Advertisement

ದೇಶಕ್ಕಾಗಿ ಪ್ರಾಣ ಕೊಡುವುದಕ್ಕಿಂತ ಕೆಲಸ ಮಾಡುವುದು ಮುಖ್ಯ: ಸಿಎಂ ಬೊಮ್ಮಾಯಿ

12:45 PM Jan 16, 2023 | Team Udayavani |

ಧಾರವಾಡ: ದೇಶಕ್ಕಾಗಿ ಪ್ರಾಣ ಕೊಡುತ್ತೇವೆ ಎನ್ನುವ ಕಾಲ ಹೋಗಿದ್ದು, ಈಗ ದೇಶಕ್ಕಾಗಿ ಕೆಲಸ ಮಾಡುವ ಕಾಲ ಬಂದಿದೆ. ಯುವಕರು ಇತ್ತ ಚಿತ್ತ ಹರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು‌.

Advertisement

ಇಲ್ಲಿನ ಕೃಷಿ ವಿವಿ ಯಲ್ಲಿ ನಡೆದ 26ನೇ ರಾಷ್ಟೀಯ ಯುವ ಜನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತೀಯ ಯುವಕರ ಬುದ್ದಿಮತ್ತೆ ಜಗತ್ತಿನಲ್ಲಿ ಬೇರೆ ಯಾರಿಗೂ ಇಲ್ಲ. ಇದು ನಮ್ಮ ಸಂಸ್ಕೃತಿಯಿಂದ ನಮಗೆ ಬಂದಿದೆ. ಗೆದ್ದೆ ಗೆಲ್ಲುವೆವು ಎನ್ನುವ ಆತ್ಮ ವಿಶ್ವಾಸದೊಂದಿಗೆ ಯುವಕರು ಮುನ್ನಡೆಯಬೇಕು ಎಂದರು.

ವಿಶ್ವದಲ್ಲಿ ಅತೀ ಹೆಚ್ಚು ಯುವಕರನ್ನು ದೇಶ ಹೊಂದಿದೆ. ಹಿಂದೆ ಜನಸಂಖ್ಯೆ ಹೊರೆ ಎಂದು ಭಾವಿಸಲಾಗಿತ್ತು. ಆದರೆ ಪ್ರಧಾನಿ ಮೋದಿ ಅವರು ಇದನ್ನು ಶಕ್ತಿಯಾಗಿ ಪರಿವರ್ತಿ ಸುವ ಕನಸು ಕಂಡರು ಎಂದರು.

ಜೀವನದಲ್ಲಿ ಯುವಕರಾಗಿರುವುದು ಸೊಗಸು. ಈಗಲೇ ಇದನ್ನು ಆನಂದಿಸಬೇಕು. ಆದರೆ ಅದು ಕೆಲಸ, ಕನಸು ಎಲ್ಲದರಲ್ಲೂ ಇರಬೇಕು. ಮೌಂಟ್ ಎವರೆಸ್ಟ್ ಹತ್ತುವ ಕನಸು ತೇನ್ ಸಿಂಗ್ ಚಿಕ್ಕವನಿದ್ದಾಗಲೆ ಕಂಡಿದ್ದ. ಅದನ್ನು ಆತ ಇಡೇರಿಸಿಕೊಂಡ. ವಿವಿಧ ರಾಜ್ಯಗಳಿಂದ ಬಂದಿದ್ದೀರಿ. ವಿಭಿನ್ನತೆ ಇದ್ದರೂ ಭಾರತ ಮಾತೆ ಎನ್ನುವ ಶಬ್ದ ಎಲ್ಲರನ್ನು ಒಟ್ಟುಗೂಡಿಸುತ್ತದೆ ಎಂದರು.

Advertisement

ಯುವ ಜನೋತ್ಸವ ಅದ್ಬುತವಾಗಿ ಮೂಡಿ ಬಂದಿದೆ. ಆರು ದಿನ ಕರ್ನಾಟಕದ ಆತಿಥ್ಯ ಪಡೆದ ಎಲ್ಲರೂ ಆರು ಕನ್ನಡ ಶಬ್ದ ಕಲಿತು ನನಗೆ ಕಳುಹಿಸಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ:ಗಾಂಧಿ ಕುಟುಂಬದ ಮನೆ ಬಾಗಿಲು ಕಾಯುವ ಖರ್ಗೆಗೆ ಜನಪರ ಕಾರ್ಯಕ್ರಮ ಮಾಡಿ ಗೊತ್ತಿಲ್ಲ: ಪಿ.ರಾಜೀವ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ದಲ್ಲಿ ಯುವಜನೋತ್ಸವ ಯಶಸ್ವಿಯಾಗಿದೆ. ಇದಕ್ಕೆ ಸಿಎಂ ಬೊಮ್ಮಾಯಿ ಅವರು ಉತ್ತಮ ಸಹಕಾರ ನೀಡಿದ್ದಾರೆ. ಉತ್ಸವದಲ್ಲಿ ಪಾಲ್ಗೊಂಡ ಯುವಕರಿಗೆ ಇದು ಸ್ಮರಣೀಯ ಎಂದರು.

ಕೇಂದ್ರ ಯುವ ಸಬಲೀಕರಣ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ,  ಯುವಕರಿಗೆ ಇದೊಂದು ಉತ್ತಮ ವೇದಿಕೆ ಇಲ್ಲಿ ಕಲಿತದ್ದೆಲ್ಲವು ಜೀವನ ಪರ್ಯಂತ ಉಪಯೋಗಕ್ಕೆ ಬರುತ್ತದೆ. ಭಾವೈಕ್ಯತೆ ಭಾವ ಮುಡಿಸುವ ಕಾರ್ಯ ಯುವಜನೋತ್ಸವದಲ್ಲಿ ನಡೆದಿದೆ.  ಪ್ರಧಾನಿ ಮೋದಿ ಅವರು ಓಲಂಪಿಕ್ಸ್ ನಲ್ಲಿ ಗೆದ್ದವರಷ್ಟೆ ಅಲ್ಲ ಸೋತವರನ್ನು ಹುರುದುಂಬಿಸಿದರು. ಜೀವನದಲ್ಲಿ ತೊಂದರೆಗಳು ಬರುತ್ತವೆ. ಅವೆಲ್ಲವನ್ನು ಮೆಟ್ಟಿ ನಿಲ್ಲಬೇಕು. ಕೋವಿಡ್ ಸಂದರ್ಭ ನಮಗೆ ಅನೇಕ ಸವಾಲುಗಳು ಇದ್ದವು. 140 ಕೋಟಿ ಜನರು ಇರುವ ದೇಶವನ್ನು ಮೋದಿ ಮುನ್ನಡಿಸಿ ಆರ್ಥಿಕವಾಗಿ ಸಬಲತೆ ಕಾಯ್ದುಕೊಂಡರು ಎಂದರು.

ಯುವಜನೊತ್ಸವದಲ್ಲಿ ಪಾಲ್ಗೊಂಡಿದ್ದ ಲಡಾಖ್ ನ ಯುವತಿ ಮಾಂಸುವಾ, ಮಾತನಾಡಿ, ಯುವಜನೋತ್ಸವ ಖುಷಿ ಕೊಟ್ಟಿದೆ. ಇಡೀ ಭಾರತ ಶ್ರೇಷ್ಠ ಎನ್ನುವುದು ಸಾಬೀತಾಗಿದೆ. ದೇಶದ ತುತ್ತ ತುದಿಯ ಭಾಗದಿಂದ ಬಂದ ನನಗೆ ಸಮಗ್ರ ಭಾರತ ದರ್ಶನವಾಯಿತು ಎಂದರು.

ಸಿಕ್ಕಿಂ ನ ಯುವಕ ಬೀಮ್ ಸುಬಾ ಮಾತನಾಡಿ, ಇಲ್ಲಿಗೆ ಬರುವ ಮುಂಚೆ ಭಾರತ ಅಷ್ಟೆ ಮನಸ್ಸಿನಲ್ಲಿ ಇತ್ತು. ಯುವಜನೋತ್ಸವದಲ್ಲಿ ಭಾಗಿಯಾದ ನಂತರ ಭಾರತ ಶ್ರೇಷ್ಠ ಭಾರತ ಎಂಬುದು ಮನದಟ್ಟಾಯಿತು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿಭಿನ್ನ ರಾಜ್ಯಗಳ 19 ಯುವಕ-ಯುವತಿಯರು ಮತ್ತು 6 ಸಂಘ-ಸಂಸ್ಥೆ ಗಳಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯಪಾಲರಾದ ಥಾವರ ಚಂದ ಗೆಹ್ಲೊಟ್, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಕ್ರೀಡಾ ಸಚಿವ ಡಾ.ನಾರಾಯಣ ಗೌಡ, ಮೇಯರ್ ಈರೇಶ ಅಂಚಟಗೇರಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next