Advertisement

ಸಾಗರ: ಹಲಸಿನ ಮೇಳದಲ್ಲಿ ಮಲೆನಾಡಿನ ರುಚಿಗಳ ಔತಣ!

09:49 AM Jun 26, 2022 | Kavyashree |

ಸಾಗರ: ತಾಲೂಕಿನ ಹೆಗ್ಗೋಡಿನ ಬಾಲನಂದನ ಟ್ರಸ್ಟ್ ಹಲಸು ಬೆಳೆಸು ಅಭಿಯಾನದಡಿ ಭಾನುವಾರ ಸಂಜೆ ಗಾಂಧಿ ಮೈದಾನದ ಆವರಣದಲ್ಲಿ ನಡೆಸಿದ ‘ಹಲಸಿನ ಸಂತೆ’ ಗೆ ಸಾವಿರ ಸಂಖ್ಯೆಯ ಜನರು ಹಲಸಿನ ವಿವಿಧ ಮಾದರಿಯ ಕಜ್ಜಾಯಗಳನ್ನು ಮೆಲ್ಲಲು ದಾಳಿಯಿಡುತ್ತಿದ್ದ ದೃಶ್ಯ ಕಂಡುಬಂದಿತ್ತು.

Advertisement

ಬಾಲನಂದನ ಟ್ರಸ್ಟ್‌ನ ರವಿಕಾಶಿ ನೇತೃತ್ವದಲ್ಲಿ ಆಯೋಜನೆಯಾದ ಈ ಸಂತೆಯಲ್ಲಿ ಹಲಸಿನಿಂದಲೇ ತಯಾರಿಸಿದ ಬನ್ಸ್, ಹೋಳಿಗೆ, ಹಪ್ಪಳದ ಮಸಾಲ ಪೂರಿ, ಕಡುಬು, ಹಲಸಿನಕಾಯಿ ಹಪ್ಪಳ, ಬೀಜದ ಸೂಪು, ಸ್ಪೆಶಲ್ ಮಸಾಲಾ ಹಿಟ್ಟು ಮೊದಲಾದ ಬಾಯಿಗೆ ರುಚಿ ಕೊಡುವ ಐಟಂಗಳು ಇದ್ದವು.

ಇದೇ ವೇಳೆ ಮಂಚಾಲೆ ಸಮೀಪದ ಬೊಮ್ಮತ್ತಿಯ ಜಿ.ಮಂಜುನಾಥ್ ಅವರ ಬರೋಬ್ಬರಿ 3.2 ಕೆಜಿ ತೂಕದ ಗೋಪಾಲ ಬಕ್ಕೆ ಹಲಸು ಪ್ರದರ್ಶನಕ್ಕಿತ್ತು. ರಿಪ್ಪನ್‌ಪೇಟೆಯ ಅಂಕುರ್ ನರ್ಸರಿಯ ಅನಂತಮೂರ್ತಿ ಜವಳಿಯವರು ಮಂಕಾಳೆ ರೆಡ್, ಭದ್ರಾವತಿ ಯೆಲ್ಲೋ, ರುದ್ರಾಕ್ಷಿ ಕೆಂಪು, ರುದ್ರಾಕ್ಷಿ ಹಳದಿ, ಬ್ರೆಜಿಲ್ 365, ಸಿಂಧೂರ, ಗಮ್ ಲೆಸ್, ಸಿಂಗಾಪುರ ವಾಡಾ, ಥೈಲಾಂಡ್ ರೆಡ್ ಮೊದಲಾದ ತಳಿಯ ಹಲಸಿನ ಸಸಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಕೆಲವು ತಳಿಗಳ ಮೂಲಕ ಬೆಳೆದ ಹಲಸಿನ ತೊಳೆಗಳ ಸ್ಯಾಂಪಲ್ ಕೂಡ ಲಭ್ಯವಿತ್ತು.

ಮುಂಗರವಳ್ಳಿಯ ಪ್ರಜ್ಞಾ ತಂಡ, ಮಾಲ್ವೆಯ ಸುಪ್ರಿಯಾ ಅವರ ನಂದಿನಿ ಸ್ವಸಹಾಯ ಸಂಘ, ಖಂಡಿಕಾ ಗ್ರಾಪಂ ಮಾಜಿ ಅಧ್ಯಕ್ಷೆ ಶರಾವತಿ ಅವರ ನೇತೃತ್ವದ ಹುಳೇಗಾರಿನ ಶ್ರೀನಿಧಿ, ಶ್ರೀಮಾತಾ ಸಂಘದ ಸವಿತಾ, ಶೋಭಾ, ನಾಗಲತಾ, ಆಶಾ, ಭಾರತಿ, ಪೂರ್ಣಿಮಾ, ರಾಧಾ, ಜಯಂತಿ, ಗಡಿಕಟ್ಟೆಯ ಮಂಜುಳಾ ಪೈ ಮೊದಲಾದವರು ಹಲವು ವರ್ಷಗಳಿಂದ ಬಾಲನಂದನ ಟ್ರಸ್ಟ್ ನಡೆಸುವ ಇಂತಹ ಹಲಸಿನ ಸಂತೆಯಲ್ಲಿ ಪಾಲ್ಗೊಂಡವರು ಇಲ್ಲಿಯೂ ತಮ್ಮ ಕೌಂಟರ್ ಇಟ್ಟಿದ್ದರು.

Advertisement

ಆವಿನಹಳ್ಳಿ ಗ್ರಾಮದ ಶಶಿಧರ್ ಮತ್ತು ತಂಡದವರ ಹಲಸಿನ ಅಂಬೊಡೆ, ಹಲಸಿನ ಬೋಂಡಾ, ಮೇಲಿನ ಮನೆ ಗ್ರಾಮದ ವೃಂದಾ ರಾಮಕೃಷ್ಣ ಹಲಸಿನ ಮಸಾಲ ಹಪ್ಪಳದ ಹಿಟ್ಟು, ಗೀತಾ ಶ್ರೀನಾಥ್ ಸ್ಥಳದಲ್ಲಿಯೇ ಹಲಸಿನ ರಸಾಯನ, ಮುಟುಗುಪ್ಪೆ ಗ್ರಾಮದ ಉಷಾ ಸುಮಾ ಅವರು ಸಿದ್ಧಪಡಿಸಿದ್ದ ಹಲಸಿನ ಮಂಚೂರಿ ಜನರನ್ನು ಆಕರ್ಷಿಸಿತು.

ಬಾಲನಂದನ ಟ್ರಸ್ಟ್‌ನ ರವೀಂದ್ರ ಕಾಶಿ ಪತ್ರಿಕೆಯೊಂದಿಗೆ ಮಾತನಾಡಿ, ಹಲಸು ಬೆಳೆಸು ಅಭಿಯಾನದ ಬೆಳವಣಿಗೆ ಧನಾತ್ಮಕವಾಗಿದೆ. ಹಲಸಿನ ಗಿಡ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಿರುವುದೇ ಒಂದು ಸಾಕ್ಷಿ. ಹಿಂಜರಿತ ಬಿಟ್ಟು ತಿನಿಸು ತಯಾರಿಕೆಗೆ ಸ್ತ್ರೀಯರು ಮುಂದಾಗಿದ್ದಾರೆ. ಈಗ ಪುರುಷರೂ ಕೂಡ ಪಾಲ್ಗೊಂಡು ತಮ್ಮ ಮನೆಯವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಹುಮ್ಮಸ್ಸನ್ನು ತಂದುಕೊಟ್ಟಿರುವ ಸಂತೆ ಹೆಚ್ಚಿನ ಮೊತ್ತವನ್ನು ಕೂಡ ಗ್ರಾಮಾಂತರ ಮಹಿಳೆಯರಿಗೆ ನೇರವಾಗಿ ತಂದುಕೊಟ್ಟಿದೆ. ಇದರಿಂದ ಮೂಡಿರುವ ಆಸಕ್ತಿ ಹೊಸ ಹಲಸು ತಿನಿಸಿನ ಹುಡುಕಾಟಕ್ಕೂ ಕಾರಣವಾಗಿದೆ. ಮೌಲ್ಯವರ್ಧನೆಯ ವಿಚಾರದಲ್ಲಿ ನಿರಂತರ ಪ್ರಯತ್ನ ಸಾಗಿದೆ ಎಂದರು.

ಈ ಬಾರಿ ಹಲಸಿನ ಸಂತೆಯಲ್ಲಿ ಹಲಸಿನ ಹೊರತಾದ ವಿಭಿನ್ನ ಉತ್ಪನ್ನಗಳ ಮಾರಾಟವೂ ಕಂಡುಬಂದಿತು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ರಾ ಗ್ರಾನ್ಯುಯೆಲ್ಸ್‌ನ ಪ್ರಶಾಂತ್, ಮಲೆನಾಡಿನ ಪ್ರಯತ್ನಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಪ್ರಯೋಗಗಳು ನಡೆಯುತ್ತಿರಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಉದ್ಯಮ ಕೂಡ ಮಲೆನಾಡಿನ ವಿಶಿಷ್ಟ ರುಚಿಗಳನ್ನು ಸಂತೆ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಲಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next