Advertisement

‘ಖರ್ಗೆ ಕಣ’ದ ಚಿತ್ರಣ ಬದಲಿಸಿದ ಡಾ.ಜಾಧವ್‌

02:12 AM Mar 06, 2019 | Team Udayavani |

ಕಲಬುರಗಿ: ಈ ಸಲ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಲಂಬಾಣಿ ಸಮಾಜದವರಿಗೆ ಟಿಕೆಟ್‌ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡೂವರೆ ತಿಂಗಳ ಹಿಂದೆಯೇ ಹೇಳಿದ್ದರು. ಅದು ಬುಧವಾರ ಇಲ್ಲಿ ನಡೆಯುವ ಪ್ರಧಾನಿ ಮೋದಿ ರ್ಯಾಲಿ ಹಾಗೂ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಸಾಬೀತಾಗಲಿದೆ.

Advertisement

ಚಿಂಚೋಳಿ ಮತಕ್ಷೇತ್ರದ ಶಾಸಕತ್ವಕ್ಕೆ ಹಾಗೂ ಕಾಂಗ್ರೆಸ್‌ನ ಸದಸ್ಯತ್ವಕ್ಕೆ ಡಾ| ಉಮೇಶ ಜಾಧವ್‌ ರಾಜೀನಾಮೆ ನೀಡಿದ್ದಲ್ಲದೆ, ಬುಧವಾರ ಪ್ರಧಾನಿ ಮೋದಿ ಪಾಲ್ಗೊಳ್ಳುವ ರ್ಯಾಲಿಯ ಬೃಹತ್‌ ವೇದಿಕೆಯಲ್ಲಿಯೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ ಆಗುತ್ತಿರುವುದರಿಂದ ಕಲಬುರಗಿ ಲೋಕಸಭಾ ಚುನಾವಣೆಯ ರಣರಂಗಕ್ಕೆ ಚಾಲನೆ ನೀಡಿದಂತಾಗುತ್ತದೆ.

ಕಾಂಗ್ರೆಸ್‌ನಲ್ಲಿದ್ದರೆ ಬಹಳವೆಂದರೆ ಇನ್ನೊಮ್ಮೆ ಶಾಸಕನಾಗಬಹುದು. ಆದರೆ, ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಕೇಂದ್ರದಲ್ಲಿಯೇ ಸಚಿವರಾಗಬಹುದು. ಒಂದು ವೇಳೆ ಸೋತರೂ ರಾಜ್ಯಸಭಾ ಸದಸ್ಯ ಆಗಬಹುದು ಎಂದು ಡಾ| ಜಾಧವ್‌ ತಿಳಿದುಕೊಂಡಿರುವುದರ ಜತೆಗೆ, ಬಿಜೆಪಿ ಸೇರಲು ಬಂಜಾರಾ ಸಮುದಾಯದ ಗುರುಗಳಾದ ಪೌರಾದೇವಿಯ ರಾಮರಾವ್‌ ಆಶೀರ್ವಾದ ಪಡೆದುಕೊಂಡಿದ್ದಾರೆ. ಅವರು ಶುಭ ಹಾರೈಸಿರುವುದು ಮತ್ತೂಂದು ನಿಟ್ಟಿನಲ್ಲಿ ಕಾಂಗ್ರೆಸ್‌ ಬಿಡಲು ಕಾರಣವಾದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ 80 ಸಾವಿರ ಲಂಬಾಣಿ ಸಮುದಾಯದ ಮತದಾರರಿದ್ದಾರೆ ಎನ್ನುವ ವಿಶ್ಲೇಷಣೆ ಮಾಡಲಾಗುತ್ತಿದೆ.

ಬಿಜೆಪಿಗೆ ಲಾಭದ ನಿರೀಕ್ಷೆ: ಕಾಂಗ್ರೆಸ್‌ ಸಂಸದೀಯ ನಾಯಕ ಹಾಗೂ ರಾಷ್ಟ್ರ ನಾಯಕರಾಗಿರುವ ಜತೆಗೆ, ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಲು ಬಿಜೆಪಿ ಈ ಸಲ ಭಾರಿ ತಂತ್ರಗಾರಿಕೆ ರೂಪಿಸಿದೆ. ಬಿಜೆಪಿಯಲ್ಲಿ ಖರ್ಗೆ ಎದುರು ಸ್ಪರ್ಧಿಸಲು ಹಲವರು ಪೈಪೋಟಿಯಲ್ಲಿದ್ದರೂ ಸಮರ್ಥವಾಗಿ ಪೈಪೋಟಿ ನೀಡುವುದು ಕಷ್ಟ ಎಂಬುದನ್ನು ಮನಗಂಡಿತು. ಮೊದಲನೆಯದಾಗಿ ಲಂಬಾಣಿ ಜನಾಂಗದ ಮತಗಳನ್ನೆಲ್ಲಾ ಸೆಳೆಯುವುದು, ಜತೆಗೆ ಪ್ರಬಲ ನಾಯಕನನ್ನು ಅಂದರೆ ಒಬ್ಬ ಹಾಲಿ ಶಾಸಕನನ್ನು ರಾಜೀನಾಮೆ ಕೊಡಿಸಿ ಆ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವುದು ಆಗಿದೆ. ಈ ನಿಟ್ಟಿನಲ್ಲಿ ಈಗ ಬಿಜೆಪಿ ಯಶಸ್ವಿಯಾಗಿದೆ.

ಮಲ್ಲಿಕಾರ್ಜುನ ಖರ್ಗೆ 2009ರ ಲೋಕಸಭಾ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಸಾಧಿಸಿದರು. ಆಗ ಸಚಿವರಾಗಿದ್ದ ರೇವು ನಾಯಕ ಬೆಳಮಗಿ ವಿರುದ್ಧ  ಕೇವಲ 13,404 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬೆಳಮಗಿ ಇನ್ನಷ್ಟು ಕೆಲಸ ಮಾಡಿದ್ದರೆ ಗೆಲುವು ಸಾಧಿಸುತ್ತಿದ್ದರು. ಆದರೆ, 2014ರ ಚುನಾವಣೆಯಲ್ಲಿ ಖರ್ಗೆ 74,733 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕಳೆದ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಒಬ್ಬರೇ ಶಾಸಕರಿದ್ದರು. ಈಗ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂವರು ಶಾಸಕರಿದ್ದಾರೆ. ಜತೆಗೆ, ಒಬ್ಬರು ಜೆಡಿಎಸ್‌ ಶಾಸಕರಿರುವುದರಿಂದ, ಜತೆಗೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌, ಮುಸ್ಲಿಂ ನಾಯಕ ಖಮರುಲ್‌ ಇಸ್ಲಾಂ ಇಲ್ಲದಿರುವುದು ಬಿಜೆಪಿಗೆ ಪ್ಲಸ್‌ ಆಗುವುದು ನಿಶ್ಚಿತ ಎಂಬುದು ಬಿಜೆಪಿ ಲೆಕ್ಕಾಚಾರ.

Advertisement

ಕಾಂಗ್ರೆಸ್‌ನ ಮುಂದಿನ ನಡೆ ಏನು?: ಜಾಧವ್‌ ರಾಜೀನಾಮೆಯಿಂದ ಕಾಂಗ್ರೆಸ್‌ನಲ್ಲಿ ತಳಮಳ ಉಂಟಾಗಿದ್ದು, ತಿರುಗೇಟು ನೀಡಲು ಚಿಂತನೆ ನಡೆದಿದೆ. ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ, ಬಾಬುರಾವ್‌ ಚವ್ಹಾಣ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್‌ ಉದ್ದೇಶಿಸಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಬಾಬುರಾವ ಚವ್ಹಾಣ ಅವರು, ಜಾಧವ್‌ ಬಿಜೆಪಿ ಸೇರ್ಪಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೆ, ಬಿಜೆಪಿ ರಾಜಾಧ್ಯಕ್ಷರ ಎದುರು ಅಸಮಾಧಾನ ತೋಡಿಕೊಳ್ಳುವೆ. ಅವರಿಂದ ಉತ್ತರ ಸಮರ್ಪಕವಾಗದಿದ್ದರೆ ನಮ್ಮ ಹಾದಿ ನೋಡಿಕೊಳ್ಳುವೆ ಎಂದಿದ್ದಾರೆ.

ಇನ್ನೊಂದೆಡೆ, ಮಾಜಿ ಸಚಿವ ಹಾಗೂ ಕಳೆದೆರಡು ಸಲ ಡಾ| ಜಾಧವ್‌ ಎದುರಾಳಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಸುನೀಲ ವಲ್ಯಾಪುರೆಯವರು ಚಿಂಚೋಳಿ ವಿಧಾನಸಭೆ ಉಪ ಚುನಾವಣೆಯಲ್ಲಿ ಟಿಕೆಟ್‌ ತಮಗೆ ಬೇಕು ಎಂದಿದ್ದಾರೆ. ಇದನೆಲ್ಲಾ ನೋಡಿದರೆ ಕಾಂಗ್ರೆಸ್‌ ಇವರನ್ನು ಸೆಳೆದುಕೊಳ್ಳುವ ಮೂಲಕ ಬಂಜಾರಾ ಸಮುದಾಯದ ಜತೆಗೆ ಚಿಂಚೋಳಿಯಲ್ಲಿ ಬಲವಾದ ಪೆಟ್ಟು ನೀಡಲು ಮುಂದಾಗಿದೆ ಎನ್ನಲಾಗಿದೆ. ಅದೇ ರೀತಿ ಚಿಂಚೋಳಿ ತಾಲೂಕಿನ ಮುಖಂಡರಾದ ರಮೇಶ ಯಾಕಾಪುರ, ಜಿ.ಪಂ ಸದಸ್ಯ ಸಂಜೀವನ್‌ ಯಾಕಾಪುರ ಸೇರಿದಂತೆ ಇತರರನ್ನು ಸಹ ಪಕ್ಷಕ್ಕೆ ಕರೆ ತರಲಿದೆ ಎಂದು
ವರದಿಯಾಗಿದೆ.

ಹಣಮಂತರಾವ್‌ ಭೈರಾಮಡಗಿ 

Advertisement

Udayavani is now on Telegram. Click here to join our channel and stay updated with the latest news.

Next