Advertisement
ಪಕ್ಕದ ಮನೆಯ ಬಸಪ್ಪನಂತೂ, “ಅಯ್ಯೋ ಮೊನ್ನೆ ಮದುವೆ ವಾರ್ಷಿಕೋತ್ಸವಕ್ಕೆ ಅವಳು ಚಿನ್ನ ಕೇಳಿದ್ದು ಕೊಡಿಸಲಾಗದಕ್ಕೆ ದೇವರು ನನಗೆ ನೀಡಿದ ಶಾಪವೇನೋ ಎಂಬಂತೆ, ಈರುಳ್ಳಿಗೆ ಬಂಗಾರದ ಬೆಲೆಯಷ್ಟು ಏರಿಸುತ್ತಿರುವೆಯಲ್ಲ ಭಗವಂತ’ ಎಂದು ಆರತಿ ಎತ್ತುತ್ತ ದೇವರ ಬಳಿ ಸಣ್ಣ ಸ್ವರದಲ್ಲಿ ಬೇಡಿದ್ದ.
Related Articles
Advertisement
ಈರುಳ್ಳಿಯ ಬೆಲೆ ಜಾಸ್ತಿಯಾಗಿರುವುದು ತರಕಾರಿ ತರಲು ಹೋಗುವ ಹೆಂಗಸರ ಸುದ್ದಿಯಲ್ಲವೇ? ಪಾಪ ಅವರಿಗೆಲ್ಲಿಂದ ತಿಳಿದಿರಬೇಕು. ಕೆ.ಜಿ.ಗೆ 120 ರೂಪಾಯಿ ಎಂದಕೂಡಲೇ, ಸರಿ ಇನ್ನೊಂದು ತಿಂಗಳು ಈರುಳ್ಳಿ ಉಸಾಬರಿ ಬೇಡ ಎಂದು.
ಈರುಳ್ಳಿ ರಹಿತ ಅಡುಗೆ ಮಾಡಬೇಕಾದರೆ ಅಮ್ಮನ ಬಳಿ ಮಾತನಾಡಬೇಕು. ಸೋಮವಾರ ವ್ರತ ಮಾಡುವಾಗ ಏನೆಲ್ಲಾ ಅಡುಗೆ ಮಾಡಿದಳು ಎಂದು ತಿಳಿದುಕೊಳ್ಳಬೇಕು. ಈರುಳ್ಳಿ, ಬೆಳ್ಳುಳ್ಳಿ ಕಾಣದೆ ಅವಳು ಮಾಡಿದ ರೆಸಿಪಿಗಳನ್ನು ದಿನಾಲೂ ಫೋನಾಯಿಸಿ ಬರೆದುಕೊಂಡು ಅದನ್ನೇ ಮಾಡತೊಡಗಿದೆ. “ಏನಿದು ದೇವಸ್ಥಾನದ ಅಡುಗೆ ರೆಸಿಪಿ ತರ ಇದೆಯಲ್ಲ’ ಎಂದು ಒಮ್ಮೆ ಅವರು ಕೇಳಿದರೆ, ಮತ್ತೂಂದು ದಿನ ಅಮ್ಮನ ಅಡುಗೆಯನ್ನು ಅನುಸರಿಸಲು ಶುರುಮಾಡಿದ್ದು ಕಂಡು ಮನೆಯವರು “ಏನೇ ಇದು ಮನೆಯೋ, ಪ್ರಯೋಗಶಾಲೆಯೋ’ ಎಂದು ಕೇಳಬೇಕೆ?
ಇಷ್ಟೆಲ್ಲಾ ಪ್ರಯೋಗ ಮಾಡುವಾಗ ಮನೆಯಲ್ಲಿ ಈರುಳ್ಳಿ ಮುಗಿದೇ ಹೋಗಿದೆಯೇನೋ ಎಂದುಕೊಂಡು ಮನೆಯವರು ಕಡಿಮೆ ಬೆಲೆಗೆ ಈರುಳ್ಳಿ ಎಲ್ಲಾದರೂ ಸಿಗುತ್ತಾ ಎಂದು ನೋಡಲು ಶುರುಮಾಡಿದರು. ಕಚೇರಿಯಲ್ಲಿ ಕೆಲಸ ಮಾಡುವ ಅವರ ಸ್ನೇಹಿತರು, “ಊರಿಂದ ನಾನು ಈರುಳ್ಳಿ ತಂದೆ’ ಎಂದು ಯಾವೊದೋ ದೊಡ್ಡ ಸಾಹಸ ಮಾಡಿದ ಶೈಲಿಯಲ್ಲಿ ಹೇಳುವುದ ಕಂಡು “ನನಗೂ ಬೇಕು’ ಎಂದು ಹೇಳಿದೆ.
ಊರಿಂದ ಅಪ್ಪಅಮ್ಮ ಮಗಳ ಮನೆಗೆ ಬರುವಾಗ ಹಪ್ಪಳ, ಸಂಡಿಗೆ, ಇತ್ಯಾದಿ ತರುವುದು ರೂಢಿಯಲ್ಲಿತ್ತು, ಈಗ ಈರುಳ್ಳಿ ತರುವ ರೂಢಿ ಶುರುವಾಯಿತು. ಮನೆಗೆ ಬರುವ ನೆಂಟರಿಗೆ ಸಿಹಿತರುವ ಬದಲು “ಒಂದು ಕೆ.ಜಿ. ಈರುಳ್ಳಿ ತನ್ನಿ’ ಎಂದು ಹೇಳಬಹುದೇನೋ. ಮನೆಯಲ್ಲಿ ಬುಟ್ಟಿಯಲ್ಲಿರುವ ನಾಲ್ಕೈದು ಈರುಳ್ಳಿ ಕಂಡು, “ಇದೇನೇ ಇಷ್ಟಾದ್ರೂ ಇದೆಯಲ್ಲೇ ಇವತ್ತಾದ್ರೂ ಈರುಳ್ಳಿ ಹಾಕಿ ಅಡುಗೆ ಮಾಡೇ. ತಿನ್ನದೇ ನಾಲಿಗೆಯೆಲ್ಲ ಕೆಟ್ಟೋಗಿದೆ’ ಎಂದರು. ಔಷಧಿಗಾದ್ರೂ ಒಂದೆರಡು ಸಾಮಾನು ಇಟ್ಟುಕೋಬೇಕು ಖಾಲಿ ಮಾಡಿ ಬಿಡಬಾರದು ಎಂಬುದು ಅಮ್ಮ ಹೇಳಿದ ಪಾಲಿಸಿ. ಗಂಡನ ಕೋರಿಕೆ ಮನ್ನಿಸಿ ಒಂದೆರಡು ಈರುಳ್ಳಿ ಹಾಕಿ ಅಡುಗೆ ಮಾಡದೇ ವಿಧಿಯಿರಲಿಲ್ಲ.
ಮೈಸೂರುಪಾಕಿನಲ್ಲಿ ಮೈಸೂರು ಇರುತ್ತಾ ಎಂದು ಸಮಜಾಯಿಷಿ ನೀಡುತ್ತ, ಈರುಳ್ಳಿ ಇಲ್ಲದ ಈರುಳ್ಳಿ ದೋಸೆ ಮಾಡಿ ಬಡಿಸಿದೆ. ಮೊನ್ನೆ ಒಂದು ಕಡೆ, ಮದುವೆ ಖರ್ಚನ್ನು ಹುಡುಗನ ಮನೆಯವರೇ ಭರಿಸಿ, ಈರುಳ್ಳಿಯ ಖರ್ಚನ್ನು ಮಾತ್ರ ಹುಡುಗಿ ಮನೆಯವರು ನೋಡಿಕೋಬೇಕು ಎಂದು ಷರತ್ತು ಹಾಕಿದರಂತೆ.
ಹೀಗೆ ನೂರಾರೂ ಈರುಳ್ಳಿ ನಗೆಹನಿಗಳು ಎಲ್ಲರ ಬಾಯಲ್ಲೂ ಓಡಾಡುತ್ತ ಈರುಳ್ಳಿಯ ಪ್ರಚಾರ ಜೋರಾಗೆ ನಡೆಯುತ್ತಿದೆ. ಬೆಲೆ ಜಾಸ್ತಿಯಿದ್ದು, ಅಡುಗೆಯಿಂದ ದೂರವಿದ್ದರೂ ಎಲ್ಲರ ಬಾಯಲ್ಲೂ ನೀರುಣಿಸುತ್ತ, ಎಲ್ಲರ ಮನದಲ್ಲೂ, ಕನಸಲ್ಲೂ ಬರುತ್ತಿರುವ ಇಂದಿನ ತರಕಾರಿ ರಾಜ, ಈರುಳ್ಳಿ.
ಸಾವಿತ್ರಿ ಶ್ಯಾನುಭಾಗ್