Advertisement

ತುಳುವ-ಬರಿಕ ಹಲಸಿಗೀಗ ರಾಜಯೋಗ!

02:55 PM Jul 08, 2022 | Team Udayavani |

ಅಗ್ಗದ ಮಂದೆಗ್‌ ಗುಜ್ಜೆದ ಕಜಿಪು ಎಂಬುದು ತುಳುವಿನ ಒಂದು ಪ್ರಸಿದ್ಧ ಗಾದೆ. ಅಗ್ಗದ ಜನಕ್ಕೆ ಹಲಸಿನ  ಪಲ್ಯ ಎಂದು ಇದರರ್ಥ. ಹಿಂದಿನ ಕಾಲದಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಹಲಸು ಬೇಕಾಬಿಟ್ಟಿ ತಿಂದು ಎಸೆಯುವ ಅಗ್ಗದ ತಿನಿಸಾಗಿತ್ತು. ಎಲ್ಲರ ಹಿತ್ತಲಲ್ಲಿ ಯಥೇತ್ಛ ಸಿಗುತ್ತಿದ್ದ ಇದರ ಬೆಲೆ ಯಾರಿಗೂ ತಿಳಿದಿರಲಿಲ್ಲ. ಬಳಸಿ ಮಿಕ್ಕಿದ್ದನ್ನು ಇತರರಿಗೆ ಧರ್ಮಾರ್ಥ ಹಂಚುತ್ತಿದ್ದರು. ಇಲ್ಲವೇ ಕೊಚ್ಚಿ ಕೊಚ್ಚಿ ದನಕರುಗಳಿಗೆ ಹಾಕುತ್ತಿದ್ದರು. ಮಳೆಗಾಲ ಬಂತೆಂದರೆ ಒಣಗಿಸಿ ತೆಗೆದಿರಿಸಿದ ಹಲಸಿನ ವಿವಿಧ ತಿನಿಸುಗಳನ್ನು ಆಹಾರಕ್ಕೆ ಬಳಸುತ್ತಿದ್ದರು. ಏನಿದ್ದರೂ ಇದು ಬಡವರ ಆಹಾರವಾಗಿತ್ತೇ ವಿನಾ ಸಿರಿವಂತರ ಮಾನ್ಯತೆ ಪಡೆದಿರಲಿಲ್ಲ. ಆದರೆ ಈಗ ಹಲಸು ದಿಢೀರ್‌ ಎಲ್ಲರ ಗಮನ ಸೆಳೆದಿದೆ. ವಿಶ್ವ ಮಾರುಕಟ್ಟೆಗೆ ಧೀಂಗಿಡುತ್ತಿದೆ. ನಮ್ಮೂರಿನ ಹಲಸಿನ ಹಣ್ಣು ಅಮೆರಿಕಕ್ಕೆ ರಫ್ತಾಗುತ್ತಿದೆ ಎಂದರೆ ನಂಬುತ್ತೀರಾ? ಹಾಗಿದ್ದರೆ ಇದನ್ನು ರಾಜಯೋಗವೆನ್ನೋಣವೆ?

Advertisement

ಹಾಗೆ  ನೋಡಿದರೆ ಹಲಸು, ಕಲ್ಪವೃಕ್ಷಕ್ಕಿಂತ ಏನೇನೂ ಕಡಿಮೆಯದ್ದಲ್ಲ. ಬೀಜ, ಮರ, ಹೀಚು, ಹಣ್ಣು, ಸೋಳೆ, ಸಿಪ್ಪೆ, ದಿಂಡು- ಹೀಗೆ ಯಾವುದೂ ಹಲಸಿನಲ್ಲಿ ಬಿಸಾಡುವ ವಸ್ತು ಇಲ್ಲ. ತುಳುವ (ಅಂಬಲಿ) ಮತ್ತು ಬರಿಕ (ಬಕ್ಕೆ) ಎಂಬ ಎರಡು ಬಗೆಯ ಹಲಸಿನ ಹಣ್ಣು ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಸಿದ್ಧ. ತುಳುನಾಡಿನ ಜನ ತುಳುವ ಹಲಸಿನಂತೆ ಮೃದು ಮನಸ್ಸಿನವರೆಂದು ಪ್ರತೀತಿಯೇ ಇದೆ. ನಮ್ಮ ಹಿರಿಯರು ಹಲಸಿನ ಹಣ್ಣಿನಿಂದ ಹಲವು ಬಗೆಯ ಖಾದ್ಯಗಳನ್ನು ಮಾಡುತ್ತಿದ್ದರು. ಹಪ್ಪಳ, ಹಲ್ವ, ಗಟ್ಟಿ, ದೋಸೆ, ಇಡ್ಲಿ, ಗಾರಿಗೆ, ಉಪ್ಪಿನಕಾಯಿ, ಪಲ್ಯ, ಸಾರು, ಸಾಂಬಾರು, ಸಾಂಥಣಿ (ಬೇಯಿಸಿ ಒಣಗಿಸಿದ ಬೀಜ), ಉಪ್ಪಡಚ್ಚಿರ್‌ (ಉಪ್ಪಿನಲ್ಲಿ ಹಾಕಿದ ಸೋಳೆ), ಚಂಗುಲಿ, ಪಾಯಸ, ಪಾನೀಯ, ಕಡಬು – ಹೀಗೆ ಎಲ್ಲ ಋತುಗಳಿಗೂ ಸಲ್ಲುವ ಖಾದ್ಯ ವಸ್ತುಗಳನ್ನು ಹಲಸಿನಿಂದ ತಯಾರಿಸಲಾಗುತ್ತಿತ್ತು.

ಅಡ್ಡ ಪೋಯಿ ಗೆಲ್ಲ್ ಡ್‌ ಬೊಡ್ಡೆ ಕುಲ್ಲುದೆ-ಎಂಬ ತುಳು ಒಗಟಿಗೆ ಮಕ್ಕಳಾದರೂ ಥಟ್ಟನೆ ಕೊಡುವ ಉತ್ತರ ಪೆಲಕಾಯಿ. ಅಡ್ಡ ಬೆಳೆದ ಟೊಂಗೆಯಲ್ಲಿ ಕುಳಿತ ದಢೂತಿ ಆಸಾಮಿ ಹಲಸೆಂಬುದು ತುಳುವರ ಸಾಮಾನ್ಯ ಜ್ಞಾನ. ಈ ಹಲಸಿನ ಬೆಳೆ ಮಲೇಷ್ಯಾದಿಂದ ಇತರ ಕಡೆ ಹರಡಿತು ಎಂದು ಸಸ್ಯ ವಿಜ್ಞಾನಿಗಳ ಅಭಿಮತ. ಇದು ಮೊರೆಸಿಯೆ ಕುಟುಂಬಕ್ಕೆ ಸೇರಿದ್ದು, ಆರ್ಟೋ ಕಾರ್ಪಸ್‌ ಜಾತಿಯದು ಎಂದು ಹೇಳಲಾಗಿದೆ. ಈ ಹಣ್ಣಿನಲ್ಲಿ ಒಂದು ರೀತಿಯ ಮೇಣ ಇರುತ್ತದೆ. ಕಾಯಿಯ ಹೊರಭಾಗ ಮುಳ್ಳಿನಿಂದ ಕೂಡಿದ್ದು, ಹಣ್ಣಿನ ಒಳಗೆ, ತುಂಬಾ ಸೋಳೆಗಳಿದ್ದು, ಸಿಹಿಯಾಗಿರುತ್ತವೆ. ಸಿಲಿಂಡರ್‌ ಆಕಾರದ ಉದ್ದನೆಯ ಹಣ್ಣುಗಳು ಒಂದು ಕೆ.ಜಿ.ಯಿಂದ ನಲ್ವತ್ತು ಕೆ.ಜಿ.ವರೆಗೆ ತೂಕವಿರುತ್ತವೆ. ವಿಶ್ವದ ಅತೀ ದೊಡ್ಡ ಹಣ್ಣು ಹಲಸು ಆಗಿದ್ದು, ಜಗತ್ತಿನಲ್ಲಿ ಹಲಸು ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ಬಾಂಗ್ಲಾದೇಶ ಇದನ್ನು ರಾಷ್ಟ್ರೀಯ ಹಣ್ಣು ಎಂದು ಗೌರವಿಸಿದೆ. ನಮ್ಮ ದೇಶದಲ್ಲಿ 1,02,100 ಹೆಕ್ಟೇರ್‌ ಪ್ರದೇಶದಲ್ಲಿ 14.36 ಲಕ್ಷ ಟನ್‌ ಹಲಸು ಬೆಳೆಯುತ್ತದೆ. ಕರ್ನಾಟಕ ರಾಜ್ಯದಲ್ಲೇ 11,333 ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 2.6 ಟನ್‌ ಹಲಸು ಬೆಳೆ ಬರುತ್ತದೆ.

ಹಸಿದು ಹಲಸು ತಿನ್ನು :

ಹಲಸಿನಲ್ಲಿ ಪಿಷ್ಟ, ಸಕ್ಕರೆಗಳು ಹೆಚ್ಚಿನ ಪ್ರಮಾಣ ದಲ್ಲಿದ್ದು ಎ ಜೀವಸತ್ವ ಹೇರಳವಾಗಿದೆ. ಬೀಜದಲ್ಲಿ ಸಾರಜನಕ, ಕೊಬ್ಬು, ಕಾಬೋìಹೈಡ್ರೇಟ್‌ ಮತ್ತು ಖನಿಜಾಂಶ ಗಳಿವೆ. ಆದ್ದರಿಂದ ಇದು ಪೌಷ್ಠಿಕ ಆಹಾರ. ಈ ಕಾರಣದಿಂದಲೇ ಹಸಿದು ಹಲಸು ತಿನ್ನು ಎಂಬ ಗಾದೆ ಹುಟ್ಟಿಕೊಂಡಿದೆ. ಹಲಸಿನ ಹಣ್ಣಿನಲ್ಲಿ ಸೋಳೆಗಳು, ಬೀಜಗಳು ಮತ್ತು ದಿಂಡು ಎಂಬ ಮೂರು ಭಾಗಗಳಿರುತ್ತವೆ. ಹಣ್ಣಿನ ಸೋಳೆಗಳನ್ನು ಬಿಡಿಸಿ ತಿನ್ನುವುದು ಸಾಮಾನ್ಯ ವಾಡಿಕೆ. ಬೀಜ ಮತ್ತು ದಿಂಡುಗಳನ್ನು ಕೆಲವೆಡೆ ಪಲ್ಯಕ್ಕಾಗಿ ಬಳಸುವು ದುಂಟು; ಇಲ್ಲವೇ ಜಾನುವಾರುಗಳಿಗೆ ತಿನಿಸಾಗಿ ನೀಡುವುದೂ ಇದೆ. ಹಲಸಿನ ಮರದ ಎಲ್ಲ ಭಾಗಗಳೂ ಔಷಧದ ಗುಣಗಳನ್ನು ಹೊಂದಿದ್ದು, ಟಾನಿಕ್‌ ಅಂಶವೂ ಇದೆ. ಹಲಸು ತಿನ್ನುವುದರಿಂದ ಮದ್ಯಪಾನದಿಂದ ಶರೀರದಲ್ಲಿ ಆಗುವ ಹಾನಿಯನ್ನು ತಡೆಗಟ್ಟಬಹುದು.

Advertisement

ಹಲಸಿನ ಮರ ಬಹೂಪಯೋಗಿಯಾಗಿದ್ದು ಪೀಠೊಪಕರಣಗಳ ತಯಾರಿಕೆ, ರಸ್ತೆ ಬದಿಯ ನೆರಳಾಗಿ, ದನಕರುಗಳಿಗೆ ಮೇವಾಗಿ, ಗಾಳಿ ತಡೆಗೆ – ಹೀಗೆ ಹಲವು ಆಯಾಮಗಳಲ್ಲಿ ಬಳಸಲಾಗುತ್ತದೆ. ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪೂಜೆ, ಹೋಮ-ಹವನಗಳಲ್ಲಿ ಹಲಸಿನ ಎಲೆ ಮತ್ತು ಮರದ ತುಂಡು (ಚೆಕ್ಕೆ)ಗಳನ್ನು ಉಪಯೋಗಿಸುತ್ತಾರೆ. ಹಲಸಿನಲ್ಲಿ ತುಳುವ, ಬರಿಕ ಮಾತ್ರವಲ್ಲದೆ ಸಿಂಗಾಪುರ ಹಲಸು, ಚಂದ್ರ ಹಲಸು, ರುದ್ರಾಕ್ಷಿ, ಜಾಣಗೆರೆ, ಲಾಲ್‌ಬಾಗ್‌, ಮಟ್ಟಂ, ಮಧುರ, ವಿಶು ಹಲಸು ಮೊದಲಾದ ಸುಮಾರು ಮೂವತ್ತು ಬಗೆಯ ತಳಿಗಳಿವೆ. ಕಸಿ ಮಾಡಿದ ಉತ್ತಮ ಜಾತಿಯ ಗಿಡಗಳು ಬೇಗನೆ ಫ‌ಲಕೊಡುತ್ತವೆ. ಈಗ ಮೇಣವಿಲ್ಲದ (ಗಮ್‌ಲೆಸ್‌) ಹಲಸಿನ ಹಣ್ಣು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಜಂಕ್‌ಫ‌ುಡ್‌, ಫಾಸ್ಟ್‌ಫ‌ುಡ್‌ ಸೇವನೆಯ ಚಟ ಬೆಳೆಸಿಕೊಂಡ ನಗರವಾಸಿಗಳಿಗೂ ಈಗ ಹಲಸಿನ ವಿವಿಧ ಬಗೆಯ ಖಾದ್ಯಗಳ ಪರಿಚಯವಾಗುತ್ತಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಾವಯವ ಉತ್ಪಾದಕರ ಬಳಗ ಮತ್ತಿತರ ಸಂಘಟನೆಗಳು ಪ್ರತೀ ವರ್ಷ ಆಚರಿಸುವ ಆಟಿದ ಕೂಟಗಳಲ್ಲಿ ಮಹಿಳೆ ಯರು ಉತ್ಸಾಹದಿಂದ ಪಾಲ್ಗೊಂಡು ಹಲಸಿನ ಹಲವು ತಿಂಡಿ-ತಿನಿಸುಗಳನ್ನು ಮಾಡಿ ಬಡಿಸುತ್ತಾರೆ. ಇದೀಗ ಕರಾವಳಿಯ ಉಭಯ ಜಿಲ್ಲೆಗಳ ಅಲ್ಲಲ್ಲಿ  ಹಲಸಿನ ಹಬ್ಬಗಳನ್ನು ನಿರಂತರವಾಗಿ ನಡೆಸುವುದರ ಮೂಲಕ ಹಲಸಿನ ಹಣ್ಣಿನ ವಿರಾಟ್‌ ದರ್ಶನವನ್ನು ಮಾಡಿಸಲಾಗುತ್ತಿದೆ. ಜನರಿಗೆ ಹಲಸಿನ ವಿವಿಧ ರೀತಿಯ ಖಾದ್ಯಗಳನ್ನೂ ಇಲ್ಲಿ ಪರಿ ಚಯಿಸ ಲಾಗುತ್ತಿದೆ. ವಿಶೇಷ ತಳಿಗಳನ್ನು ಕೂಡ ಕೆಲವು ಕಡೆ ವಿತರಿಸಲಾಗುತ್ತಿದೆ. ಮತ್ತೂಂದೆಡೆ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯಗಳೂ ಈ ದಿಸೆಯಲ್ಲಿ ಗಂಭೀರ ಸಂಶೋಧನೆ ನಡೆಸಿವೆ.

ಹಲಸಿನಿಂದ ಜ್ಯೂಸ್‌, ಬರ್ಗರ್‌, ವೈನ್‌, ಜಾಮ್‌, ಫೇಡಾ, ಚಾಕಲೇಟ್‌, ಕರಿ ಕಡುಬು, ಹೋಳಿಗೆ, ಚಕ್ಕುಲಿ, ಅಪ್ಪ, ಪಕೋಡ, ಕ್ಯಾಂಡಿ, ಗುಜ್ಜೆ ಉಪ್ಪಿನಕಾಯಿ, ಕರಿದ ಬೀಜ, ಮಸಾಲೆ, ಐಸ್‌ಕ್ರೀಂ, ಪೌಡರ್‌, ಸ್ಕ್ವಾಶ್‌ ಇತ್ಯಾದಿ ಆಧುನಿಕ ಉತ್ಪನಗಳು ಸಾಧ್ಯ ಎಂಬುದು ಹಲಸಿನ ಮೇಳಗಳಿಂದ ಸಾಬೀತಾಗಿದೆ. ಮಾಲ್‌ಗ‌ಳಲ್ಲಿ ಮಾರಾಟವಾಗಲು ಆರಂಭವಾದ ಬಳಿಕ ಹಲಸಿಗೀಗ ರಾಜಯೋಗ ಪ್ರಾಪ್ತವಾಗಿದೆ.

ಅಮೆರಿಕ ಒಂದರಲ್ಲೇ ಸುಮಾರು 25 ಟನ್‌ ಹಲಸಿಗೆ ಬೇಡಿಕೆಯಿದೆ ಎಂದ ಬಳಿಕ ಬೇರೆ ಬೇರೆ ದೇಶಗಳಲ್ಲಿ ಬೇಡಿಕೆಗೆ ತಕ್ಕಂತೆ ರಫ್ತು ಮಾಡುವ ವಿಪುಲ ಅವಕಾಶ ಹಲಸು ಬೆಳೆಗಾರರ ಮುಂದಿದೆ ಎನ್ನ ಬಹುದು. ನಮ್ಮ ಕೃಷಿಕರು ಇದನ್ನು ಮನಗಾಣಬೇಕು. ಸರಕಾರ ಹಲಸಿಗೆ ತೋಟಗಾರಿಕಾ ಬೆಳೆಯ ಮಾನ್ಯತೆ ನೀಡಬೇಕು.

-ಭಾಸ್ಕರ ರೈ, ಕುಕ್ಕುವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next