Advertisement
ಸಾಮಾನ್ಯವಾಗಿ ಹಲಸಿನ ಹಣ್ಣಿನಿಂದ ಕಡುಬು, ಮುಳಕ,ಶೀರಾ, ಪಾಯಸ, ದೋಸೆ, ಇಡ್ಲಿ, ಹೋಳಿಗೆ, ಹಪ್ಪಳ ಅಬ್ಬಬ್ಟಾ ಹೀಗೆ ಹೇಳುತ್ತಾ ಹೋದರೆ ಹಲಸಿನ ಹಣ್ಣಿನಿಂದ ಮಾಡಬಹುದಾದ ತಿನಿಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಬಹಳಷ್ಟು ಮಂದಿಗೆ ಹಲಸು ಬರಿ ಹಣ್ಣಾಗಿ ಗೊತ್ತೇ ಹೊರತು ಆದರಿಂದ ಮಾಡಬಹುದಾದ ತಿನಿಸುಗಳ ಬಗ್ಗೆ ಗೊತ್ತಿಲ್ಲ. ಅದೇನೇ ಇರಲಿ ,ಈಗ ನಾವು ಹಲಸಿನ ಹಣ್ಣಿನ ದೋಸೆ, ಮುಳಕ ಮತ್ತು ಹಪ್ಪಳ ಮಾಡುವುದು ಹೇಗೆ ಎಂಬುದು ತಿಳಿದುಕೊಳ್ಳೋಣ….
ಹಲಸಿನ ಹಣ್ಣಿನ ದೋಸೆ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ 2ಕಪ್, ಹಲಸಿನ ಹಣ್ಣಿನ ಸೊಳೆ 15ರಿಂದ 20, ಬೆಲ್ಲ ಸ್ವಲ್ಪ, ತೆಂಗಿನ ತುರಿ 1/4 ಕಪ್, ಕರಿಮೆಣಸು 3, ಎಣ್ಣೆ/ತುಪ್ಪ ,ಉಪ್ಪು ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ
ಅಕ್ಕಿಯನ್ನು 3 ರಿಂದ 4 ಗಂಟೆ ನೀರಿನಲ್ಲಿ ನೆನೆಸಿಡಿ. ಹಲಸಿನ ಹಣ್ಣನ್ನು ಬಿಡಿಸಿ ಇಟ್ಟುಕೊಳ್ಳಿ. ಬಿಡಿಸಿದ ಹಣ್ಣನ್ನು ಪುನ: ಕತ್ತರಿಸಿದಲ್ಲಿ ಅರೆಯಲು ಸುಲಭವಾಗುವುದು. ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು ಮತ್ತು ತೆಂಗಿನ ತುರಿ,ಕರಿಮೆಣಸನ್ನು ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ರುಬ್ಬಿರಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. ತದನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿರಿ. ಒಲೆಯ ಮೇಲೆ ಕಾವಲಿ ಇಟ್ಟು ಹಿಟ್ಟಿನಿಂದ ದೋಸೆ ಹೊಯ್ದು ಎರಡೂ ಬದಿಯಲ್ಲೂ ತುಪ್ಪ ಅಥವಾ ಎಣ್ಣೆ ಹಾಕಿ ಕೆಂಪಗೆ ಬೇಯಿಸಿರಿ. ಬಿಸಿ-ಬಿಸಿಯಾದ ಹಲಸಿನ ಹಣ್ಣಿನ ದೋಸೆ ರೆಡಿ. ಇದು ತೆಂಗಿನ ಕಾಯಿ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಕರವಾಗುತ್ತದೆ.
Related Articles
ಹಲಸಿನ ಹಣ್ಣಿನ ಮುಳಕ:
ಬೇಕಾಗುವ ಸಾಮಾಗ್ರಿಗಳು:
3 ಕಪ್ ಹಲಸಿನ ಹಣ್ಣಿನ ಕೊಚ್ಚಲು
1 ಕಪ್ ಬೆಳ್ತಿಗೆ ಅಕ್ಕಿ
3 ಚಮಚ ತೆಂಗಿನ ಕಾಯಿ ತುರಿ
2 ಚಮಚ ಎಳ್ಳು
1/2 ಲೋಟ ಬೆಲ್ಲ
ಕಾಳು ಮೆಣಸಿನ ಪುಡಿ 1 ಚಮಚ
ಕರಿಯಲಿಕ್ಕೆ ಎಣ್ಣೆ
ಏಲಕ್ಕಿ 4
ಉಪ್ಪು ರುಚಿಗೆ ತಕ್ಕಷ್ಟು
Advertisement
ಮಾಡುವ ವಿಧಾನ:ಮೊದಲು ಅಕ್ಕಿಯನ್ನು ಒಂದೆರಡು ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಬೇಕು ಬಳಿಕ ನೆನೆಸಿದ ಅಕ್ಕಿಯನ್ನು ಬಸಿದು ಹಲಸಿನ ಹಣ್ಣಿನ ತೊಳೆಯ ಕೊಚ್ಚಲಿನೊಟ್ಟಿಗೆ ಅಕ್ಕಿ ಬೆರಸಿ ನೀರು ಮುಟ್ಟಿಸದೆ ನುಣ್ಣಗೆ ರುಬ್ಬಿರಿ, ತೆಗೆಯುವ ವೇಳೆ ತೆಂಗಿನ ತುರಿ, ಏಲಕ್ಕಿ ಹಾಕಿ 2 ಸುತ್ತು ರುಬ್ಬಿರಿ. ಒರಳಿನಿಂದ ತೆಗೆದ ಹಿಟ್ಟಿಗೆ ಎಳ್ಳು ,ಕಾಳು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ತದನಂತರ ಬಾಣಲೆಗೆ ಎಣ್ಣೆ ಹೊಯ್ದು ಒಲೆಯ ಮೇಲಿಟ್ಟು ಕಾದ ನಂತರ ಒದ್ದೆ ಕೈಯಿಂದ ಹಿಟ್ಟಿನ ಸಣ್ಣ-ಸಣ್ಣ ಉಂಡೆ ಮಾಡಿ ಎಣ್ಣೆಯಲ್ಲಿ ಬಿಡಿ ಒಂದು ಸಲಕ್ಕೆ 5ರಿಂದ 8 ಮುಳಕಗಳನ್ನು ಕರಿದು ತೆಗೆಯಿರಿ. ಬಿಸಿ ಬಿಸಿ ಹಲಸಿನ ಹಣ್ಣಿನ ಮುಳಕ ತಿನ್ನಲು ರೆಡಿ…
ಹಲಸಿನ ಹಪ್ಪಳ
ಬೇಕಾಗುವ ಸಾಮಗ್ರಿಗಳು
ಬೆಳೆದ ಹಲಸಿನ ಕಾಯಿ,ಜೀರಿಗೆ ಸ್ವಲ್ಪ,ಮೆಣಸಿನ ಪುಡಿ ಸ್ವಲ್ಪ,ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಚೆನ್ನಾಗಿ ಬೆಳೆದ ಹಲಸಿನಕಾಯಿಯನ್ನು ಕೊಯ್ದು ತಂದು ಸೊಳೆಗಳನ್ನು ಬೀಜದಿಂದ ಬೇರ್ಪಡಿಸಿ ಬಳಿಕ ಸೊಳೆಗಳನ್ನು ಚೆನ್ನಾಗಿ ಬೇಯಿಸಿ ರುಚಿಗೆ ತಕ್ಕಷ್ಟು ಉಪ್ಪು ,ಜೀರಿಗೆ ಮತ್ತು ಮೆಣಸಿನ ಪುಡಿ ಸೇರಿಸಿ ರುಬ್ಬಿ.ರುಬ್ಬಿದ ಹಿಟ್ಟನ್ನು ಉಂಡೆ ಮಾಡಿ ಮಣೆಯ ಮೇಲಿಟ್ಟು ಒತ್ತಿ ಹಪ್ಪಳ ತಯಾರಿಸಿ ಚಾಪೆಯ ಮೇಲೆ ಒಣಗಿಸಿರಿ. ಸುಮಾರು 6ರಿಂದ 7 ದಿನ ಬಿಸಿಲಿಗೆ ಒಣಗಿದರೆ ಹಪ್ಪಳ ಗರಿಗರಿಯಾಗುತ್ತದೆ. ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.ಮಳೆಗಾಲದ ದಿನಗಳಲ್ಲಿ ಎಣ್ಣೆ ಯಲ್ಲಿ ಕರಿದರೆ ಚಾ,ಕಾಫಿಯ ಜೊತೆ ತಿನ್ನಬಹುದು.