ಕಲಬುರಗಿ: ನಿರುದ್ಯೋಗಿ ಯುವಕ- ಯುವತಿ ಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬರುವ 15 ದಿನಗಳಲ್ಲಿ ಮತ್ತೊಂದು ಉದ್ಯೋಗ ಮೇಳ ಆಯೋಜಿಸಬೇಕೆಂದು ಎಂದು ಸಂಸದ ಡಾ| ಉಮೇಶ ಜಾಧವ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಕನ್ನಡ ಭವನ ಆವರಣದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಯಾವುದೇ ಉದ್ಯೋಗ ಮೇಳಗಳನ್ನು ಆಯೋಜಿಸುವ ಮುನ್ನ ಎಲ್ಲೆಡೆ ಸರಿಯಾಗಿ ಪ್ರಚಾರ ಮಾಡಬೇಕು. ಆದರೆ, ಈ ಇವತ್ತು (ಗುರುವಾರ) ನಡೆಯುತ್ತಿರುವ ಮೇಳದ ಕುರಿತು ಎಲ್ಲೂ ಪ್ರಚಾರ ಮಾಡಿಲ್ಲ. ಹೀಗಾಗಿ ಸಾಕಷ್ಟು ಯುವಕರಿಗೆ ಮೇಳದ ಬಗ್ಗೆ ಮಾಹಿತಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉದ್ಯೋಗ ಮೇಳದಲ್ಲಿ ಬೆರಳೆಣಿಕೆಯಷ್ಟೇ ಮಳಿಗೆಗಳು ಬಂದಿವೆ. ಯಾವ ದೊಡ್ಡ ಕಂಪನಿಗಳೂ ಬಂದಿಲ್ಲ. ಮುಖ್ಯವಾಗಿ ಮೇಳದ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಕಂಡು ಬರುತ್ತಿದೆ. ನಿಮ್ಮ ಮಕ್ಕಳಿಗೆ ನೌಕರಿಗಾಗಿ ಹೇಗೆ ಬಡಿದಾಡುತ್ತಿರೋ ಅದೇ ಮಾದರಿಯಲ್ಲಿ ಬಡ, ಗ್ರಾಮೀಣ ಜನರಿಗೂ ಉದ್ಯೋಗ ಸಿಗಲಿ ಎಂಬ ಮನೋಭಾವವಾದರೂ ಸರ್ಕಾರಿ ಅಧಿಕಾರಿಗಳಲ್ಲಿ ಇರಬೇಕೆಂದು ತಾಕೀತು ಮಾಡಿದರು.
ಗ್ರಾಮೀಣ ಯುವಕ, ಯುವತಿಯವರಿಗೆ ಉದ್ಯೋಗ ಅವಶ್ಯಕತೆಯಿದೆ. ಆದ್ದರಿಂದ ಉದ್ಯೋಗ ಮೇಳ ಏರ್ಪಡಿಸಿರುವ ಬಗ್ಗೆ ಪ್ರತಿ ಹಳ್ಳಿಗಳಲ್ಲಿಯೂ ಡಂಗೂರ ಸಾರಬೇಕು. ಪಟ್ಟಣ, ನಗರಗಳಲ್ಲಿ ಉದ್ಯೋಗ ಪಡೆಯಬಹುದು ಎನ್ನುವ ಕುರಿತು ಗ್ರಾಮೀಣ ಭಾಗದಲ್ಲಿ ಹೇಗೆ ಮಾಹಿತಿ ನೀಡುತ್ತೀರಿ ಎಂಬುವುದೇ ಮುಖ್ಯ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ದಿಲೀಷ್ ಸಸಿ, ಅಧಿಕಾರಿಗಳಾದ ಜಗದೇವಪ್ಪ, ಲೋಹಿತಕುಮಾರ ಮತ್ತಿತರರು ಇದ್ದರು.