Advertisement

ಟೆಸ್ಟ್‌  ತಂಡಕ್ಕೆ ಮರಳಿದ ಜಡೇಜ, ವಿಹಾರಿ

11:14 PM May 07, 2021 | Team Udayavani |

ಹೊಸದಿಲ್ಲಿ: ನ್ಯೂಜಿಲ್ಯಾಂಡ್‌ ವಿರುದ್ಧ  ಮುಂದಿನ ತಿಂಗಳು ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಾಗಿ 20 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಇದರಲ್ಲಿ ಯಾವುದೇ ಅಚ್ಚರಿ ಕಂಡುಬಂದಿಲ್ಲ. ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದ ಆಲ್‌ರೌಂಡರ್‌ ರವೀಂದ್ರ ಜಡೇಜ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ತಂಡಕ್ಕೆ ವಾಪಸಾಗಿದ್ದಾರೆ. ಅಷ್ಟೇನೂ ಫಾರ್ಮ್ನಲ್ಲಿಲ್ಲದ ಕುಲದೀಪ್‌ ಯಾದವ್‌ ಮತ್ತು ನವದೀಪ್‌ ಸೈನಿ ಅವರನ್ನು ಕೈಬಿಡಲಾಗಿದೆ.

Advertisement

ಕರ್ನಾಟಕದ ಪೇಸ್‌ ಬೌಲರ್‌ ಪ್ರಸಿದ್ಧ್ ಕೃಷ್ಣ ಸಹಿತ ನಾಲ್ವರನ್ನು ಮೀಸಲು ಆಟಗಾರರನ್ನಾಗಿ ಆರಿಸಲಾಗಿದೆ. ಉಳಿದವರೆಂದರೆ ಅಭಿಮನ್ಯು ಈಶ್ವರನ್‌, ಆವೇಶ್‌ ಖಾನ್‌ ಮತ್ತು ಅರ್ಜಾನ್‌ ನಗ್ವಸ್ವಾಲಾ.

ಕೆ.ಎಲ್‌. ರಾಹುಲ್‌ ಮತ್ತು  ಕೀಪರ್‌  ವೃದ್ಧಿಮಾನ್‌ ಸಾಹಾ ಅವರೂ ತಂಡದಲ್ಲಿದ್ದಾರೆ. ಆದರೆ ಇಬ್ಬರೂ ಅನಾರೋಗ್ಯದಿಂದ ಚೇತರಿಸಿಕೊಂಡು ಫಿಟ್‌ನೆಸ್‌ನಲ್ಲಿ ತೇರ್ಗಡೆಯಾದರಷ್ಟೇ ಇಂಗ್ಲೆಂಡಿಗೆ ತೆರಳುವರು.

5 ಪಂದ್ಯಗಳ ಟೆಸ್ಟ್‌ ಸರಣಿ :

ಫೈನಲ್‌ ಹಣಾಹಣಿ ಜೂ. 18ರಿಂದ 22ರ ತನಕ ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಅನಂತರ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಪಾಲ್ಗೊಳ್ಳಲಿದೆ. ನಾಟಿಂಗ್‌ಹ್ಯಾಮ್‌ (ಆ. 4-8), ಲಾರ್ಡ್ಸ್‌ (ಆ. 12-16), ಲೀಡ್ಸ್‌ (ಆ. 25-29), ಓವಲ್‌ (ಸೆ. 2-6) ಮತ್ತು ಮ್ಯಾಂಚೆಸ್ಟರ್‌ನಲ್ಲಿ (ಸೆ. 10-14) ಈ ಪಂದ್ಯಗಳು ನಡೆಯಲಿವೆ.

Advertisement

ಪಾಂಡ್ಯ, ಭುವಿ, ಶಾ ಅವಗಣನೆ :

ಶುಕ್ರವಾರದ ಆಯ್ಕೆ ವೇಳೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಪರಿಗಣಿಸಲಿಲ್ಲ. ಹಾಗೆಯೇ ಪ್ರಚಂಡ ಬ್ಯಾಟಿಂಗ್‌ ಫಾರ್ಮ್ನಲ್ಲಿರುವ ಆರಂಭಕಾರ ಪೃಥ್ವಿ ಶಾ ಮತ್ತು ಫಿಟ್‌ನೆಸ್‌ಗೆ ಮರಳಿದ ಭುವನೇಶ್ವರ್‌ ಅವರನ್ನೂ ದೂರ ಇಡಲಾಗಿದೆ. ಟಿ. ನಟರಾಜನ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ ತಂಡದಿಂದ ಬೇರ್ಪಟ್ಟರು.

ಹಾರ್ದಿಕ್‌ ಪಾಂಡ್ಯ ಇನ್ನೂ ಬೌಲಿಂಗ್‌ ಮಾಡುವ ಸ್ಥಿತಿಯಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ ಎಂಬುದಾಗಿ ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ. ಅಲ್ಲದೇ ಮತ್ತೋರ್ವ ಆಲ್‌ರೌಂಡರ್‌ ರವೀಂದ್ರ ಜಡೇಜ ತಂಡಕ್ಕೆ ಮರಳಿದ್ದೂ ಪಾಂಡ್ಯ ಅವರ ಆಯ್ಕೆಗೆ ಹಿನ್ನಡೆಯಾಗಿ ಪರಿಣಮಿಸಿತು.

ಗುಜರಾತ್‌ನ 23 ವರ್ಷದ ಎಡಗೈ ವೇಗಿ ಅರ್ಜಾನ್‌ ನಗ್ವಸ್ವಾಲಾ ಮೀಸಲು ಕ್ರಿಕೆಟಿಗರ ಯಾದಿಯ ಅಚ್ಚರಿಯಾಗಿದ್ದಾರೆ. 2019-20ರ ಋತುವಿನಲ್ಲಿ 16 ಪ್ರಥಮ ದರ್ಜೆ ಪಂದ್ಯಗಳಿಂದ 62 ವಿಕೆಟ್‌ ಉರುಳಿಸಿದ ಸಾಧನೆ ಇವರದಾಗಿದೆ. ಪ್ರಸ್ತುತ ಭಾರತದಲ್ಲಿ ಆಡುತ್ತಿರುವ ಏಕೈಕ ಪಾರ್ಸಿ ಆಟಗಾರನೆಂಬುದು ಇವರ ಪಾಲಿನ ಹೆಗ್ಗಳಿಕೆ.

ಭಾರತ ತಂಡ :

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶುಭಮನ್‌ ಗಿಲ್‌, ಮಾಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್‌ ಪಂತ್‌ (ವಿ.ಕೀ.), ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬುಮ್ರಾ, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಶಾರ್ದೂಲ್‌ ಠಾಕೂರ್‌, ಉಮೇಶ್‌ ಯಾದವ್‌.ಕೆ.ಎಲ್‌. ರಾಹುಲ್‌ ಮತ್ತು ವೃದ್ಧಿಮಾನ್‌ ಸಾಹಾ (ಸಂಪೂರ್ಣ ಫಿಟ್‌ನೆಸ್‌ ಹೊಂದಿದರೆ).

ಮೀಸಲು ಆಟಗಾರರು: ಅಭಿಮನ್ಯು ಈಶ್ವರನ್‌, ಪ್ರಸಿದ್ಧ್ ಕೃಷ್ಣ, ಆವೇಶ್‌ ಖಾನ್‌, ಅರ್ಜಾನ್‌ ನಗ್ವಸ್ವಾಲಾ.

Advertisement

Udayavani is now on Telegram. Click here to join our channel and stay updated with the latest news.

Next