ಬೆಂಗಳೂರು: ಚುನಾವಣೆ ಎಂದರೆ ರಾಜಕೀಯ ಪಕ್ಷಗಳಿಗೆ “ಸುಗ್ಗಿಯ’ ಕಾಲ. ಪಕ್ಷ ಕಟ್ಟುವುದು ಮತ್ತು ಚುನಾವಣೆಗೆ ಸ್ಪರ್ಧಿಸುವುದು ಕೆಲವರಿಗೆ “ಖಯಾಲಿ’. ಹಾಗಾಗಿ, ರಾಜ್ಯದಲ್ಲಿ ಚುನಾವಣೆಯಿಂದ ಚುನಾವಣೆಗೆ ರಾಜಕೀಯ ಪಕ್ಷಗಳ ಸಂಖ್ಯೆ ಏರುತ್ತಲೇ ಇದೆ.
ಈ ಬಾರಿಯ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಣದಲ್ಲಿರುವ ರಾಜಕೀಯ ಪಕ್ಷಗಳ ಸಂಖ್ಯೆ 50ರ ಗಡಿ ದಾಟಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 38 ರಾಜಕೀಯ ಪಕ್ಷಗಳು ಕಣದಲ್ಲಿದ್ದವು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಪಕ್ಷಗಳ ಸಂಖ್ಯೆ 56ಕ್ಕೂ ಹೆಚ್ಚು. ಇದೇ ವೇಳೆ, ಕಳೆದ ವಿಧಾನಸಭಾ ಚುನಾವಣೆ ಮುಗಿದ ಬಳಿಕ 2018ರ ಜೂನ್‌ನಿಂದ 2019ರ ಮಾರ್ಚ್‌ವರೆಗೆ ರಾಜ್ಯದಲ್ಲಿ 10ಕ್ಕೂ ಹೆಚ್ಚು ಹೊಸ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ.
ರಾಷ್ಟ್ರೀಯ ಪಕ್ಷಗಳು ಹಾಗೂ ಒಂದೆರಡು ರಾಜ್ಯಮಟ್ಟದ ಪಕ್ಷಗಳನ್ನು ಹೊರತುಪಡಿಸಿ ಬೇರೆ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವುದು ಅಷ್ಟಕ್ಕಷ್ಟೇ. ಬಹುತೇಕರಿಗೆ ಠೇವಣಿಯೂ ಸಿಗುವುದಿಲ್ಲ. ಆದರೆ, ರಾಜಕೀಯ ಪಕ್ಷದ ಅಸ್ತಿತ್ವದ “ನವೀಕರಣ’ ಎಂಬಂತೆ ಹತ್ತಾರು ಪಕ್ಷಗಳು ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳುತ್ತವೆ. ಚುನಾವಣೆ ಬರುವ ಮೊದಲು ಇಡೀ ಐದು ವರ್ಷ ಈ ಪಕ್ಷಗಳು ಎಲ್ಲಿರುತ್ತವೆ?, ಏನು ಮಾಡುತ್ತವೆ? ಎಂಬುದೇ ಗೊತ್ತಾಗುವುದಿಲ್ಲ. ಆದರೆ, ಚುನಾವಣೆ ಬಂತೆಂದರೆ ಮೈ ಕೊಡವಿ ಮೇಲೇಳುತ್ತವೆ.
2014ರ ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ 6 ರಾಷ್ಟ್ರೀಯ ಪಕ್ಷಗಳು, ರಾಜ್ಯಮಟ್ಟದ ಜೆಡಿಎಸ್ ಪಕ್ಷ, ಅನ್ಯ ರಾಜ್ಯಗಳ 5 ರಾಜ್ಯಮಟ್ಟದ ಪಕ್ಷಗಳು 26 ನೋಂದಾಯಿತ, ಮಾನ್ಯತೆ ಹೊಂದಿಲ್ಲದ ಪಕ್ಷಗಳು ಸೇರಿ ಒಟ್ಟು 38 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು. ಈ ಪೈಕಿ ರಾಜ್ಯದಲ್ಲಿ ನೋಂದಣಿಯಾಗಿರುವ ಕನ್ನಡ ಚಳವಳಿ ವಾಟಾಳ್ ಪಕ್ಷ, ಕರುನಾಡು ಪಾರ್ಟಿ, ರಾಣಿ ಚನ್ನಮ್ಮ ಪಾರ್ಟಿ, ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷಗಳು ಪ್ರಮುಖವಾಗಿದ್ದವು.
2019ರ ಲೋಕಸಭಾ ಚುನಾವಣೆ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಎನ್‌ಸಿಪಿ, ಟಿಎಂಸಿ, ಸಿಪಿಐ ಹಾಗೂ ಸಿಪಿಎಂ, ರಾಜ್ಯಮಟ್ಟದ ಜೆಡಿಎಸ್, ಅನ್ಯ ರಾಜ್ಯದಲ್ಲಿ ಮಾನ್ಯತೆ ಪಡೆದ ಹಾಗೂ ಕರ್ನಾಟಕದಲ್ಲಿ ನೋಂದಣಿಯಾಗಿರುವ ಪಕ್ಷಗಳು ಸೇರಿ ಸುಮಾರು 56ಕ್ಕೂ ಹೆಚ್ಚು ಪಕ್ಷಗಳು ಚುನಾವಣಾ ಕಣದಲ್ಲಿವೆ. ಇದರಲ್ಲಿ ಮಹಾರಾಷ್ಟ್ರದ ಶಿವಸೇನೆ, ಕರ್ನಾಟಕದಲ್ಲಿ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷಗಳು ಪ್ರಮುಖವಾಗಿವೆ. ಉತ್ತಮ ಪ್ರಜಾಕೀಯ ಪಕ್ಷ ಹಾಗೂ ಕರ್ನಾಟಕ ಕಾರ್ಮಿಕ ಪಕ್ಷ ಹೆಚ್ಚು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಉಳಿದಂತೆ ಬಿಎಸ್‌ಪಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ.
10 ಹೊಸ ಪಕ್ಷಗಳು: ವಿಧಾನಸಭಾ ಚುನಾವಣೆ ನಡೆದ ಬಳಿಕ 2018ರ ಜೂನ್ ತಿಂಗಳಿಂದ 2019ರ ಮಾರ್ಚ್‌ವರೆಗೆ ರಾಜ್ಯದಲ್ಲಿ ಹೊಸದಾಗಿ 10 ಪಕ್ಷಗಳು ಹುಟ್ಟಿಕೊಂಡಿವೆ. ಇದರಲ್ಲಿ “ಕಲ್ಯಾಣ ಕ್ರಾಂತಿ ಪಾರ್ಟಿ’, ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ, ಓಟರ್ ಇಂಡಿಪೆಂಡೆಂಟ್ ಪಾರ್ಟಿ, ರೈತ ಭಾರತ ಪಾರ್ಟಿ, ಕರ್ನಾಟಕ ಕಾರ್ಮಿಕ ಪಕ್ಷ, ಯೂತ್ ಇಂಡಿಯಾ ಪೀಸ್ ಪಾರ್ಟಿ, ದಿಗ್ವಿಜಯ ಭಾರತ ಪಾರ್ಟಿ ಹಾಗೂ ಭಾರತೀಯ ಬೆಳಕು ಪಾರ್ಟಿ ಪ್ರಮುಖ ಪಕ್ಷಗಳು.
ಅಭ್ಯರ್ಥಿಗಳು ಸಂಖ್ಯೆಯೂ ಏರಿಕೆ: 2014ರ ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಒಟ್ಟು 435 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಈ ಬಾರಿ 478 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ಬಾರಿ ಬಿಜೆಪಿ, ಕಾಂಗ್ರೆಸ್ ಎಲ್ಲ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಈ ಬಾರಿ ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇರುವುದರಿಂದ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಆಗಿರುವುದರಿಂದ ಕಾಂಗ್ರೆಸ್ ಪಕ್ಷ 21 ಕ್ಷೇತ್ರಗಳಲ್ಲಿ ಜೆಡಿಎಸ್ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
* ರಫೀಕ್ ಅಹ್ಮದ್