Advertisement
ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಮೊದಲ ಸಲ ಏಕದಿನ ಸರಣಿ ವಶಪಡಿಸಿಕೊಂಡ ಸಂಭ್ರಮದಲ್ಲಿರುವ ಭಾರತ, ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದು. ಹೀಗಾಗಿ ಕೊಹ್ಲಿ ಪಡೆ ಇರಿಸುವ ಪ್ರತಿಯೊಂದು ಹೆಜ್ಜೆಯನ್ನೂ ಅಭಿಮಾನಿಗಳು ತೀವ್ರ ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ. ಬಿಸಿಸಿಐ, ಆಯ್ಕೆ ಸಮಿತಿ ಕೂಡ ಕ್ರಿಕೆಟಿಗರ ನಿರ್ವಹಣೆ ಮೇಲೆ ಹದ್ದುಗಣ್ಣಿರಿಸಿದೆ. ಆದರೆ ಆಸ್ಟ್ರೇಲಿಯದಲ್ಲಿ ಸರಣಿ ಗೆದ್ದ ಮಾತ್ರಕ್ಕೆ ವಿಶ್ವಕಪ್‌ಗೆ ಭಾರತದ ಪರಿಪೂರ್ಣ ತಂಡವೊಂದು ರೂಪುಗೊಂಡಿತು ಎಂದರ್ಥವಲ್ಲ. ಗೆಲುವಿನೊಂದಿಗೆ ವೈಫಲ್ಯಗಳು ಮುಚ್ಚಿಹೋಗುವ ಅಪಾಯ ಇದ್ದೇ ಇರುತ್ತದೆ.
ಭಾರತದ ಮುಂದೆ ಆಸ್ಟ್ರೇಲಿಯಕ್ಕಿಂತಲೂ ಹೆಚ್ಚು ಸವಾಲಿನದ್ದಾದ ನ್ಯೂಜಿಲ್ಯಾಂಡ್ ಪ್ರವಾಸ ಕಾದು ನಿಂತಿದೆ. ಇದೇ ವಾರದಿಂದ ಇಲ್ಲಿ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಾಗುವುದು. ಇಲ್ಲಿ ಟೀಮ್ ಇಂಡಿಯಾದ ಸಾಧನೆ-ವೈಫಲ್ಯಗಳ ಪರಿಪೂರ್ಣ ಚಿತ್ರಣ ಲಭಿಸಲಿದೆ. ಕಾರಣ, ನ್ಯೂಜಿಲ್ಯಾಂಡ್ ತಂಡ ಆಸ್ಟ್ರೇಲಿಯಕ್ಕಿಂತ ಹೆಚ್ಚು ಬಲಿಷ್ಠ. ಹೆಚ್ಚು ವೈವಿಧ್ಯಮಯ. ಅಲ್ಲಿನ ವಾತಾವರಣ, ಟ್ರ್ಯಾಕ್‌ಗಳೆಲ್ಲವೂ ವಿಭಿನ್ನ. ಹಾಗೆಯೇ ನ್ಯೂಜಿಲ್ಯಾಂಡ್ ತವರಿನಲ್ಲಿ ಯಾವತ್ತೂ ಬಲಿಷ್ಠ. ಇಂಥ ಸ್ಥಿತಿಯಲ್ಲೂ ಕೇನ್ ವಿಲಿಯಮ್ಸನ್ ಪಡೆಯನ್ನು ಮಣಿಸಿದ್ದೇ ಆದರೆ ಭಾರತದ ವಿಶ್ವಕಪ್ ತಂಡ ಬಹುತೇಕ ಪೂರ್ಣಗೊಂಡಂತೆ! ಇವರ ಆಯ್ಕೆ ನಿರೀಕ್ಷಿತ
ಯಾವುದೇ ಪಂದ್ಯದ, ಸರಣಿಯ ಫಲಿತಾಂಶ ಹೇಗೇ ಬಂದರೂ ವಿಶ್ವಕಪ್‌ನಂಥ ಪ್ರತಿಷ್ಠಿತ ಪಂದ್ಯಾವಳಿಗೆ ಒಂದಿಷ್ಟು ಮಂದಿ ಆಟಗಾರರು ತನ್ನಿಂತಾನಾಗಿ ಆಯ್ಕೆಯಾಗುತ್ತಾರೆ. ಭಾರತವನ್ನೇ ಉದಾಹರಿಸುವುದಾದರೆ ಕೊಹ್ಲಿ, ಧವನ್, ರೋಹಿತ್, ಧೋನಿ, ಜಡೇಜ, ಭುವನೇಶ್ವರ್, ಬುಮ್ರಾ, ಶಮಿ, ಕುಲದೀಪ್, ಚಾಹಲ್ ಇವರಲ್ಲಿ ಪ್ರಮುಖರು. ರಾಹುಲ್, ಪಾಂಡ್ಯ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೇ ಇದ್ದರೆ ಈ ಸಾಲಿನಲ್ಲಿ ಇರುತ್ತಿದ್ದರು. ಆದರೂ ವಿಶ್ವಕಪ್‌ಗೆ ಇವರಿಬ್ಬರ ಅಗತ್ಯ ಭಾರತ ತಂಡಕ್ಕಿದೆ. ಅಲ್ಲಿಗೆ 12 ಮಂದಿ ಲಭಿಸಿದಂತಾಯಿತು.
Related Articles
ಉಳಿದ 3-4 ಸ್ಥಾನಗಳಿಗೆ ಪೈಪೋಟಿ ಇದೆ. ಕಾರ್ತಿಕ್ ಮತ್ತು ಪಂತ್ ರೇಸ್‌ನಲ್ಲಿದ್ದಾರೆ. ಹಾಗೆಯೇ ರಾಯುಡು-ಗಿಲ್ ನಡುವೆ ಪೈಪೋಟಿ ಏರ್ಪಡುವುದು ಸಹಜ. ಭಾರತ 4ನೇ ವೇಗಿಯ ಆಯ್ಕೆಯಲ್ಲಿ ಎಡವುತ್ತಿದೆ. ಇಂಗ್ಲೆಂಡಿನ ಟ್ರ್ಯಾಕ್ ಸ್ವಿಂಗ್ ಮತ್ತು ಸೀಮ್ ಬೌಲಿಂಗಿಗೆ ಹೆಚ್ಚು ಪ್ರಶಸ್ತ. 1983ರ ವಿಶ್ವಕಪ್ ಗೆಲುವಿನ ವೇಳೆ ಇಲ್ಲಿ ಬಿನ್ನಿ, ಮೊಹಿಂದರ್, ಸಂಧು, ಮದನ್, ಕಪಿಲ್ ಅವರ ದಾಳಿ ಎಷ್ಟೊಂದು ಹರಿತವಾಗಿತ್ತು ಎಂಬುದನ್ನು ಒಮ್ಮೆ ಅವಲೋಕಿಸಿದರೆ ಒಳ್ಳೆಯದು. ಆದ್ದರಿಂದ ಖಲೀಲ್ ಅಹ್ಮದ್, ಸಿರಾಜ್ ಬದಲು ಇನ್ನಷ್ಟು ಪರಿಣಾಮಕಾರಿ ವೇಗಿಯ ಅಗತ್ಯ ಭಾರತಕ್ಕಿದೆ. ಈ ಸಮಸ್ಯೆ ನ್ಯೂಜಿಲ್ಯಾಂಡಿನಲ್ಲಿ ಪರಿಹಾರಗೊಂಡರೆ ಒಳ್ಳೆಯದು.
Advertisement