Advertisement

ಇಟಗಿ ಗ್ರಂಥಾಲಯ ಅವ್ಯವಸ್ಥೆ ಆಗರ

11:56 AM Dec 06, 2019 | Team Udayavani |

ಗಜೇಂದ್ರಗಡ: ಧಾರ್ಮಿಕವಾಗಿ ನಾಡಿನಾದ್ಯಂತ ಪ್ರಸಿದ್ಧಿಯಾದ ಇಟಗಿ ಗ್ರಾಮದ ಗ್ರಂಥಾಲಯ ಅವ್ಯವಸ್ಥೆ ಆಗರವಾಗಿದ್ದು, ಮೂಲ ಸೌಲಭ್ಯಗಳ ಕೊರತೆ ಜೊತೆ ಮೂಲೆ ಸೇರಿದ ಮುರಿದ ಕುರ್ಚಿಗಳಿಂದಾಗಿ ಓದುಗರಿಗೆ ತುಂಬ ಕಿರಿಕಿರಿಯಾಗುತ್ತಿದೆ.

Advertisement

ಧರ್ಮದೇವತೆ ಭೀಮಾಂಬಿಕಾ ದೇವಿ ಪುಣ್ಯಕ್ಷೇತ್ರವಾಗಿರುವ ಇಟಗಿ ಗ್ರಾಮದಲ್ಲಿನ ಜ್ಞಾನದೇಗುಲ ಸ್ಥಳೀಯ ಆಡಳಿತದಿಂದ ನಿರ್ಲಕ್ಷ್ಯ ಕ್ಕೊಳಗಾಗಿದೆ. ವಿದ್ಯುತ್‌, ಕುಡಿಯುವ ನೀರು, ಸಮರ್ಪಕ ಆಸನಗಳ ವ್ಯವಸ್ಥೆ ಸೇರಿ ಕನಿಷ್ಟ ಸೌಲಭ್ಯಗಳಿಲ್ಲದೇ ಅಕ್ಷರ ಭಂಡಾರದ ಸೌಲಭ್ಯ ಗ್ರಾಮಸ್ಥರಿಗೆ ಸಮರ್ಪಕವಾಗಿ ದೊರೆಯದಂತಾಗಿದೆ.

7 ಸೆಪ್ಟೆಂಬರ್‌ 2001ರಲ್ಲಿ ಗ್ರಾಮದ ಅನ್ನದಾನೇಶ್ವರ ಯುವಕ ಮಂಡಳದ ಕಟ್ಟಡದಲ್ಲಿ ಪ್ರಾರಂಭವಾಗಿರುವ ಗ್ರಂಥಾಲಯ ಬಳಿಕ ಗ್ರಾಪಂನ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾಹಿತ್ಯ, ಮಹಾತ್ಮರ ಜೀವನ ಚರಿತ್ರೆ, ಕಥೆ, ಕಾದಂಬರಿ ಒಳಗೊಂಡ ಹಲವಾರು ಬಗೆಯ 2000 ಪುಸ್ತಕಗಳಿವೆ.

ಆದರೆ ಪುಸ್ತಕಗಳನ್ನಿಡಲು ಕೌಂಟರ್‌ ನೀಡಿ ಎಂದು ಗ್ರಂಥಪಾಲಕರು ಮನವಿ ಮಾಡಿದಹಿನ್ನೆಲೆಯಲ್ಲಿ ಗ್ರಾಪಂ ಆಡಳಿತ ಕೌಂಟರ್‌ ಗಳನ್ನು ತಯಾರಿಸಿ ಕೊಟ್ಟಿದ್ದಾರೆ. ಆದರೆ ಕೌಂಟರ್‌ ನಿರ್ಮಿಸಿದವರಿಗೆ ಹಣ ಸಂದಾಯ ಮಾಡದಿರುವುದರಿಂದ ಈವರೆಗೂ ಕೌಂಟರ್‌ ಗಳನ್ನು ಗ್ರಂಥಾಲಯ ಸುಪರ್ದಿಗೆ ನೀಡಿಲ್ಲ. ಹೀಗಾಗಿ ಪುಸ್ತಕಗಳು ಮೂಲೆ ಸೇರಿವೆ. ಅಲ್ಲಲ್ಲಿ ಶಿಥಿಲವಾದ ಗೋಡೆ, ಮಳೆಯಿಂದ ಸೋರಿಕೆಯಾಗುವ ಭಯದಿಂದ ಟ್ರೆಜರಿ ಸೇರಿದ ಪುಸ್ತಕಗಳು, ತೀರ ಕಡಿದಾದ ಸ್ಥಳದಲ್ಲಿ ಹೆಚ್ಚು ಕುರ್ಚಿ ಅಥವಾ ಟೇಬಲ್‌ ಆಗಲಿ ಸರಿಯಾಗಿಡಲೂ ಸಾಧ್ಯವಾಗಿಲ್ಲ. ಜತೆಗೆ ಸಾರ್ವಜನಿಕರು ಕುಳಿತು ಓದಲು ಸ್ಥಳ ತೀರ ಇಕ್ಕಟ್ಟಾಗಿದೆ.

ಅನುದಾನದ ಕೊರತೆ: ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳಿಲ್ಲದಿರುವುದು ಒಂದೆಡೆಯಾದರೆ, ದಿನ ಪತ್ರಿಕೆಗಳಿಗೆ ಪ್ರತಿ ತಿಂಗಳು ಇಲಾಖೆಯಿಂದ ಕೇವಲ 400 ರೂ. ಮಾತ್ರ ಅನುದಾನ ನೀಡುತ್ತಿದ್ದಾರೆ. ಇದು ಸಹ ಕಳೆದ 2-3ತಿಂಗಳಿಂದ ವಿತರಣೆಯಾಗಿಲ್ಲ. ಇನ್ನೂ ಸ್ಟೇಷನರಿ ಖರೀದಿಗೆ ಹಣ ಗಗನ ಕುಸುಮವಾಗಿದೆ ಎನ್ನುತ್ತಾರೆ ಓದುಗರು.

Advertisement

ಗ್ರಾಪಂ ನಿರ್ಲಕ್ಷ್ಯ: ಟಗಿ ಗ್ರಾಪಂ ಆಡಳಿತ ಕೇವಲ ಜನರ ಮೂಲ ಸೌಲಭ್ಯ ನೀಡುವ ಕಾರ್ಯಕ್ಕೆ ಒತ್ತು ಕೊಡುವ ಜೊತೆಗೆ ಗ್ರಂಥಾಲಯ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಜನೋಪಕಾರ್ಯಕ್ಕೆ ಮುಂದಾದಲ್ಲಿ, ಗ್ರಾಮದಲ್ಲಿ ಮಾದರಿ ಗ್ರಂಥಾಲಯ ನಿರ್ಮಾಣ ಮಾಡುವುದರಲ್ಲಿ ಸಂದೇಹವೇ ಇಲ್ಲ ಎನ್ನುವುದು ಓದುಗರ ಅಭಿಲಾಷೆ.

ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ: ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕಾಗಿ ಜಾಗೆ ನೀಡುವ ಜೊತೆಗೆ ಗ್ರಾಮ ವಿಕಾಸ ಯೋಜನೆಯಡಿ 10 ಲಕ್ಷ ರೂ. ಅನುದಾನ ನೀಡುವುದಲ್ಲದೇ ಕಟ್ಟಡ ಕಾಮಗಾರಿ 2001ರಲ್ಲಿಯೇ ಆರಂಭಿಸಲಾಗಿತ್ತು. ಆದರೆ ಈವರೆಗೂ ಗ್ರಂಥಾಲಯ ಕಟ್ಟಡ ತಳಪಾಯ ಬಿಟ್ಟು ಮೇಲೇಳದ ಪರಿಣಾಮ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಈಗಲಾದರೂ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ಪೂರ್ಣಗೊಳಿಸಿ, ಓದುಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೂಲ ಸೌಲಭ್ಯ ಒದಗಿಸಲು ಮುಂದಾಗಬೇಕೆನ್ನುವುದು ಗ್ರಾಮಸ್ಥರ ಒತ್ತಾಸೆ.

 

-ಡಿ.ಜಿ. ಮೋಮಿನ್

Advertisement

Udayavani is now on Telegram. Click here to join our channel and stay updated with the latest news.

Next