ಬೇತಮಂಗಲ: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿವೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 60 ಸೀಟು ಗೆಲ್ಲುವುದು ಅನುಮಾನ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಟೀಕಿಸಿದರು.
ಗ್ರಾಮದ ಸಮೀಪದ ಸುಂದರಪಾಳ್ಯ ಗ್ರಾಮದ ಮುಸ್ಲಿಂ ಸಮುದಾಯದವರು ಹಮ್ಮಿಕೊಂಡಿದ್ದ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯ ಭಯದಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ ಯಾವುದೇ ರಾಷ್ಟ್ರೀಯ ಪಕ್ಷ 60-70 ಸೀಟು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.
ರಾಜ್ಯ ಬಿಜೆಪಿಯಲ್ಲಿ ಗಂಡಸರು ಇಲ್ಲ
ರಾಜ್ಯ ಬಿಜೆಪಿಯಲ್ಲಿ ಗಂಡಸರಿಲ್ಲದೆ ಪ್ರತಿ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಪ್ರಚಾರ ನಡೆಸಿ, ಗೆಲ್ಲಬೇಕಾದ ದುರದೃಷ್ಟ ಪಕ್ಷಕ್ಕೆ ಬಂದಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ. 60 ಸ್ಥಾನ ಗೆಲ್ಲಲು ಸಾಧ್ಯವಾಗದವರು ಮುಖ್ಯಮಂತ್ರಿಯಾಗಲು ಪೈಪೋಟಿಗೆ ಬಿದ್ದಿದ್ದಾರೆ ಎಂದು ಟೀಕಿಸಿದರು.