ಜಮ್ಮು : ಜಮ್ಮು ಮತ್ತು ಕಾಶ್ಮೀರದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪರಸ್ಪರ ಮೈತ್ರಿ ಸಾಧಿಸಿವೆ.
ಆ ಪ್ರಕಾರ ಕಾಂಗ್ರೆಸ್‌ಗೆ 2 ಲೋಕಸಭಾ ಸ್ಥಾನ, ಎನ್‌ಸಿ ಗೆ 1 ಸ್ಥಾನ ಎಂದು ತೀರ್ಮಾನವಾಗಿದೆ. ಉಳಿದ ಮೂರು ಲೋಕಸಭಾ ಸೀಟುಗಳಲ್ಲಿ ಉಭಯ ಪಕ್ಷಗಳು ಮೈತ್ರಿ ಸ್ಪರ್ಧೆ (friendly contest) ನಡೆಸಲಿವೆ.
ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಮತ್ತು ಎನ್ ಸಿ ಪೋಷಕ ಫಾರೂಕ್ ಅಬ್ದುಲ್ಲ ಅವರಿಂದು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ತಮ್ಮ ಪಕ್ಷಗಳ ಒಳಗಿನ ಮೈತ್ರಿ ಸೂತ್ರವನ್ನು ಬಹಿರಂಗಪಡಿಸಿದರು.
ಕಾಂಗ್ರೆಸ್ ಪಕ್ಷ ಜಮ್ಮು ಮತ್ತು ಉಧಾಂಪುರ ಸೀಟುಗಳಲ್ಲಿ ಸ್ಪರ್ಧಿಸಲಿದೆ; ನ್ಯಾಶನಲ್ ಕಾನ್ಫರೆನ್ಸ್ ಶ್ರೀನಗರದಿಂದ ಸ್ಪರ್ಧಿಸಲಿದೆ.
ಉಳಿದ ಮೂರು ಲೋಕಸಭಾ ಸ್ಥಾನಗಳಾದ ಬಾರಾಮುಲ್ಲಾ, ಅನಂತನಾಗ್ ಮತ್ತು ಲಡ್ಡಾಕ್ ಸೀಟುಗಳಲ್ಲಿ ಉಭಯ ಪಕ್ಷಗಳ ನಡುವೆ ಮೈತ್ರಿ ಸ್ಪರ್ಧೆ (friendly contest) ಏರ್ಪಡಲಿದೆ ಎಂದು ಅಬ್ದುಲ್ಲ ಹೇಳಿದರು. “ನಾನು ಶ್ರೀನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವೆ’ ಎಂದವರು ಪ್ರಕಟಿಸಿದರು.
ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗುಲಾಂ ಅಹ್ಮದ್ ಮೀರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ ಉಪಸ್ಥಿತರಿದ್ದರು. ಜಮ್ಮು ಕಾಶ್ಮೀರ ಆರು ಮಂದಿಯನ್ನು ಲೋಕಸಭೆ ಕಳುಹಿಸುತ್ತದೆ.