Advertisement
ಕೊಲೆಗಾರನೋರ್ವನು ಕೊಲೆಯಾದವನ ಭೌತಿಕ ಚೌಕಟ್ಟನ್ನು ನಾಶಗೊಳಿಸುತ್ತಾನೆ. ಆದರೆ ಅತ್ಯಾಚಾರಿಯು ಅಸಹಾಯಕ ಹೆಣ್ಣಿನ ಆತ್ಮವನ್ನು ಅವಮಾನಿಸುತ್ತಾನೆ, ಅಲ್ಲದೆ ಕಲುಷಿತ ಗೊಳಿಸುತ್ತಾನೆ ಎಂಬುದೊಂದು ಅತ್ಯಾಚಾರದ ಕುರಿತಾದ ಪ್ರಸಿದ್ಧ ಉದ್ಧರಣ. ಮಹಿಳೆಯರ ಮೇಲೆ ಲೈಂಗಿಕ ದಾಳಿ ನಮ್ಮ ದೇಶದಲ್ಲಿ ಒಂದು ಸಾಮಾನ್ಯ ದಿನಚರಿಯ ರೀತಿಯಲ್ಲಿ ನಡೆಯುತ್ತಿದೆ. ಲೈಂಗಿಕ ಪೀಡನೆ, ಚುಡಾಯಿಸುವಿಕೆ, ಬಾಲಕಿಯರ ಲೈಂಗಿಕ ದುರಾಚಾರ, ಅತ್ಯಾಚಾರ, ವೈವಾಹಿಕ ಅತ್ಯಾಚಾರ ಮತ್ತು ಗೃಹಕೃತ್ಯದ ಹಿಂಸೆ ಇತ್ಯಾದಿಗಳನ್ನು ಲೈಂಗಿಕ ದಾಳಿ ಎಂದು ಪರಿಗಣಿಸಲಾಗಿದೆ. ಈ ಪೈಕಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರವು ಹೇಯ ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆ 375ರಂತೆ ಅತ್ಯಾಚಾರ ಎಂದರೆ ಪುರುಷನೋರ್ವನು ಮಹಿಳೆಯ ಒಪ್ಪಿಗೆಯಿಲ್ಲದೆ, ಕಾನೂನು ಬಾಹಿರವಾಗಿ ಲೈಂಗಿಕ ಕ್ರಿಯೆಗೆ ಪ್ರಯತ್ನಿಸುವುದು. ಅತ್ಯಾಚಾರ ಕ್ಕೊಳಗಾದ ಮಹಿಳೆಯು ಭಯದಿಂದ, ಖನ್ನತೆಯಿಂದ, ಪಾಪಪ್ರಜ್ಞೆಯಿಂದ, ಸಾಮಾಜಿಕ ಕಳಂಕಕ್ಕೆ ಹೆದರಿ ಕೆಲವೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸುವುದು ಇದೆ. ಅಂತೂ ಅವಳ ಬದುಕು ಕರುಣಾಜನಕವಾಗಿ ಇರುತ್ತದೆ.
Related Articles
Advertisement
ಭಾರತೀಯ ನ್ಯಾಯಾಂಗ ವ್ಯವಸ್ಥೆಯು ನಿಧಾನಗತಿಯುಳ್ಳದ್ದು. ಅತ್ಯಾಚಾರದ ಪ್ರಕರಣಗಳು ದಾಖಲಾದರೂ ಅಪರಾಧ ನಿರ್ಣಯವು ಕೇವಲ 26 ಶೇಕಡದಷ್ಟು ನಡೆಯುತ್ತದೆ. ದಾಳಿಗೊಳಗಾದವಳ ಹೆಸರಿಗೆ ಕಳಂಕ ಅಂಟುವುದರಿಂದ ಮತ್ತು ಆಕೆಯನ್ನು ಸಂಧಾನಕ್ಕಾಗಿ ಮನವೊಲಿಸುವುದರಿಂದ ಇಂತಹ ಹೀನ ಅಪರಾಧಗಳು ಕಡಿಮೆಯಾಗಲಾರವು.
ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕೃತ್ಯಗಳು ನಡೆದಾಗ, ಆರೋಪಿಯ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ಒತ್ತಾಯಿಸಲಾಗುತ್ತದೆ. ಮೇಲಾಗಿ, ಅತ್ಯಾಚಾರಿಯನ್ನೇ ಮದುವೆ ಮಾಡಿಕೊಳ್ಳುವಂತೆ ಹುರಿದುಂಬಿಸಲಾಗುವುದು. ಬೇರಾರು ಮದುವೆ ಯಾಗಲಾರರು, ಇಡಿಯ ಕುಟುಂಬಕ್ಕೆ ಇದು ಅವಮಾನ ಎಂದು ಬೋಧಿಸಲಾಗುತ್ತದೆ. ಇತ್ತೀಚೆಗೆ ಫ್ಯಾಷನ್ ಹೆಸರಲ್ಲಿ ಮಹಿಳೆಯರು ಬಳಸುವ ಪೋಷಾಕು ಅತ್ಯಾಚಾರದ ಸಂಖ್ಯೆ ಹೆಚ್ಚಲು ಕಾರಣ ಎನ್ನುತ್ತವೆ ಕೆಲವು ವರದಿಗಳು. ಅಶ್ಲೀಲ ಸಿನಿಮಾಗಳು ಒಂದು ಕಾರಣ ಎನ್ನಬಹುದು.ಸಿನೆಮಾ ಕೊಡುಗೆ: ಬಹುತೇಕ ಹದಿಹರೆಯದವರ ರೋಲ್‌ಮಾಡೆಲ್ ಆಗಿರುವ ಸಿನೇಮಾಗಳ ವೀರ ನಾಯಕರುಗಳನ್ನು ಪುಂಸತ್ವ ಪ್ರದರ್ಶನ ಮತ್ತು ಹಿಂಸೆಯನ್ನು ಪ್ರದರ್ಶಿಸುವವರೆಂದು ತೋರಿಸುವುದು. ಪುರುಷತ್ವವನ್ನು ಬಿಂಬಿಸುವ ಅಷ್ಟೇ ಬಲಶಾಲೀ ಸ್ತ್ರೀ ಪಾತ್ರಗಳನ್ನು ಬಿಂಬಿಸುವುದಿಲ್ಲ. ಐಟಮ್ ನಂಬರ್ ಹಾಡು ನೃತ್ಯವನ್ನು ಚಿತ್ರದಲ್ಲಿ ತೋರಿಸುವುದರ ಮೂಲಕ ಹೈಪರ್ ಸೆಕ್ಸ್ ನ್ನು ತೋರಿಸಲಾಗುತ್ತದೆ. ಕಥೆಗೆ ಸಂಬಂಧವಿರದಿದ್ದರೂ ಹಾಡನ್ನು ಕೇವಲ ಮನೋರಂಜನೆಗಾಗಿ ಚಿತ್ರಿಸಲಾಗುತ್ತದೆ. ಐಟಂ ನಂಬರ್ ಹಾಡುಗಳಲ್ಲಿ ನಟಿಸುವವರನ್ನು ಐಟಮ್ ಗರ್ಲ್ಸ್ ಎಂದು ಸಂಬೋಧಿಸಲಾಗುತ್ತದೆ. ಹೆಣ್ಣನ್ನು ಒಂದು ಭೋಗದ ವಸ್ತುವೆಂದು ವೈಭವೀಕರಿಸಲಾಗುತ್ತದೆ. ಸಿನೇಮಾ ಯಶಸ್ಸು ಐಟಮ್ ನಂಬರ್‌ಗಳ ಮೇಲೆ ಅವಲಂಬಿಸಿದೆ. ಲಿಂಗ ಸಂಬಂಧಿ ಹಿಂಸೆ ಮತ್ತು ಲೈಂಗಿಕ ದಾಳಿ ಬಗ್ಗೆ ಮಾಧ್ಯಮಗಳು ಗಂಭೀರವಾಗಿ ಚರ್ಚೆಮಾಡುತ್ತಿರುವಂತೆಯೇ ಸಿನೆಮಾ ರಂಗ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ! ಅಂತಹ ಚಿತ್ರಗಳ ನಾಯಕ ನಟರು ಅತ್ಯಾಚಾರದ ಬಗ್ಗೆ ಮಾತನಾಡುತ್ತಾ ಅದು ಚಿತ್ರ ಪ್ರಚಾರದ ಭಾಗ ಎಂದು ಹೇಳುವುದೇ ವಿರುದ್ಧ ಪರಿಣಾಮಕವಾಗಿರುತ್ತದೆ. ಪರಿಹಾರಗಳೇನು?: ಮೊಟ್ಟಮೊದಲಿಗೆ ಲೈಂಗಿಕ ದಾಳಿ ವಿರುದ್ಧವಾಗಿ ಇರುವ ನಮ್ಮ ಕಾನೂನುಗಳು ಕಠಿಣವಾಗಬೇಕು. ಅತ್ಯಾಚಾರಿ ಆರೋಪಿಗೆ ಮರಣದಂಡನೆ ಶಿಕ್ಷೆಯಾಗಬೇಕು. ಪ್ರತಿ ಜಿಲ್ಲೆಯಲ್ಲೂ ಮಹಿಳೆಯರ ಸಮಸ್ಯೆಗಾಗಿ ಮಹಿಳಾ ಪೊಲೀಸ್ ತಂಡಗಳ ರಚನೆಯಾಗಬೇಕು. ಕ್ಷಿಪ್ರ ನ್ಯಾಯದಾನಕ್ಕೆ ಫಾಸ್ಟ್ ಟ್ರ್ಯಾಕ್‌ನಂತಹ ವಿಶೇಷ ಕೋರ್ಟುಗಳ ಸ್ಥಾಪನೆಯಾಗಬೇಕು. ರೇಪ್ ಕ್ರೆçಸಿಸ್ ಸೆಂಟರ್‌ಗಳನ್ನು ಸರಕಾರೇತರ ಸಂಸ್ಥೆಗಳು ತೆರೆಯು ವುದರ ಮೂಲಕ ಅತ್ಯಾಚಾರಕ್ಕೊಳಗಾದವರನ್ನು ಸಂತೈಸುವ ಮತ್ತು ಕಾನೂನಾತ್ಮಕವಾಗಿ ಪರಿಹಾರ ಸಿಗುವಲ್ಲಿ ಪ್ರಯತ್ನಿಸುವುದು. ಸ್ತ್ರೀಯರು ಅದ್ಭುತವಾದ ಸುಪುತ್ರಿಯರು, ಸಹೋದರಿಯರು, ಪತ್ನಿಯರು ಮತ್ತು ತಾಯಂದಿರು. ಅವರನ್ನು ಪ್ರೀತಿಸಬೇಕು, ಗೌರವಿಸಬೇಕು ಎಲ್ಲಕ್ಕೂ ಮಿಗಿಲಾಗಿ ಅವರನ್ನು ರಕ್ಷಿಸಬೇಕು. – ಜಲಂಚಾರು ರಘುಪತಿ ತಂತ್ರಿ