Advertisement

ಅದೊಂದು ಅವಿಸ್ಮರಣೀಯ ಪ್ರವಾಸ…!

08:18 AM Sep 28, 2019 | sudhir |

ವಿದ್ಯಾರ್ಥಿ ಜೀವನವೇ ಒಂದು ಪ್ರೆಶ್ನೆಯ ಮಾಲಿಕೆ. ಪರೀಕ್ಷೆಯ ಮೊದಲು ಒಂದು ರೀತಿಯ ಆತಂಕ. ಪರೀಕ್ಷೆಯ ನಂತರ ಏನು ಮಾಡುವುದು? ಎಂಬ ಯೋಚನೆ. ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷಾ ತಯಾರಿಗಿಂತ ಹೆಚ್ಚಾಗಿ ರಜೆಯ ಮಜವನ್ನು ಸವಿಯುವ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ನಮಗೂ ಪರೀಕ್ಷೆಗಳು ಮುಗಿದಿತ್ತು. ಬಂಗಾರದ ಪಂಜರದಿಂದ ಸ್ವತಂತ್ರಗೊಂಡ ಗಿಳಿಯಂತಾಗಿತ್ತು ನಮ್ಮ ಸ್ಥಿತಿ. ಆರು ತಿಂಗಳಿನಲ್ಲಿ ಅಧ್ಯಾಪಕರು ಮಾಡಿದ ಪಾಠಗಳನ್ನು ಒಂದೇ ರಾತ್ರಿಯಲ್ಲಿ ತಲೆಗೆ ತುಂಬಿಸಿಕೊಳ್ಳುವ ಪ್ರಯತ್ನದೊಂದಿಗೆ ಹೇಗೋ ಪರೀಕ್ಷೆಯನ್ನು ಮಗಿಸಿದ್ದೆವು.

Advertisement

ಪರೀಕ್ಷೆಗಳು ಮುಗಿದು ನಾಲ್ಕು ದಿನಗಳಾಗಿದ್ದವು. ಇನ್ನೇನು ಮಾಡುವುದು ಎಂಬ ಯೋಚನೆಯಲ್ಲಿರುವಾಗಲೇ ಗೆಳತಿ ಶಿಲ್ಪಾ ಅವಳ ಮನೆಗೆ ಆಹ್ವಾನಿಸಿದ್ದಳು. ಮೂರು ವರ್ಷ ಜೊತೆಯಾಗಿ ಕಳೆದ ಅವಿಸ್ಮರಣೀಯ ಗಳಿಗೆಯನ್ನು ಮತ್ತೆ ನೆನಪಿನ ಪಟದಲ್ಲಿಡಲು ಅದೊಂದು ಸುವರ್ಣವಕಾಶವಾಗಿತ್ತು. ಮುಂದೆ ನಾವು ಆಗಾಗ್ಗೆ ಭೇಟಿಯಾಗಲು ಸಾಧ್ಯವಿಲ್ಲದ ಕಾರಣ ಈ ಪ್ರವಾಸವನ್ನು ಆನಂದದಾಯಕವಾಗಿಸಲು ಏಳು ಸ್ನೇಹಿತರ ಜೊತೆ ಗುಂಪು ಮುಖ ಮಾಡಿದ್ದು ಹೊರನಾಡಿನ ಕಡೆಗೆ.

ಪಶ್ಚಿಮ ಘಟ್ಟಗಳ ಮಡಿಲಲ್ಲಿ, ಭದ್ರಾ ನದಿಯು ಹರಿಯುವ ಹೊರನಾಡು ಒಂದು ಸುಂದರ ಸ್ಥಳ. ಹೊರನಾಡಿನಲ್ಲಿರುವ ಅನ್ನಪೂರ್ಣೆಶ್ವರಿ ದೇವಾಲಯದಿಂದಾಗಿ ಇಂದು ಒಂದು ಪ್ರೇಕ್ಷಣೀಯ ಸ್ಥಳವಾಗಿ ಮತ್ತು ವಿವಿಧೆಡೆಯಿಂದ ಪ್ರವಾಸಿಗರು ಬರುವ ಧಾರ್ಮಿಕ ಸ್ಥಳವಾಗಿ ಹೆಸರುವಾಸಿಯಾಗಿದೆ. ನಮ್ಮ ಗೆಳೆಯರ ಗುಂಪು ಮೊದಲು ಹೊರನಾಡು ಅನ್ನಪೂರ್ಣೇಶ್ವರಿಯನ್ನು ಕಣ್ತುಂಬಿಕೊಂಡು ಪ್ರಸಾದವನ್ನು ಸ್ವೀಕರಿಸಿದೆವು. ಗೆಳತಿಯ ಮನೆ ಹೊರನಾಡಿನಿಂದ ಸರಿಸುಮಾರು ಇಪ್ಪತ್ತು ಕಿ.ಮೀ ದೂರದಲ್ಲಿತ್ತು. ಅದು ಕೂಡ ಹಳ್ಳಿಗಾಡು ಪ್ರದೇಶ. ಸುತ್ತಲೂ ವನದೇವಿ ಹಸಿರು ಸೀರೆಯನ್ನುಟ್ಟು ಪವಡಿಸಿದ್ದಳು. ಕಣ್ಣನ್ನು ಎಷ್ಟೇ ದೂರ ಹಾಯಿಸಿದರೂ ಮರ, ಗಿಡ, ಬೆಟ್ಟ, ಗುಡ್ಡಗಳ ಹೊರತಾಗಿ ಬೇರೇನೂ ಇಲ್ಲ. ಆ ದಾರಿಯಲ್ಲಿ ಹೋಗಬೇಕಾದರೆ ಆಟೋ ಇಲ್ಲವೇ ಪಿಕ್‌-ಅಪ್‌ ಗಾಡಿಯನ್ನು ಅವಲಂಬಿಸಬೇಕಿತ್ತು.

ಕ್ಯಾತನಮಕ್ಕಿ ಬೆಟ್ಟ ಒಂದು ಸುಂದರ ಪ್ರವಾಸಿ ತಾಣ ಎಂದು ಗೆಳತಿ ಮೊದಲೇ ಹೇಳಿದ್ದರಿಂದ ಎಲ್ಲರೂ ಬೆಟ್ಟ ಹತ್ತಲೂ ತೀರಾ ಉತ್ಸುಕರಾಗಿದ್ದರು. ಆದರೇ ನಡೆದುಕೊಂಡು ಹೋಗಲು ಭಾರೀ ತ್ರಾಸದಾಯಕವಾದ್ದರಿಂದ ನಮ್ಮನ್ನು ಕರೆದೊಯ್ಯಲು ಪಿಕ್‌-ಅಪ್‌ ಗಾಡಿ ಬಂದಿತು. ಲಗಾಮಿಲ್ಲದ ಕುದುರೆಯಂತೆ ಗಾಡಿ ಹತ್ತಿ ರಭಸವಾಗಿ ಬೀಸುವ ಗಾಳಿಗೆ ಮುಖ ಮೈಯೊಡ್ಡಿ ಕ್ಯಾತನಮಕ್ಕಿ ಬೆಟ್ಟದೆಡೆಗೆ ಹೊರಟೆವು. ಬಹಳ ಕಡಿದಾದ ಹಾಗೂ ಇಕ್ಕಟ್ಟಾದ ದಾರಿ ಅದು. ಅಲ್ಲಲ್ಲಿ ಭಯ ಹುಟ್ಟಿಸುವ ಇಳಿಜಾರು. ಗಾಡಿ ಒಂದೇ ಬದಿಗೆ ವಾಲಿದಾಗ ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. ಗುಂಡಿ ತುಂಬಿದ ರಸ್ತೆ ಕಂಡಾಗ ಮನ ದೇವರನ್ನು ನೆನೆಯುತ್ತಿತ್ತು. ಆದರೂ ಬೆಟ್ಟದ ತುದಿಗೆ ಹೋಗುವ ಆಸೆಯಿಂದ ಮೈ-ಕೈ ನೋವಾದರೂ ಸಹಿಸಿಕೊಂಡು ಎಲ್ಲರೂ ಕೇಕೆ ಹಾಕಿ ನಗುತ್ತಾ, ನಗಿಸುತ್ತಾ ಇದ್ದ ಸಂತೋಷದ ಕ್ಷಣಗಳು ಹೊಸ ಅನುಭವವನ್ನೇ ನೀಡಿದವು.

ದೀರ್ಘ‌ ಪ್ರಯಾಣದ ನಂತರ ಕೊನೆಗೂ ಕ್ಯಾತನಮಕ್ಕಿ ಬೆಟ್ಟದ ತುತ್ತತುದಿಗೆ ತಲುಪಿದ್ದೆವು. ಕಲಾಕಾರನೊಬ್ಬ ಹಚ್ಚಹಸಿರು ಬಣ್ಣವನ್ನು ಎಲ್ಲೆಡೆ ಚೆಲ್ಲಾಡಿದಂತೆ ಇತ್ತು ಆ ದೃಶ್ಯ ! ಆ ರಮಣೀಯ ತಾಣ ಕಂಡು ಮಾತೇ ಹೊರಡಲಿಲ್ಲ. ಸಾಲು ಸಾಲು ಬೆಟ್ಟ, ಸುಯ್ಯನೆ ಬೀಸುವ ಗಾಳಿ, ಹಾರಾಡುವ ಕೂದಲು, ಕಣ್ಣಿಗೆ ನಿಲುಕದ ಪ್ರಪಾತ, ಏಕಾಂತಕ್ಕೆ ಜಾರಿದ ಮನಸ್ಸು… ನಮ್ಮೊಂದಿಗೆ ನಮ್ಮ ಮನಸ್ಸು ಕೂಡಾ ಎತ್ತರಕ್ಕೆ ಏರಿತ್ತು. ನಮ್ಮೂರಿನ ಸೆಕೆಗೆ ಬೆಂದು ಬಸವಳಿದ ಜೀವಕ್ಕೆ, ತಡೆಯಿಲ್ಲದ ಬೀಸುವ ಗಾಳಿಯಿಂದ ಅಪಾರ ನೆಮ್ಮದಿ ದಕ್ಕಿತ್ತು. ಮನಸ್ಸಿನ ಯೋಚನೆಗಳು ಗಾಳಿಗೆ ಸಿಕ್ಕ ತರಗೆಲೆಯಂತೆ ಹಾರಾಡುತ್ತಿತ್ತು. ಇದನ್ನರಿತ ಸೂರ್ಯನೂ ಮೋಡಗಳೆಡೆಯಲ್ಲಿ ಮರೆಯಾದ.

Advertisement

ಅದ್ಭುತ ಸನ್ನಿವೇಶ ಅದು! ಕೆಂಡದುಂಡೆಯಂತೆ ಹೊಳೆಯುವ ಸೂರ್ಯ ಮೋಡದೊಳಗೆ ತಾನೂ ಬೆರೆತಂತೆ ಮರೆಯಾಗುವ ದೃಶ್ಯವನ್ನು ನೋಡುತ್ತಾ ನಿಂತರೆ, ಕಣ್ಣನ್ನು ಬೇರೆಡೆಗೆ ಹಾಯಿಸಲು ಮನಸೇ ಆಗದು.

ಹಸಿರು ಮೈ ತುಂಬಿಕೊಂಡ ಪರ್ವತ ಶ್ರೇಣಿಯನ್ನು ನೋಡುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ. ಸಂಜೆಯಾದರೂ ಅಲ್ಲಿಂದ ಕದಲಲು ಮನಸ್ಸು ಒಪ್ಪಲಿಲ್ಲ. ಕೊನೆಗೆ ಒಲ್ಲದ ಮನಸ್ಸಿನಿಂದಲೇ ಅಲ್ಲಿಂದ ಮನೆಯತ್ತ ಮುಖ ಮಾಡಿ, ಮತ್ತೆ ಅದೇ ಕಡಿದಾದ ದಾರಿಯಲ್ಲಿ ಗೆಳತಿಯ ಮನೆಗೆ ತಲುಪಿದೆವು. ಅದೊಂದು ಅವಿಸ್ಮರಣೀಯ ಪ್ರವಾಸ ಇಂದಿಗೂ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಕ್ಯಾತನಮಕ್ಕಿಗೆ ಹೋಗುವ ದಾರಿ:
ಕಳಸದಿಂದ ಹೊರನಾಡು ಮಾರ್ಗ,
ಚಿಕ್ಕಮಗಳೂರಿನಿಂದ 116 ಕಿ. ಮೀ
ಬೆಂಗಳೂರಿನಿಂದ 401 ಕಿ. ಮೀ

– ಟಿ. ವರ್ಷಾ ಪ್ರಭು

ಪ್ರಥಮ ಎಂಸಿಜೆ
ಎಸ್‌.ಡಿ.ಎಂ ಸ್ನಾತಕೋತ್ತರ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next