Advertisement

ಪದ್ಯ ಮೇಳ

06:00 AM Nov 01, 2018 | |

ಅಳುವ ಮಕ್ಕಳನ್ನು ಸುಮ್ಮನಾಗಿಸಿದ ಪದ್ಯಗಳಿವು. ಹಠ ಹಿಡಿದ ಮಕ್ಕಳಿಗೆ ತುತ್ತು ಉಣ್ಣಿಸಿದ ಪದ್ಯಗಳಿವು. ತಾನಾಗೆ ಹಾಡಿಸಿಕೊಂಡು ಹೋಗುವ ಸಾಮರ್ಥ್ಯ ಇವುಗಳಿಗೆ ಸಿದ್ದಿಸಿದೆ. ಹೀಗಾಗಿಯೇ ಬಾಲ್ಯದಲ್ಲಿ ಒಮ್ಮೆ ಮಾತ್ರ ಓದಿದ್ದರೂ ಇಂದಿಗೂ ಎಂದಿಗೂ ನೆನಪಲ್ಲಿರುವುದು. ಇಲ್ಲಿನ ಪದ್ಯಗಳನ್ನು ಓದುತ್ತಾ ಹೋದಂತೆ ಕಚಗುಳಿಯಿಟ್ಟಂಥಾ ಅನುಭವವಾದರೆ ಕ್ಷಮಿಸಿ.

Advertisement

ನಮ್ಮ ಮನೆಯ ಸಣ್ಣ ಪಾಪ

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು

Advertisement

ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು
ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು

ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು
ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು

ರಚನೆ: ಜಿ. ಪಿ. ರಾಜರತ್ನಂ (ರತ್ನ)

ತುತ್ತೂರಿ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ

ಸ-ರಿ-ಗ-ಮ-ಪ-ದ-ನಿ-ಸ ಊದಿದನು
ಸ-ನಿ-ದ-ಪ-ಮ-ಗ-ರಿ-ಸ ಊದಿದನು

ತನಗೇ ತುತ್ತೂರಿ ಇದೆಯೆಂದ;
ಬೇರಾರಿಗು ಅದು ಇಲ್ಲೆಂದ

ತುತ್ತೂರಿ ಊದುತ ಕೊಳದ ಬಳಿ;
ಕಸ್ತೂರಿ ನಡೆದನು ಸಂಜೆಯಲಿ;
ಜಂಭದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ;
ಗಂಟಲು ಕಟ್ಟಿತು ನೀರೂರಿ

ಸ-ರಿ-ಗ-ಮ ಊದಲು ನೋಡಿದನು;
ಗ-ಗ-ಗ-ಗ ಸದ್ದನು ಮಾಡಿದನು

ಬಣ್ಣವು ನೀರಿನ ಪಾಲಾಯ್ತು;
ಜಂಭದ ಕೋಳಿಗೆ ಗೋಳಾಯ್ತು

– ಜಿ. ಪಿ. ರಾಜರತ್ನಂ 

ನಂ ಚಿಕ್ಕ

ಎಲ್ಲರಿಗಣ್ಣ ನಂ ಚಿಕ್ಕ
ಲೆಕ್ಕ ಅಂದರೆ ಬಲು ದುಃಖ!

ಕೂಡುವುದೆಲ್ಲ ಕವಡೆ ಕಲ್ಲು
ಕಳೆಯುವುದೆಲ್ಲ ಪುಸ್ತಕ ಬಳಪ
ಗುಣಿಸುವುದೆಲ್ಲ ಗೋಡೆಯ ಚಿತ್ರ
ಭಾಗ್ಸೋದೆಲ್ಲ ಬಾಯಿಯ ಒಳಗೆ!

ಜೇಬಿನ ತುಂಬ ರೂ. ಆ ಪೈ.!
ಎಲ್ಲಿತ್ತೆನೆ ಬಾಯ್ಬಿಟ್ಟರೆ ಸೈ!

ಬೀದಿಯ ಕುಣಿತ
ಚಿಕ್ಕನ ಗಣಿತ
ಮನೆಯಲಿ ಜೋರು ಕೈಯಿ- ಬಾಯಿ;
ಪರೀಕ್ಷೆಯಲ್ಲಿ ಕುಂಬಳ ಕಾಯಿ!

ಎಲ್ಲರಿಗಣ್ಣ ನಂ ಚಿಕ್ಕ
ಲೆಕ್ಕ ಅಂದರೆ ಬಲು ದುಃಖ!

– ಎಂ.ವಿ. ಸೀತಾರಾಮಯ್ಯ

ಅರ್ಧಚಂದ್ರ

ದೇವರ ಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟಮ್ಮಾ!

ದಿನದಿನ ನೋಡುವೆ, ದಿನವೂ ಕರಗುತ
ಎರಡೇ ವಾರದೊಳಳಿಯುವುದು!
ಮತ್ತದು ದಿನದಿನ ಹೆಚ್ಚುತ ಬಂದು 
ಎರಡೇ ವಾರದಿ ಬೆಳೆಯುವುದು!

ಅಕ್ಷಯವಾಗಿಹ ಪೆಪ್ಪರಮೆಂಟದು ನನಗೂ ದೊರಕುವುದೇನಮ್ಮಾ ?
ನೀನೂ ದೇವರ ಬಾಲಕನಾಗಲು
ನಿನಗೂ ಕೊಡುವನು, ಕಂದಯ್ಯ!

ದೇವರ ಬಾಲಕನಾಗಲು ಒಲ್ಲೆ:
ಆತನ ಮೀರಿಹೆ ನೀನಮ್ಮಾ!
ತಾಯಿಯನಗಲಿಸಿ ದೇವರ ಹಿಡಿಸುವ 
ಪೆಪ್ಪರಮೆಂಟು ಬೇಡಮ್ಮಾ!

– ಕುವೆಂಪು

ಅಜ್ಜನ ಕೋಲಿದು ನನ್ನಯ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ
ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ

ಕಾಲಿಲ್ಲದೆಯೇ ನಡೆಯುವ ಕುದುರೆ
ನಾಲನು ಬಡಿಸದ ಜೂಲವ ಹೊದಿಸದ
ಲಾಲನೆ ಪಾಲನೆ ಬಯಸದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ

ಚಂದಪ್ಪನಿಗೆ ಚಿಗರೆಯೆ ಕುದುರೆ
ಮಾದೇವನಿಗೆ ನಂದಿಯೆ ಕುದುರೆ
ರಾಮಚಂದ್ರನಿಗೆ ಹನುಮನೆ ಕುದುರೆ
ಹೊಟ್ಟೆಯ ಗಣಪಗೆ ಇಲಿಯೆ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ

ನಿಂತರೆ ನಿಲ್ಲುವ ಒಳ್ಳೆಯ ಕುದುರೆ
ಓಡಿದರೋಡುವ ನನ್ನಿಯ ಕುದುರೆ
ಕಾಡದ ಬೇಡದ ಕರುಳಿನ ಕುದುರೆ
ನೋಡಲು ಬಿಡದಿಹ ಬೆತ್ತದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ

ಅರಬರ ದೇಶದಿ ದೊರೆಯದ ಕುದುರೆ
ಕಾರೇವಾಡದಿ ಕಾಣದ ಕುದುರೆ
ಅರಸು ಮಕ್ಕಳಿಗು ಸಿಕ್ಕದ ಕುದುರೆ
ನನಗೇ ಸಿಕ್ಕಿದ ನನ್ನೀ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ

– ಸಿದ್ದಯ್ಯ ಪುರಾಣಿಕ

Advertisement

Udayavani is now on Telegram. Click here to join our channel and stay updated with the latest news.

Next