Advertisement

ಐಟಿಐ ಆನ್‌ಲೈನ್‌ ಪರೀಕ್ಷೆಗೆ ಆಕ್ರೋಶ

09:09 PM Jan 22, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಯಾವುದೇ ಪೂರ್ವ ತಯಾರಿ ಇಲ್ಲದೇ ಐಟಿಐ ವಿದ್ಯಾರ್ಥಿಗಳಿಗೆ ಏಕಾಏಕಿ ಸಂಯೋಜನೆಯಡಿ ಆನ್‌ಲೈನ್‌ ಪರೀಕ್ಷೆ ನಡೆಸಲು ಮುಂದಾಗಿರುವ ತಾಂತ್ರಿಕ ಶಿಕ್ಷಣ ಇಲಾಖೆ ಧೋರಣೆ ಖಂಡಿಸಿ ಬುಧವಾರ ಜಿಲ್ಲೆಯ ವಿವಿಧ ಐಟಿಐ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‌ (ಎನ್‌ಎಸ್‌ಯುಐ) ನೇತೃತ್ವದಲ್ಲಿ ಜಿಲ್ಲೆಯ ಐಟಿ ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ಬಳಿಕ ನಗರದ ಹೊರ ವಲಯದ ಅಣಕನೂರು ಸಮೀಪ ಇರುವ ಜಿಲ್ಲಾಡಳಿತ ಭವನದ ಮುಂದೆ ಬೃಹತ್‌ ಪ್ರತಿಭಟನಾ ಧರಣಿ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು.

ತಯಾರಿ ಇಲ್ಲ: ಸಾಮಾನ್ಯವಾಗಿ ಐಟಿಐ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದು ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚು, ಆದರೆ ಯಾವುದೇ ಪೂರ್ವ ತಯಾರಿ ಇಲ್ಲದೇ ಆನ್‌ಲೈನ್‌ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮ ಸರಿಯಲ್ಲ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ವಾಪಸ್ಸು ಪಡೆಯಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

ತೊಂದರೆ: ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಕೆ.ಎನ್‌.ಮುನೀಂದ್ರ ಮಾತನಾಡಿ, ಆನ್‌ಲೈನ್‌ ಪರೀಕ್ಷೆ ಎದುರಿಸಲು ಸತತವಾಗಿ ಕಂಪ್ಯೂಟರ್‌ ಮತ್ತು ಫೋನ್‌ನಲ್ಲಿ ಅಭ್ಯಾಸ ನಡೆಸಬೇಕು. ಆದರೆ ಐಟಿಐ ವಿದ್ಯಾರ್ಥಿಗಳಿಗೆ ಈ ಬಗ್ಗೆ ಯಾವುದೇ ತರಬೇತಿ ನೀಡದೇ ಪರೀಕ್ಷೆ ಎದುರಿಸುವುದು ಕಷ್ಟವಾಗಲಿದೆ.

ಅಭ್ಯಾಸ ನಡೆಸಲು ಬಡ ಮತ್ತು ಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಂಪ್ಯೂಟರ್‌ ಸ್ಮಾರ್ಟ್‌ಫೋನ್‌ ಖರೀದಿಸಲು ಆಗುವುದಿಲ್ಲ. ಅಲ್ಲದೇ ಆನ್‌ಲೈನ್‌ ಪರೀಕ್ಷೆ ಎದುರಿಸಲು ತರಬೇತಿ ದೊರೆತಿಲ್ಲ. ಹೀಗಾಗಿ ಸರ್ಕಾರ ಏಕಾಏಕಿ ಕೈಗೊಂಡಿರುವ ಆನ್‌ಲೈನ್‌ ಪರೀಕ್ಷೆಯನ್ನು ರದ್ದುಗೊಳಿಸಿ ಹಿಂದಿನ ಪದ್ಧತಿಯಲ್ಲೇ ಪರೀಕ್ಷೆ ನಡೆಸಲು ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಕ್ತ ನಿರ್ದೇಶ ನೀಡಬೇಕೆಂದು ಆಗ್ರಹಿಸಿದರು.

Advertisement

ಜಿಲ್ಲಾಧಿಕಾರಿ ಬೇಟಿ: ಜಿಲ್ಲಾಡಳಿತ ಭವನದ ಎದುರು ಬೃಹತ್‌ ಸಂಖ್ಯೆಯಲ್ಲಿ ಐಟಿಐ ವಿದ್ಯಾರ್ಥಿಗಳು ಜಮಾಯಿಸಿ ತಾಂತ್ರಿಕ ಶಿಕ್ಷಣ ಇಲಾಖೆ ವಿರುದ್ಧ ನಡೆಸಿದ ಹೋರಾಟದ ವಿಷಯ ತಿಳಿದು ಜಿಲ್ಲಾಧಿಕಾರಿ ಆರ್‌.ಲತಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಅಲ್ಲದೇ ಎನ್‌ಎಸ್‌ಯುಐ ಮುಖಂಡರು ನೀಡಿದ ಮನವಿ ಸ್ವೀಕರಿಸಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ ನಂತರ ಐಟಿಐ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್‌ ಪಡೆದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಬಿ.ಎಸ್‌.ದೀಪಕ್‌, ವೆಂಕಟೇಶ್‌, ಮಂಜುನಾಥ, ಪ್ರವೀಣ್‌, ನಿಖೀಲ್‌, ಡಿ.ಎಸ್‌.ಸಂಜನಾ, ಎನ್‌ಎಸ್‌ಯುಐ ವಿದ್ಯಾರ್ಥಿಗಳು ಇದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮಾಂತರ ಠಾಣೆ ಪಿಎಸ್‌ಐ ಚೇತನ್‌ ಕುಮಾರ್‌ ಹಾಗೂ ಸಿಬ್ಬಂದಿ ಸೂಕ್ತ ಪೊಲೀಸ್‌ ಬಂದೋಬಸ್ತ್ ವಹಿಸಿದ್ದರು.

ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಐಟಿಐ ವಿದ್ಯಾರ್ಥಿಗಳಿಗೆ ಯಾವುದೇ ಪೂರ್ವ ತರಬೇತಿ ಇಲ್ಲದೇ ಆನ್‌ಲೈನ್‌ ಪರೀಕ್ಷೆ ನಡೆಸಲು ಆದೇಶಿಸಿರುವುದು ಸರಿಯಲ್ಲ. ಸರ್ಕಾರ ಐಟಿಐ ಕಾಲೇಜುಗಳಿಗೆ ಬೇಕಾದ ಸೌಲಭ್ಯ ಕೊಡದೇ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯವುದು ಹೇಗೆ?. ಕೂಡಲೇ ಇಲಾಖೆ ತಕ್ಷಣ ಆದೇಶ ಹಿಂಪಡೆಯಬೇಕು.
-ಕೆ.ಎನ್‌.ಮುನೀಂದ್ರ, ಎನ್‌ಎಸ್‌ಯುಐ ರಾಜ್ಯ ಸಂಚಾಲಕರು

ಐಟಿಐಗೆ ಈ ವರ್ಷದಿಂದ ಆನ್‌ಲೈನ್‌ ಪರೀಕ್ಷೆ ನಡೆಸಲು ಇಲಾಖೆ ಸೂಚಿಸಿದ್ದು ದಿಕ್ಕು ತೋಚದಂತಾಗಿದೆ. ಕಾಲೇಜಿನಲ್ಲಿ ಪೂರ್ವ ತರಬೇತಿ ನೀಡಿಲ್ಲ. ಏಕಾಏಕಿ ಆದೇಶ ಮಾಡಿರುವುದು ಸರಿಯಲ್ಲ. ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಲಾಖೆ ಆದೇಶ ವಾಪಸ್‌ ಪಡೆಯಬೇಕು.
-ಪ್ರವೀಣ್‌, ಐಟಿಐ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next