗ್ರೆಸ್‌
ಕಾಂಗ್ರೆಸ್‌ ಪರವಾಗಿ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಪಿ.ಆರ್‌.ರಮೇಶ್‌ ಭಾಗಿಯಾಗಿದ್ದರು. ಕಾಂಗ್ರೆಸ್‌ ಪರವಾಗಿ ವಕೀಲ ಶಶಿಕಿರಣ್‌ ವಾದ ಮಂಡಿಸಿ, ಜಾಧವ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂಗೀಕಾರಕ್ಕೆ ಮುನ್ನವೇ ಬಿಜೆಪಿ ಸೇರಿದ್ದು, ಇದು ಪಕ್ಷಾಂತರ ಕಾಯ್ದೆಯಡಿ ಬರುತ್ತದೆ. ಜತೆಗೆ, ಪಕ್ಷದ ವಿಪ್‌ ಉಲ್ಲಂಘನೆಗೆ ಸಂಬಂಧಿಸಿದಂತೆ ಅನರ್ಹತೆ ದೂರು ಸಹ ಇತ್ಯರ್ಥವಾಗಿಲ್ಲ. ಹೀಗಾಗಿ, ರಾಜೀನಾಮೆ ಅಂಗೀಕಾರ ಮಾಡದೆ ಅನರ್ಹತೆಗೊಳಿಸಬೇಕು ಎಂದು ವಾದ ಮಂಡಿಸಿದರು.

Advertisement

ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಲ್ಲ
ಜಾಧವ್‌ ಪರ ಪರ ವಕೀಲ ಸುದೀಪ್‌ ಪಾಟೀಲ್‌ ವಾದ ಮಂಡಿಸಿ, ಮಾ. 4 ಕ್ಕೆ ಜಾಧವ್‌ ರಾಜೀನಾಮೆ ನೀಡಿದ್ದಾರೆ. ಮಾರ್ಚ್‌ 6 ಕ್ಕೆ ಬಿಜೆಪಿ ಸೇರಿದ್ದಾರೆ. ಪಕ್ಷಾಂತರ ಕಾಯ್ದೆ ಅನ್ವಯ ಆಗುವುದಿಲ್ಲ . ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರ ಮಾಡಿ. ಕಾಂಗ್ರೆಸ್‌ ಕೊಟ್ಟಿರುವ ಅನರ್ಹತೆ ಅರ್ಜಿ ವಿಚಾರಣೆ ಮುಂದುವರಿಸಲು ನಮ್ಮದೇನೂ ಅಭ್ಯಂತರವಿಲ್ಲ ಎಂದರು.

ಸಂವಿಧಾನದ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿರುವ ಅನರ್ಹತೆ ಕುರಿತು ನಿಯಮಗಳು ನೂನ್ಯತೆಯಿಂದ ಕೂಡಿವೆ. ಅದರ ಬದಲಾವಣೆ ಆಗುವ ಅವಶ್ಯಕತೆಯಿದೆ. ನಾನು ಒಂದೊಮ್ಮೆ ಅನರ್ಹತೆಗೊಳಿಸಿದರೂ ಚಿಂಚೋಳಿಯಿಂದ ಅವರು ಮತ್ತೆ ಸ್ಪರ್ಧೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆ ಬದಲಾವಣೆಯಾಗಬೇಕು. ಆದರೆ, ಅದು ಸಂಸತ್‌ಗೆ ಬಿಟ್ಟ ವಿಚಾರ.
– ರಮೇಶ್‌ಕುಮಾರ್‌, ಸ್ಪೀಕರ್‌

ನನಗೆ ಮತ ಹಾಕಿ ಗೆಲ್ಲಿಸಿ ಇಲ್ಲಿಗೆ ಬಂದ ನಿಮಗೆ ಧನ್ಯವಾದ. ಕಳೆದ 6 ತಿಂಗಳಿಂದ ಏನೆಲ್ಲಾ ನಡೆದಿದೆ ಎಲ್ಲರಿಗೂ ಗೊತ್ತಿದೆ. ಅದನ್ನು ನಾನು ಈಗ ಹೇಳಲ್ಲ. ಸ್ಪೀಕರ್‌ ಅವರು ಏನೇ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ.
– ಉಮೇಶ್‌ ಜಾಧವ್‌

Advertisement

Udayavani is now on Telegram. Click here to join our channel and stay updated with the latest news.

Next