Advertisement

ಬಾಂಗ್ಲಾದೇಶ ಕಂಟ್ರಿ ಫೋಕಸ್‌: ನೋಡಲು ಮರೆಯಬೇಡಿ ‘ಇತಿ, ತೊಮಾರಿ ಢಾಕಾ‘

09:48 AM Jan 18, 2021 | Team Udayavani |

ಪಣಜಿ: ಬಾಂಗ್ಲಾದೇಶದಲ್ಲಿ ಯಾವ ಮಾದರಿಯ ಸಿನಿಮಾಗಳನ್ನು ಮಾಡುತ್ತಿರಬಹುದು? ಹತ್ತಿರದಲ್ಲೇ ಪಶ್ಚಿಮ ಬಂಗಾಳದ ಪ್ರಭಾವ ಹೊಂದಿರುವಲ್ಲಿ ಎಂಥ ಸಿನಿಮಾಗಳು ಬರುತ್ತಿರಬಹುದು? ಅಲ್ಲೂ ಹೊಸ ಅಲೆಯ ಸಿನಿಮಾಗಳೆಂಬುದು ಇದೆಯೇ? ಅಥವಾ ಕೇವಲ ಜನಪ್ರಿಯ ಸಿನಿಮಾಗಳ ಅಲೆಯೇ?

Advertisement

ಇವೆಲ್ಲ ಪ್ರಶ್ನೆಗಳಿಗೆ ಸಣ್ಣದೊಂದು ಉತ್ತರ ಈ ಬಾರಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಇಫಿ) ಸಿಗುತ್ತದೆ. ಯಾಕೆಂದರೆ, ಈ ಚಿತ್ರೋತ್ಸವದಲ್ಲಿ ಕಂಟ್ರಿ ಫೋಕಸ್‌ (ಒಂದು ನಿರ್ದಿಷ್ಟ ದೇಶದ ಕೆಲವು ಸಿನಿಮಾಗಳನ್ನು ತೋರಿಸುವುದು) ವಿಭಾಗದಡಿ ಪ್ರದರ್ಶಿತಗೊಳ್ಳುತ್ತಿರುವುದು ಬಾಂಗ್ಲಾದೇಶದ ಚಿತ್ರಗಳೇ.

ಒಟ್ಟು ನಾಲ್ಕು ಚಲನಚಿತ್ರಗಳು ಪ್ರದರ್ಶಿತಗೊಳ್ಳುತ್ತಿವೆ. ನಾಲ್ವರೂ ಪ್ರತಿಷ್ಠಿತ ನಿರ್ದೇಶಕರೇ. ತನ್ವೀರ್‌ ಮೊಕಮಲ್‌, ಜಹೀದೂರು ರಹೀಮ್‌ ಅಂಜನ್‌, ರುಬಾಯತ್‌ ಹೊಸೇನ್‌ ಹಾಗೂ ಹನ್ನೊಂದು ನಿರ್ದೇಶಕರು ರೂಪಿಸಿರುವ ಚಿತ್ರಗಳು ಪ್ರದರ್ಶಿತಗೊಳ್ಳುತ್ತಿವೆ.

ತನ್ವೀರ್‌ ಅವರ ‘ಜಿಂಬಂದೂಲಿ‘, ಜಹೀದೂರು ಅವರ ‘ಮೇಘ ಮಲ್ಹಾರ್‌’, ರುಬಾಯತ್‌ ರ ‘ಅಂಡರ್‌ ಕನ್‌ಸ್ಟ್ರಂಕ್ಚನ್‌’ ಹಾಗೂ ನೂಹಾಸ್‌ ಹುಮಾಯನ್‌. ಸೈಯದ್‌ ಅಹ್ಮದ್‌ ಶಾಕಿ, ರಹಾತ್‌ ರೆಹಮಾನ್‌ ಜಾಯ್‌, ರೊಬಿಯಲ್‌ ಅಲಾಂ, ಗೋಲಂಕಿಬ್ರಿ ಫರೂಕಿ, ಮಿರ್‌ ಮುಕ್ರಂ ಹೊಸೇನ್‌, ತನ್ವೀರ್ ಅಹ್ಸನ್‌, ಮಹಮುದೂಲ್‌ ಇಸ್ಲಾಂ, ಅಬ್ದುಲ್ಲಾ ಅಲ್‌ ನೂರ್‌, ಕೃಷ್ಣೇಂದ್ರು ಚಟ್ಟೋಪಾಧ್ಯಾಯ್‌ ಹಾಗೂ ಸೈಯದ್‌ ಸಲೇ ಅಹ್ಮದ್‌ ಸೋಬನ್‌ ಸಂಯುಕ್ತವಾಗಿ ನಿರ್ದೇಶಿಸಿರುವ ‘ಸಿನ್ಸಿಯರಲಿ ಯುವರ್ಸ್‌, ಡಾಕಾ‘ ಚಲನಚಿತ್ರ ಪ್ರದರ್ಶಿತಗೊಳ್ಳುತ್ತಿವೆ.

Advertisement

ಇದನ್ನೂ ಓದಿ:ಪಣಜಿ: ತೆರೆದುಕೊಂಡ ಚಿತ್ರ ಜಗತ್ತು ; ಎರಡನೇ ದಿನ ಪರವಾಗಿಲ್ಲ

ಮೊದಲ ಮೂರು ಚಿತ್ರಗಳು ಸ್ವತಂತ್ರ ನಿರ್ದೇಶಕರ ಪ್ರಯತ್ನಗಳಾದರೆ, ನಾಲ್ಕನೇ ಚಿತ್ರ ಸ್ವತಂತ್ರ ನಿರ್ದೇಶಕರ ಸಂಯುಕ್ತ ಪ್ರಯತ್ನ. ಸಂಪೂರ್ಣ ಪ್ರಯೋಗಶೀಲತೆಯದ್ದು. ‘ಇತಿ ತೊಮಾರಿ ಢಾಕಾ‘ 2018 ರಲ್ಲಿ ರೂಪಿತವಾದದ್ದು. ಹನ್ನೊಂದು ಮಂದಿ ನಿರ್ದೇಶಕರು ತಮ್ಮದೇ ಆದ ಕಥೆಯ ಎಳೆಯನ್ನು ವಿವರಿಸುತ್ತಾ ಸಿನಿಮಾವನ್ನು ಕಟ್ಟಿಕೊಟ್ಟಿರುವುದು ವಿಶೇಷ. ಕನ್ನಡದಲ್ಲೂ ಪುಟ್ಟಣ್ಣ ಕಣಗಾಲ್‌ರಂಥವರು ಕಥಾ ಸಂಗಮದಂಥ ಚಿತ್ರಗಳ ಮೂಲಕ ವಿವಿಧ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಇದು ಬಾಂಗ್ಲಾದೇಶದ ಮೊದಲ ಆಂಥಾಲಜಿ ಫಿಲ್ಮ್‌. ಒಂದು ವಿಷಯವನ್ನು ಆಧರಿಸಿ ವಿಭಿನ್ನ ಕಥೆಗಳ ಮೂಲಕ ಹಲವು ನಿರ್ದೇಶಕರು ಸಿನಿಮಾವನ್ನು ರೂಪಿಸುವ ಪ್ರಯತ್ನ.

ಜೈಪುರ್‌ ಅಂತಾರಾಷ್ಟ್ರೀಯ ಹನ್ನೊಂದನೆ ಸಿನಿಮೋತ್ಸವದಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥಾ ಪ್ರಶಸ್ತಿ ಬಂದಿದೆ. ನೆಟ್‌ ಫ್ಲಿಕ್ಸ್‌ ಒಟಿಟಿ ಫ್ಲಾಟ್‌ ಫಾರಂಗೆ ಸೇರಿದ ಬಾಂಗ್ಲಾದೇಶದ ಎರಡು ಚಿತ್ರಗಳಲ್ಲಿ ಇದೂ ಒಂದು. ಬಾಂಗ್ಲಾದೇಶದ ಢಾಕಾದಲ್ಲಿ ವಾಸಿಸುವ ಹನ್ನೊಂದು ಮಂದಿಗಳ ಜೀವನಕಥೆ. ಎಲ್ಲರೂ ತಮ್ಮದೇ ಮಿತಿಗಳಲ್ಲಿ, ಹೆಚ್ಚುಗಾರಿಕೆಯಲ್ಲಿ ಹೇಗೆ ಬದುಕುತ್ತಾರೆ? ಬದುಕನ್ನು ಅನುಭವಿಸುತ್ತಾರೆ ಎಂಬುದು ಒಟ್ಟೂ ಚಿತ್ರದ ಹಂದರ. 93 ನೇ ಆಸ್ಕರ್‌ ಅಕಾಡೆಮಿ ಪ್ರಶಸ್ತಿಗೆ ಬಾಂಗ್ಲಾದೇಶದಿಂದ ಅಧಿಕೃತವಾಗಿ ಕಳುಹಿಸಲ್ಪಟ್ಟ ಚಿತ್ರವಿದು.

ಒಟ್ಟೂ ಚಿತ್ರದಲ್ಲಿ ನಿರ್ದೇಶಕರು ರಾಜಧಾನಿ ಢಾಕಾ ಬಗೆಗಿನ ತಮ್ಮ ಒಲವನ್ನು, ಬೆರಗನ್ನು, ಅಚ್ಚರಿಯನ್ನು ಅಭಿವ್ಯಕ್ತಿಪಡಿಸಿದ್ದಾರೆ. ಜೀವನ್ಮುಖಿ ಮುಂಬಯಿಯ ಹಾಗೆ ನಗರವೊಂದು ಬದುಕನ್ನು ಕಟ್ಟಿಕೊಡುವ ಬಗೆಯನ್ನು ವಿವರಿಸುವುದು ಚಿತ್ರದ ನೆಲೆ.

ಸಿನಿಮಾ ರಂಗದಲ್ಲಿರುವ ಸಹ ನಟರ ಪಾತ್ರದ ಮೂಲಕ ಬದುಕು ಅನಾವರಣವಾದರೆ, ಮತ್ತೊಬ್ಬರಲ್ಲಿ ಭಗ್ನ ಪ್ರಣಯದ ಬಳಿಕ ಒಬ್ಬ ಹುಡುಗಿಯ ಮನೋಸ್ಥಿತಿ ಯುವಜನರ ನೆಲೆಯನ್ನು ಹೇಳುತ್ತದೆ. ಹಾಗೆಯೇ ಒಬ್ಬ ಯುವ ರೌಡಿಯ ಬದುಕೂ ಇಲ್ಲಿದೆ. ಸಿನಿಮಾದ ಧ್ವನಿ ಪರಿಣಿತನ ದೃಷ್ಟಿಯಲ್ಲಿ ಸಿನಿಮಾ ಅನಾವರಣಗೊಳ್ಳುವ ಒಂದು ಕಥೆಯೂ ಇದೆ. ಹೀಗೆ ಕಾರು ಚಾಲಕ, ಸಹಾಯ ಮಾಡಲು ಹೋದವರ ಅಸಹಾಯಕತೆ, ಮಧ್ಯಮ ವರ್ಗದ ಕುಟುಂಬಗಳ ಬದುಕು, ಇಬ್ಬರು ಅಪ್ರಾಮಾಣಿಕ ಉದ್ಯಮಿಗಳ ಕಥೆ-ಒಟ್ಟು ವಿವಿಧ ಸಂದರ್ಭ, ಸನ್ನಿವೇಶಗಳ ಮೂಲಕ ಒಂದು ನಗರದ ನಾನಾ ಮುಖಗಳನ್ನು ಚಿತ್ರ ಕಟ್ಟಿಕೊಡುತ್ತದೆ.

ನೋಡಲು ತಪ್ಪಿಸಿಕೊಳ್ಳದಂಥ ಚಲನಚಿತ್ರವಿದು.

Advertisement

Udayavani is now on Telegram. Click here to join our channel and stay updated with the latest news.

Next