ಜಮ್ಮು-ಕಾಶ್ಮೀರ: ತಿಲಕ ಮತ್ತು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಥಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪರಸ್ಪರ ಅರವತ್ತು ಪ್ರಕರಣ ದಾಖಲಿಸಿದ ವಿಚ್ಛೇದಿತ ದಂಪತಿ; ಸುಪ್ರೀಂಕೋರ್ಟ್‌ಗೆ ಅಚ್ಚರಿ
ಖದುರಿಯನ್ ಪಂಚಾಯತ್ ಡ್ರಮ್ಮಾನ್ ನ ಸರ್ಕಾರಿ ಶಾಲೆಯ ಶಿಕ್ಷಕ ನಿಸಾರ್ ಅಹ್ಮದ್ ಎಂಬಾತ ಹಣೆಗೆ ತಿಲಕ ಇಟ್ಟುಕೊಂಡಿದ್ದ ಹಾಗೂ ಹಿಜಾಬ್ ಧರಿಸಿದ್ದ 4ನೇ ತರಗತಿಯ ವಿದ್ಯಾರ್ಥಿನಿಯರಿಗೆ ಥಳಿಸಿರುವುದಾಗಿ ವರದಿ ವಿವರಿಸಿದೆ.
ಶಿಕ್ಷಕನ ವಿರುದ್ಧ ದೂರು ದಾಖಲಾಗಿದ್ದು, ನಿಸಾರ್ ಅಹ್ಮದ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರನ್ನು ಥಳಿಸಿರುವ ಹಿಂದೆ ಈವರೆಗೆ ಯಾವುದೇ ಕೋಮುದ್ವೇಷದ ಉದ್ದೇಶ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಜಂಟಿಯಾಗಿ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದ ಆಧಾರದ ಮೇಲೆ ರಜೌರಿ ಜಿಲ್ಲಾಡಳಿತ ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದ್ದು, ಶಿಕ್ಷಕನನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದೆ.
ಮಕ್ಕಳಿಗೆ ಹೊಡೆದಿರುವುದು ನಿಜವೇ? ಮತ್ತು ಮಕ್ಕಳಿಗೆ ಹೊಡೆಯಲು ನಿಜವಾದ ಕಾರಣವೇನಾದರು ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋಟ್ರಾಂಕ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ರಜೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ನಮಗೆ ನ್ಯಾಯ ಬೇಕು. ಇಂದು ತಿಲಕ ಹಾಕಿಕೊಂಡಿದ್ದಕ್ಕೆ ನನ್ನ ಮಗಳಿಗೆ ಹೊಡೆದಿದ್ದಾರೆ. ನಾಳೆ ಇನ್ನೊಬ್ಬರು ನೀನ್ಯಾಕೆ ಹಿಜಾಬ್ ಹಾಕಿಕೊಂಡು ಬಂದಿದ್ದೀಯಾ ಎಂದು ಪ್ರಶ್ನಿಸಬಹುದು. ಇದರಿಂದ ಕೋಮು ಸಾಮರಸ್ಯ ಹದಗೆಡುತ್ತದೆ. ಹೀಗಾಗಿ ನಾವು ಜಮ್ಮು-ಕಾಶ್ಮೀರವನ್ನು ಉತ್ತರಪ್ರದೇಶ, ಬಿಹಾರವನ್ನಾಗಿಸಲು ಅವಕಾಶ ನೀಡುವುದಿಲ್ಲ ಎಂದು ಬಾಲಕಿಯ ತಂದೆ ಅಂಗ್ರೇಝ್ ಸಿಂಗ್ ತಿಳಿಸಿದ್ದಾರೆ.