Advertisement

ಗಜೇಂದ್ರಗಡದಲ್ಲಿ ಹಲಸಿನ ಹಣ್ಣಿನ ಘಮ!

03:56 PM Jun 29, 2022 | Team Udayavani |

ಗಜೇಂದ್ರಗಡ: ವಾಣಿಜ್ಯ ನಗರಿ ಗಜೇಂದ್ರಗಡಕ್ಕೆ ಈಗ ಹಲಸು ಲಗ್ಗೆ ಇಟ್ಟಿದ್ದು, ಪರಿಮಳ ಸೂಸುತ್ತಾ ದಾರಿ ಹೋಕರ ಗಮನ ಸೆಳೆಯುತ್ತಿದೆ. ಪಟ್ಟಣದ ರಸ್ತೆ ಬದಿಯಲ್ಲಿ ಇದರ ಮಾರಾಟ ಜೋರಾಗಿ ನಡೆಯುತ್ತಿದೆ.

Advertisement

ಶಿವಮೊಗ್ಗ, ಶಿಕಾರಿಪುರ, ಸಾಗರ, ಶಿರಸಿ ಕಡೆ ಇದನ್ನು ಬೆಳೆಯುತ್ತಿದ್ದು,ಅಲ್ಲಿಯ ಬೆಳೆಗಾರರು ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡುತ್ತಾರೆ. ಪಟ್ಟಣದ ಮಾರಾಟಗಾರರು ಅಲ್ಲಿಂದ ತಂದು ಗಾತ್ರಕ್ಕೆ ತಕ್ಕಂತೆ ಮಾರುತ್ತಾರೆ. ಸಣ್ಣ ಗಾತ್ರದ ಹಣ್ಣಿಗೆ 150 ರೂ, ದೊಡ್ಡ ಗಾತ್ರ 300 ರಿಂದ 500ರ ವರೆಗೆ ಮಾರಾಟ ಆಗುತ್ತವೆ. ಆದರೆ ಇಲ್ಲಿ ಪೂರ್ಣ ಹಣ್ಣುಗಳನ್ನು ಖರೀದಿಸದೇ ಇರುವುದರಿಂದ ಒಂದು ಪೀಸ್‌ ಹಲಸಿನ ಹಣ್ಣಿಗೆ 5 ರೂ.ನಂತೆ ಮಾರುತ್ತಾರೆ. ಹಲಸು ಹಣ್ಣಿನ ಪೀಸ್‌ ಕೆಜಿಗೆ 100 ರಿಂದ 120ರ ವರೆಗೆ ಮಾರಾಟ ಮಾಡುತ್ತಿದ್ದಾರೆ.

ಹಲಸಿನಿಂದ ಬಗೆಬಗೆಯ ಖಾದ್ಯ: ಬಿಳಿ, ಹಳದಿ, ಹೆಬ್ಬು, ಚಂದ್ರ, ಅಂಬು, ಬಿಳಿ ತೊಳೆ ಹೀಗೆ ಹಲಸಿನಲ್ಲಿ ವಿವಿಧ ತಳಿಗಳಿವೆ. ಹಲಸಿನ ಹಣ್ಣು ತಿನ್ನುವುದಕ್ಕೆ ಅಷ್ಟೆ ಅಲ್ಲ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಚಿಪ್ಸ್‌, ಹಪ್ಪಳ, ದೋಸೆ, ಪಾನಕ, ಕೇಸರಿಬಾತ್‌, ಪಾಯಸ, ಕಡುಬು, ಸಿರಾ, ಹಲ್ವಾ, ಪಕೋಡ ಸೇರಿದಂತೆ ವಿವಿಧ ಬಗೆ ಖಾದ್ಯಗಳನ್ನು ತಯಾರಿಸುತ್ತಾರೆ. ಹಲಸಿನ ಕಾಯಿಯಿಂದ ಪಲ್ಯ ಸಹ ಮಾಡುತ್ತಾರೆ. ಹಲಸಿನ ಹಣ್ಣಿನ ಬೀಜ ಸುಟ್ಟುಕೊಂಡು ಹಾಗೂ ಸಾರು ಮಾಡುತ್ತಾರೆ.

ಜುಲೈನಲ್ಲಿ ಸುಗ್ಗಿ ಮುಕ್ತಾಯ: ಡಿಸೆಂಬರ್‌ನಲ್ಲಿ ಆರಂಭಗೊಳ್ಳುವ ಹಲಸಿನ ಸುಗ್ಗಿ ಜುಲೈನಲ್ಲಿ ಮುಕ್ತಾಯಗೊಳ್ಳುತ್ತದೆ.ಹಲಸಿನ ಹಣ್ಣನ್ನು ಹಸಿದು ತಿಂದರೆ ಚೆನ್ನ. ಹಲಸಿನ ಹಣ್ಣಿನ ರಸಾಯನ ಚಪ್ಪರಿಸಿಕೊಂಡು ತಿಂದರೆ ಅದರ ರುಚಿಯೇ ಬೇರೆ. ಮಾರುಕಟ್ಟೆಗಳಿಗಿಂತ ನಗರ, ಪಟ್ಟಣ, ಹೆದ್ದಾರಿ ಹಾಗೂ ರಸ್ತೆ ಬದಿಯಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಬಲು ಜೋರಾಗಿ ನಡೆಯುತ್ತದೆ. ಹಲಸುಗಳನ್ನು ಬಿಡಿಸಿ, ಒಂದು ಗಾಜಿನ ಡಬ್ಟಾದಲ್ಲಿ ಹಾಕಿ ರಸ್ತೆ ಬದಿಯ ತಳ್ಳುವ ಗಾಡಿಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಾರೆ.

Advertisement

ನಿಜವಾದ ಹಣ್ಣುಗಳ ರಾಜ: ಹಣ್ಣುಗಳ ರಾಜ ಮಾವು ಎಂಬುದು ಸಾರ್ವತ್ರಿಕ. ಆದರೆ ನಿಜವಾಗಿ ಗಾತ್ರ, ವಿನ್ಯಾಸ, ಮರ, ರುಚಿ, ಅಡುಗೆ ಹೀಗೆ ಒಂದಿಲ್ಲೊಂದು ಬಳಕೆಗೆ ಸಿಗುವ ಹಲಸು ನಿಜವಾದ ಮಹಾರಾಜ. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನ ಪಡೆದಿದೆಯೋ ಹಾಗೆಯೇ ಆರೋಗ್ಯದ ವಿಚಾರದಲ್ಲೂ ಬಹು ಮಹತ್ತರವಾದ ಪ್ರಯೋಜನಗಳನ್ನು ಒಳಗೊಂಡಿದೆ.

ಈ ಭಾಗದಲ್ಲಿ ಹಲಸು ಹಣ್ಣಿನ ಕಂಡು ಬರುವುದು ಕಡಿಮೆ. ಹೀಗಾಗಿ ಪ್ರತಿ ವರ್ಷ ಬೇರೆ ಊರುಗಳಿಂದ ಹಲಸಿನ ಹಣ್ಣು ತಂದು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಇಲ್ಲಿನ ಗ್ರಾಹಕರು ಹಲಸಿನ ಹಣ್ಣಿನ ಸವಿ ಸವಿಯುತ್ತಿದ್ದಾರೆ.  –ಶಂಕ್ರಪ್ಪ ಪಾತ್ರೋಟಿ, ಹಲಸಿನ ಹಣ್ಣು ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next